ಹಿರಿಯ ನಟಿ ವಿನಯಾಪ್ರಸಾದ್ ಅವರ ಪುತ್ರಿ ಪ್ರಥಮ ಖುಷಿಯಲ್ಲಿದ್ದಾರೆ. ಅವರ ಖುಷಿಗೆ ಕಾರಣ, “ಎಂಎಂಸಿಎಚ್’. ಹೌದು, ಈ ಚಿತ್ರದಲ್ಲಿ ನಾಲ್ವರು ನಾಯಕಿಯರ ಪೈಕಿ ಪ್ರಥಮ ಕೂಡ ಒಬ್ಬರು. ಚಿತ್ರ ಜುಲೈನಲ್ಲಿ ತೆರೆಗೆ ಬರಲಿದೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವ ಪ್ರಥಮ, ಈ ಮೂಲಕ ಇನ್ನಷ್ಟು ಗುರುತಿಸಿಕೊಳ್ಳುವ ನಂಬಿಕೆಯಲ್ಲಿದ್ದಾರೆ.
ಅದಕ್ಕೆ ಕಾರಣ, ಚಿತ್ರದ ಪಾತ್ರ. ಹೌದು, ಪ್ರಥಮ ಅವರಿಗಿಲ್ಲಿ ರಗಡ್ ಪಾತ್ರ ಸಿಕ್ಕಿದೆ. ಅದೊಂಥರಾ ರಫ್ ಅಂಡ್ ಟಫ್ ಹುಡುಗಿಯ ಪಾತ್ರ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ, ಮಾಲಾಶ್ರೀ ರೀತಿ ಫೈಟ್ ಮಾಡುವ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಅಂಥದ್ದೊಂದು ಪಾತ್ರ ಅಂದಮೇಲೆ, ಪ್ರಥಮ ಅವರು ಫೈಟ್ ಮಾಡದೇ ಇರುತ್ತಾರಾ?
ಕಾಲೇಜ್ ಹುಡುಗಿಯರು ಮತ್ತು ತನ್ನ ಗೆಳತಿಯರನ್ನು ಕೆಣಕಿದ ಪೋಲಿ ಹುಡುಗರನ್ನು ಹಿಗ್ಗಾಮುಗ್ಗಾ ಥಳಿಸೋ ಹುಡುಗಿಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಹಾಗಂತ, ಸಿನಿಮಾದುದ್ದಕ್ಕೂ ರಫ್ ಅಂಡ್ ಟಫ್ ಹುಡುಗಿಯಾಗಿಯೇ ಇರುವುದಿಲ್ಲ. ಎಮೋಷನ್ ಅಂದಾಗ, ಅವರ ಹೆಣ್ ಮನಸ್ಸು ಕೂಡ ಕರಗಲಿದೆ. ರೆಬೆಲ್ ಆಗಿದ್ದರೂ, ಸೆಂಟಿಮೆಂಟ್ ವಿಷಯ ಬಂದಾಗ ಕೂಲ್ ಆಗುವಂತಹ ಪಾತ್ರ ಅವರ ಪಾಲಿಗೆ ಸಿಕ್ಕಿದೆ.
ಈ ಕುರಿತು ಹೇಳಿಕೊಳ್ಳುವ ಪ್ರಥಮ, “ಅಮ್ಮನ ನಿರ್ದೇಶನದಲ್ಲಿ ನಟಿಸಿದ್ದರಿಂದ ಇಲ್ಲಿ ನಟಿಸಲು ಹೆಚ್ಚೇನೂ ತೊಂದರೆ ಆಗಲಿಲ್ಲ. ನನ್ನ ಜೊತೆ ಮೇಘನಾರಾಜ್, ಸಂಯುಕ್ತಾ ಹೊರನಾಡು, ನಕ್ಷತ್ರ ಮೂವರು ನಾಯಕಿಯರು ಇದ್ದಾರೆ. ರಾಗಿಣಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಇದು ಹೊಸ ಅನುಭವ ಕಟ್ಟಿಕೊಟ್ಟಿರುವುದು ನಿಜ. ಆರಂಭದಲ್ಲಿ ಭಯ ಇತ್ತು. ಹೇಗಪ್ಪಾ ಮ್ಯಾನೆಜ್ ಮಾಡೋದು ಅಂತ.
