Advertisement

ಕ್ರೀಡಾ, ಕಲಾ, ಶಿಕ್ಷಣ ಕ್ಷೇತ್ರದಲ್ಲಿ ಮಿಂಚುತ್ತಿರುವ ಕಿರಿ ವಯಸ್ಸಿನ ಸಾಧಕಿ ಪ್ರತೀಕ ರೈ

05:59 PM Oct 03, 2020 | sudhir |

ಕಾಸರಗೋಡು ವಿವಿಧ ಜಾತಿ, ಮತ, ಪಂಗಡ, ಕಲೆ, ಸಂಸ್ಕೃತಿ, ಭಾಷೆಗಳನ್ನು ಒಳಗೊಂಡ ವಿವಿಧತೆಯಲ್ಲಿ ಏಕತೆಯನ್ನು ಸಾರುವ ನಾಡು. ಅತ್ಯಂತ ವೈಭವ ಪೂರ್ಣವಾದ ಕಲೆ ಸಂಸ್ಕೃತಿಗಳನ್ನು ಒಳಗೊಂಡ ಈ ನಾಡಲ್ಲಿ, ಪ್ರತಿಯೊಂದು ಕಲೆಯೂ ಒಂದೊಂದು ವಿಶಿಷ್ಟ ಸಂಸ್ಕೃತಿಯನ್ನು ಸಾರುವ ಕೇಂದ್ರ ಬಿಂದು.

Advertisement

ಕಲೆಗಳಲ್ಲಿ ಅತ್ಯಂತ ವಿಶಿಷ್ಟ ಸ್ಥಾನವನ್ನು ಪಡೆದ ಭರತನಾಟ್ಯವೂ ಕೂಡ ಕಾಸರಗೋಡು ಜಿಲ್ಲೆಯ ಸಂಸ್ಕೃತಿಯನ್ನು ಸಾರುವ ಕೇಂದ್ರ ಬಿಂದು ಎನ್ನುವುದರಲ್ಲಿ ಸಂಶಯವೇ ಇಲ್ಲ. ಇಂತಹ ಭವ್ಯ ಪರಂಪರೆಯನ್ನು ಒಳಗೊಂಡ ಭರತನಾಟ್ಯವನ್ನು ಎಳೆ ವಯಸ್ಸಿನಲ್ಲೇ ತನ್ನ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡು, ಕಲಾ ದೇವಿಯ ಉಪಾಸನೆಯಲ್ಲಿ ತೊಡಗಿರುವವರ ಪೈಕಿ ಯುವ ಕಲಾವಿದೆ ಪ್ರತೀಕ ರೈ ಕೂಡ ಒಬ್ಬರು.

ಕಾಸರಗೋಡು ಜಿಲ್ಲೆ ಕುಂಬ್ದಾಜೆ ಸಮೀಪದ ಕೊಳಂಬೆ ನಿವಾಸಿ ವಸಂತ ರೈ ಹಾಗೂ ಪ್ರಮೀಳಾ ದಂಪತಿಗಳ ಪುತ್ರಿಯಾಗಿ ಜನಿಸಿದ ಇವರು, ನೃತ್ಯ ವೀಕ್ಷಣೆಯಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದರು.

ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಶೈಕ್ಷಣಿಕ ಜೀವನ ಪ್ರಾರಂಭಿಸಿದ ಇವರು, ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಸ್ವ ಇಚ್ಛೆಯಿಂದ ಪುತ್ತೂರು ವೈಷ್ಣವಿ ನಾಟ್ಯಾಲಯದ ನೃತ್ಯ ಶಿಕ್ಷಕಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ರವರ ಶಿಷ್ಯೆಯಾಗಿ ಭರತನಾಟ್ಯ ತರಬೇತಿ ಪಡೆದರು.

