ಪ್ರತಾಪ್‌ಗಢ್ (ಉತ್ತರ ಪ್ರದೇಶ): ಇದು ವಿಚಿತ್ರವಾದರೂ ನಿಜ ಸುದ್ದಿ. ಉತ್ತರ ಪ್ರದೇಶದ ಪ್ರತಾಪ್ ಗಢದಲ್ಲಿ ಪೊಲೀಸರು ಮಾಲೀಕನ ಮನೆಯಿಂದ ಕಾಣೆಯಾದ ಎಮ್ಮೆಯ ಮಾಲೀಕತ್ವವನ್ನು ಹುಡುಕಲು ವಿನೂತನ ಮಾರ್ಗವನ್ನು ಕಂಡುಕೊಂಡಿದ್ದಾರೆ.
ಜಿಲ್ಲೆಯ ಮಹೇಶ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಯ್ ಅಸ್ಕರನ್‌ಪುರ ಗ್ರಾಮದ ನಿವಾಸಿ ನಂದಲಾಲ್ ಸರೋಜ್ ಎಂಬವರು ಕಳೆದ ಕೆಲವು ದಿನಗಳ ಹಿಂದೆ ತನ್ನ ಎಮ್ಮೆ ನಾಪತ್ತೆಯಾಗಿತ್ತು ಎಂದು ದೂರು ನೀಡಿದ್ದರು. ಪುರೆ ಹರಿಕೇಶ್ ಗ್ರಾಮಕ್ಕೆ ದಾರಿ ತಪ್ಪಿ ಹೋಗಿದ್ದ ಎಮ್ಮೆಯನ್ನು ಅಲ್ಲಿ ಹನುಮಾನ್ ಸರೋಜ್ ಎಂಬಾತ ಅದನ್ನು ಹಿಡಿದಿದ್ದಾನೆ ಎಂದು ಹೇಳಿದ್ದ.
ಸತತ ಮೂರು ದಿನಗಳ ಕಾಲ ಎಮ್ಮೆಯನ್ನು ಹುಡುಕಿದ ನಂದಲಾಲ್ ಅದನ್ನು ಕಂಡುಹಿಡಿದಿದ್ದ. ಆದರೆ ಹನುಮಾನ್ ಸರೋಜ್ ಆ ಎಮ್ಮೆಯನ್ನು ಮರಳಿಸಲು ನಿರಾಕರಿಸಿದ್ದ. ನಂತರ ನಂದಲಾಲ್ ಮಹೇಶ್‌ಗಂಜ್ ಪೊಲೀಸ್ ಠಾಣೆಗೆ ತೆರಳಿ ಹನುಮಾನ್ ಸರೋಜ್ ವಿರುದ್ಧ ದೂರು ದಾಖಲಿಸಿದ್ದ.
ಆರೋಪಿಗಳಿಬ್ಬರನ್ನೂ ಪೊಲೀಸರು ಗುರುವಾರ ಠಾಣೆಗೆ ಕರೆಸಿದ್ದರು. ಆದರೆ, ಈ ವಿಚಾರವಾಗಿ ಹಲವು ಗಂಟೆಗಳ ಕಾಲ ಪಂಚಾಯ್ತಿ ನಡೆದರೂ ಇಬ್ಬರೂ ಎಮ್ಮೆ ತಮ್ಮದು ಎಂದು ಹೇಳಿಕೊಳ್ಳುತ್ತಿದ್ದರು. ನಂತರ ಮಹೇಶ್‌ಗಂಜ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಶ್ರವಣ್ ಕುಮಾರ್ ಸಿಂಗ್ ವಿವಾದವನ್ನು ಪರಿಹರಿಸಲು ಮಾರ್ಗವನ್ನು ರೂಪಿಸಿದರು.
ನಿರ್ಧಾರವನ್ನು ಎಮ್ಮೆಗೆ ಬಿಡಬೇಕು ಎಂದು ಪಂಚಾಯತಿಯ ಮುಂದೆ ಸಿಂಗ್ ಘೋಷಿಸಿದರು. ಎಮ್ಮೆಯನ್ನು ಒಂಟಿಯಾಗಿ ರಸ್ತೆಯಲ್ಲಿ ಬಿಡಲಾಗುತ್ತದೆ ಮತ್ತು ಅದು ಯಾರನ್ನು ಹಿಂಬಾಲಿಸುತ್ತದೆಯೋ ಅವರನ್ನು ಅದರ ಮಾಲೀಕ ಎಂದು ಘೋಷಿಸಲಾಗುತ್ತದೆ ಎಂದು ಪೊಲೀಸರು ಹೇಳಿದರು.
ಗ್ರಾಮಸ್ಥರು ಸಹ ಈ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದರು. ನಂದಲಾಲ್ ಮತ್ತು ಹನುಮಾನ್ ಇಬ್ಬರೂ ತಮ್ಮ ಗ್ರಾಮಗಳಿಗೆ ಹೋಗುವ ಮಾರ್ಗದಲ್ಲಿ ವಿರುದ್ಧ ದಿಕ್ಕಿನಲ್ಲಿ ನಿಲ್ಲುವಂತೆ ಹೇಳಿದರು. ನಂತರ ಪೊಲೀಸರು ಎಮ್ಮೆಯನ್ನು ಪೊಲೀಸ್ ಠಾಣೆಯಿಂದ ಬಿಡುಗಡೆ ಮಾಡಿದರು. ಅದು ನಂದಲಾಲ್ ಅವರನ್ನು ಅನುಸರಿಸಿ ರೈ ಅಸ್ಕರನ್‌ಪುರ ಗ್ರಾಮಕ್ಕೆ ಹೋಯಿತು. ಮೊದಲೇ ನಿರ್ಧಾರ ಮಾಡಿದಂತೆ ಎಮ್ಮೆಯನ್ನು ನಂದಲಾಲ್ ಗೆ ಒಪ್ಪಿಸಲಾಯಿತು.