ನಿರ್ದೇಶಕ ಮುಸ್ಸಂಜೆ ಮಹೇಶ್ ಕಥೆ ಹೇಗೆ ಹೇಳಿದ್ದರೋ, ಹಾಗೇ ಚಿತ್ರ ಮಾಡಿದ್ದಾರೆ. ಎಲ್ಲವನ್ನೂ ಸಮಾಧಾನದಿಂದ ಹೇಳಿಕೊಟ್ಟಿದ್ದರಿಂದ ಎಲ್ಲೂ ಸಮಸ್ಯೆ ಎನಿಸಲಿಲ್ಲ. ಇಲ್ಲಿ ನಾಲ್ವರು ನಾಯಕಿಯರಿದ್ದರೂ, ಯಾರೂ ಹೆಚ್ಚಲ್ಲ, ಕಮ್ಮಿಯೂ ಇಲ್ಲ. ಎಲ್ಲರಿಗೂ ಸಮಾನ ಅವಕಾಶವಿದೆ. ಇಷ್ಟಪಟ್ಟು ಮಾಡಿದ ಚಿತ್ರದಲ್ಲಿ ಕಷ್ಟವೂ ಆಗಿದೆ. ಇಲ್ಲಿ ಫೈಟ್ಸ್ ಇದೆ. ಹುಡುಗರನ್ನು ಅಟ್ಟಾಡಿಸಿಕೊಂಡು ಹೊಡೆಯುವ ದೃಶ್ಯಗಳಿವೆ.
ನಾನು ಡ್ಯಾನ್ಸರ್ ಆಗಿರುವುದರಿಂದ ಪಾತ್ರಕ್ಕೂ ಡ್ಯಾನ್ಸ್ ನಂಟು ಇದೆ. ಫೈಟ್ಸ್ ಮಾಡೋಕೆ ಅಷ್ಟೇನು ಕಷ್ಟ ಆಗಲಿಲ್ಲ. ಯಾಕೆಂದರೆ, ನಾನು, ಕೇರಳದ ಕಲರಿಪಯಟ್ಟು, ಮಣಿಪುರದ ಥಾಂಗ್ ಮತ್ತು ಒಡಿಸ್ಸಾದ ಛಾವ್ ಕಲೆಗಳ ತರಬೇತಿ ಕಲಿತಿದ್ದೇನೆ. ಮಾರ್ಷಲ್ ಆರ್ಟ್ಸ್ ಪಕ್ಕಾ ಆಗಿರುವುದರಿಂದ ಸ್ಟಂಟ್ಸ್ ಸುಲಭವಾಗಿದೆ’ ಎಂದು ವಿವರ ಕೊಡುತ್ತಾರೆ ಪ್ರಥಮ.
ಸಾಮಾನ್ಯವಾಗಿ ನಾಯಕಿಯರ ಪ್ರಧಾನ ಚಿತ್ರ ಅಂದಾಗ, ಆ ನಾಯಕಿಯರಿಗೆ ಜವಾಬ್ದಾರಿ ಹೆಚ್ಚಾಗಿರುತ್ತೆ. ಇಲ್ಲಿ ನಾವೇ ಹೀರೋಗಳು, ನಾವೇ ವಿಲನ್‌ಗಳು ಹಾಗಾಗಿ ಸಿನಿಮಾ ಕಥೆಗೆ, ಪಾತ್ರಕ್ಕೆ ಮತ್ತು ನಿರ್ದೇಶಕರ ಕಲ್ಪನೆಗೆ ತಕ್ಕಂತೆ ಕೆಲಸ ಮಾಡಿದ್ದೇವೆ. ಒಂದು ಚಿತ್ರದಲ್ಲಿ ಇಬ್ಬರು, ಮೂವರು ನಾಯಕಿಯರಿದ್ದಾಗ, ಈಗೋ, ಜಗಳ ಅಂತಾರೆ.
ಆದರೆ, “ಎಂಎಂಸಿಎಚ್’ ಚಿತ್ರದಲ್ಲಿ ಅಂತಹ ಯಾವುದೇ ಸಮಸ್ಯೆ ಎದುರಾಗಲಿಲ್ಲ. ಎಲ್ಲರೂ ಒಟ್ಟಿಗೆ ಕುಳಿತು, ದೃಶ್ಯಗಳ ಬಗ್ಗೆ ಚರ್ಚೆ ಮಾಡುವ ಮೂಲಕ ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದೆವು. ಹಾಗಾಗಿ, ನಿರ್ದೇಶಕರು ಅಂದುಕೊಂಡಂತೆಯೇ ಚಿತ್ರ ಮೂಡಿಬಂದಿದೆ. ಇಷ್ಟರಲ್ಲೇ ಚಿತ್ರ ಬಿಡುಗಡೆಯಾಗಲಿದೆ. ನನಗೂ ಹೆಚ್ಚು ಕುತೂಹಲವಿದೆ ಎಂದಷ್ಟೇ ಹೇಳುತ್ತಾರೆ ಪ್ರಥಮ.