Advertisement

ಶಾಲಾ ವಾರ್ಷಿಕೋತ್ಸವ ಮಾತ್ರವಲ್ಲದೆ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಬದಿಯಡ್ಕ ಗಣೇಶ ಮಂದಿರದಲ್ಲಿ, ಮುಳ್ಳೇರಿಯಾ ಗಣೇಶ ಮಂದಿರದಲ್ಲಿ, ಪುತ್ತೂರು, ಕೆಡೆಂಜಿ, ನಾರಂಪಾಡಿ ದೇವಸ್ಥಾನದಲ್ಲಿ ಹಾಗೂ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ನೃತ್ಯ ಪ್ರದರ್ಶನ ನೀಡಿದ ಇವರು, ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದರು.

ಭರತನಾಟ್ಯದಲ್ಲಿ ಮಾತ್ರವಲ್ಲದೆ, ಕ್ರೀಡಾ ಕ್ಷೇತ್ರದಲ್ಲೂ, ವಿಜ್ಞಾನ ಮೇಳದಲ್ಲೂ, ಕಲೋತ್ಸವದಲ್ಲೂ ಅದ್ವಿತೀಯ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಕೊಕ್ಕೋ ದಲ್ಲಿ 3 ಬಾರಿ, ತ್ರೋಬಾಲ್ ಪಂದ್ಯಾವಳಿಯಲ್ಲಿ 4 ಬಾರಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ, 2 ಬಾರಿ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದರು.

ಇದನ್ನೂ ಓದಿ :ಗಿನ್ನಿಸ್ ದಾಖಲೆಯ ಮೂಲಕ ಜಿಲ್ಲೆಯ ಕೀರ್ತಿಯನ್ನು ಬಾನೆತ್ತರಕ್ಕೆ ಹಾರಿಸಿದ ಸುರೇಶ್ ಯಾದವ್

ಇದರೊಂದಿಗೆ ಕುಂಬಳೆ ಉಪಜಿಲ್ಲಾ ಮಟ್ಟ ವಿಜ್ಞಾನ ಮೇಳದ ಪೇಪರ್ ಕ್ರಾಫ್ಟ್ ಸ್ಪರ್ಧೆಯಲ್ಲಿ 2 ಬಾರಿ ಪ್ರಥಮ,1 ಬಾರಿ ದ್ವಿತೀಯ ಸ್ಥಾನ ಪಡೆದು, ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಮೆಚ್ಚುಗೆಗೆ ಪಾತ್ರವಾಗಿದ್ದರು. ಇಷ್ಟು ಮಾತ್ರವಲ್ಲದೆ ಉಪಜಿಲ್ಲಾ ಮಟ್ಟ ಕಲೋತ್ಸವದ ವಾಟರ್ ಕಲರ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ, ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ, ಜೇವಲಿನ್ ತ್ರೋ ಸ್ಪರ್ಧೆಯಲ್ಲಿ ಉಪಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಭಾಗವಹಿಸಿ ಮೆಚ್ಚುಗೆಗೆ ಪಾತ್ರವಾಗಿದ್ದರು.

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಜೂನಿಯರ್ ವಿಭಾಗದ ನೃತ್ಯ ಪರೀಕ್ಷೆಯಲ್ಲಿ ಉನ್ನತ ಅಂಕಗಳೊಂದಿಗೆ ತೇರ್ಗಡೆಗೊಂಡ ಇವರು, ಪ್ರಸ್ತುತ ಎಲ್ಲಾ ವಿಷಯದಲ್ಲೂ ಎ ಪ್ಲಸ್ ಶ್ರೇಣಿಯೊಂದಿಗೆ ಕೇರಳ ರಾಜ್ಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಇವರ ಕಿರು ವಯಸ್ಸಿನ ಹಿರಿಯ ಸಾಧನೆಯನ್ನು ಮನಗೊಂಡು ಇತ್ತೀಚೆಗೆ ಕುದಿಂಗಿಲ ಶ್ರೀ ರಾಮಂಜನೇಯ ಭಜನಾ ಮಂದಿರದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುದಿಂಗಿಲ, ಕುಂಬ್ದಾಜೆ ಘಟಕದ ವತಿಯಿಂದ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಇದನ್ನೂ ಓದಿ :

ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗೆ ಬೆಟ್ಟಂಪಾಡಿ ಸರಕಾರಿ ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ಬಿಬಿಎ ಅಂತಿಮ ವರ್ಷ ವ್ಯಾಸಂಗ ಮಾಡುತ್ತಿರುವ ತನ್ನ ಅಣ್ಣ ಪವನ್ ನ ಪ್ರೋತ್ಸಾಹವೇ ಪ್ರಚೋದನೆ, ಅದೇ ರೀತಿ ಎಲ್ಲಾ ಕ್ಷೇತ್ರದಲ್ಲೂ ಅದ್ವಿತೀಯ ಪ್ರದರ್ಶನ ನೀಡಲು ತನ್ನ ಸಾಧನೆಯ ಹಿಂದೆ ಬೆನ್ನೆಲುಬಾಗಿ ನಿಂತ ತಂದೆ ತಾಯಂದಿರ ಹಾಗೂ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಶಾಲಾ ಶಿಕ್ಷಕರ ಪ್ರೋತ್ಸಾಹವೇ ಕಾರಣ ಎನ್ನುತ್ತಾರೆ ಪ್ರತೀಕ ರೈ.

ಮುಂದೆ ವಿಜ್ಞಾನ ವಿಭಾಗದಲ್ಲಿ ಮುಂದುವರಿಯಬೇಕೆಂದು, ವಿದ್ಯಾಭ್ಯಾಸದೊಂದಿಗೆ ಕಲೆ ಹಾಗೂ ಕ್ರೀಡಾ ಕ್ಷೇತ್ರದಲ್ಲೂ ಗಮನಾರ್ಹ ಸಾಧನೆ ಮಾಡಬೇಕೆನ್ನುವ ಛಲದೊಂದಿಗೆ ಮುನ್ನುಗ್ಗುತ್ತಿದ್ದಾರೆ.

ಯಾವ ರೀತಿ ಮರ ಗಿಡವಾಗಿದ್ದಾಗ ಅದಕ್ಕೆ ಆವಶ್ಯಕವಾದ ನೀರು, ಬೆಳಕು ಮುಂತಾದ ಅಂಶಗಳು ಸರಿಯಾಗಿ ದೊರೆತರೆ ಗಿಡ ಹೆಮ್ಮರವಾಗಿ ಬೆಳೆಯುತ್ತದೋ ಅದೇ ರೀತಿ ಕಿರು ವಯಸ್ಸಿನಲ್ಲೇ ಪ್ರತಿಭೆಗಳ ಹೊರಹೊಮ್ಮುವಿಕೆಗೆ ಸೂಕ್ತ ಮಾರ್ಗದರ್ಶನ, ವೇದಿಕೆ ತರಬೇತಿ, ಪ್ರೋತ್ಸಾಹ ಲಭಿಸಿದಲ್ಲಿ ಯಾವ ಕ್ಷೇತ್ರವೇ ಆಗಿರಲಿ, ಸಾಧನೆ ನಮ್ಮದಾಗುತ್ತದೆ.

ಪ್ರತಿಭೆಯನ್ನು ಎಳೆ ವಯಸ್ಸಿನಲ್ಲೇ ಗುರುತಿಸಲು, ಸೂಕ್ತ ಮಾರ್ಗದರ್ಶನ, ತರಬೇತಿ, ವೇದಿಕೆ ಕಲ್ಪಿಸಲು, ಪ್ರೋತ್ಸಾಹ ನೀಡಲು ನಮ್ಮಿಂದಾದ ರೀತಿಯಲ್ಲಿ ಪ್ರಯತ್ನಿಸೋಣ. ಪ್ರತಿಭೆಗಳ ಪ್ರದರ್ಶನಕ್ಕೆ ಮತ್ತಷ್ಟು ವೇದಿಕೆಗಳು ಸೃಷ್ಟಿಯಾಗಲೆಂದು, ಸಾಧನೆಯ ಹಾದಿ ಸುಗಮವಾಗಿಲಿ ಎಂದು ಹಾರೈಸೋಣ.

-️ ಪ್ರದೀಪ್ ಎಸ್. ಕುಲಾಲ್. ಶಾಂತಿಯಡಿ, ಏತಡ್ಕ

Advertisement

Udayavani is now on Telegram. Click here to join our channel and stay updated with the latest news.

Next