ಹೊಸದಿಲ್ಲಿ: ಕೇಂದ್ರ ಸಚಿವ ಸಂಪುಟ ಇನ್ನೆರಡು ಮೂರು ದಿನಗಳಲ್ಲಿ ಪುನಾರಚನೆಯಾಗುವ ಸಾಧ್ಯತೆಯಿದ್ದು, ಮೈಸೂರಿನ ಸಂಸದ ಪ್ರತಾಪ್ ಸಿಂಹ ಅವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆಗಳು ದಟ್ಟವಾಗಿವೆ. 2014ರಲ್ಲಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದ ಸಿಂಹ, 2019ರ ಚುನಾವಣೆಯಲ್ಲೂ ಪುನಃ ಜಯಶಾಲಿಯಾಗಿದ್ದು, ಕರ್ನಾಟಕದ ಬಿಜೆಪಿ ಯುವ ನಾಯಕರಲ್ಲಿ ಹೆಚ್ಚು ಸಕ್ರಿಯರೆಂದು ಪರಿಗಣಿಸಲ್ಪಟ್ಟಿದ್ದಾರೆ.
ಇವರ ಜತೆ ಕಳೆದ ವರ್ಷ ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಪುನಃ ಅಧಿಕಾರದ ಗದ್ದುಗೆ ಹಿಡಿಯುವ ಅವಕಾಶ ಕಲ್ಪಿಸಿಕೊಟ್ಟ ಜ್ಯೋತಿರಾದಿತ್ಯ ಸಿಂದಿಯಾಗೆ ಸಚಿವ ಸ್ಥಾನ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.
ಅಸ್ಸಾಂನಲ್ಲಿ ಹಿಮಂತ ಬಿಸ್ವಾಗೆ ಸಿಎಂ ಗಾದಿ ಬಿಟ್ಟುಕೊಟ್ಟಿರುವ ಅಲ್ಲಿನ ಮಾಜಿ ಸಿಎಂ ಸರ್ಬಾ ನಂದ ಸೋನೊವಾಲ್‌ಗೆ ಹಾಗೂ ಇತ್ತೀಚೆಗೆ ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಾರ್ಟಿ (ಎಲ್‌ಜೆಪಿ) ಒಡೆದ ಚಿರಾಗ್ ಅವರ ಚಿಕ್ಕಪ್ಪ ಪಶುಪತಿ ಪಾರಸ್‌ಗೆ “ಕೃತಜ್ಞತಾಪೂರ್ವಕ’ ವಾಗಿ ಒಂದು ಸಚಿವ ಸ್ಥಾನ ಸಿಗಬಹುದು ಎಂದು ಎನ್ ಡಿ ಟಿವಿ ವರದಿ ಮಾಡಿ ದೆ.
ಇವರೊಂದಿಗೆ, ಬಿಹಾರದ ಸುಶೀಲ್ ಮೋದಿ, ಮಹಾರಾಷ್ಟ್ರದ ನಾರಾಯಣ ರಾಣೆ, ಬಿಹಾರ- ಗುಜರಾತ್‌ನ ಬಿಜೆಪಿ ಉಸ್ತುವಾರ ಭೂಪೇಂದ್ರ ಯಾದವ್ ಕೂಡ ಕೇಂದ್ರ ಸಂಪುಟದ ಆಕಾಂಕ್ಷಿ ಗಳಾಗಿದ್ದಾರೆ. ಎನ್‌ಡಿಎ ಅಂಗಪಕ್ಷವಾದ ಜೆಡಿ ಯುನ ಲಲ್ಲನ್ ಸಿಂಗ್, ರಾಮನಾಥ್ ಠಾಕೂರ್, ಸಂತೋಷ್ ಕುಶ್ವಾಹಾ ಅವರಲ್ಲಿ ಇಬ್ಬರಿಗೆ ಸಚಿವ ಸ್ಥಾನ ಸಿಗಬಹುದು.
ಇದಲ್ಲದೆ, ಉತ್ತರ ಪ್ರದೇಶದ ವರುಣ್ ಗಾಂಧಿ, ರಾಮಶಂಕರ್ ಕಠಾರಿಯಾ, ಅನಿಲ್ ಜೈನ್, ರೀಟಾ ಬಹುಗುಣ ಜೋಷಿ, ಜಾಫರ್ ಇಸ್ಲಾಂ ಅವರಿಗೆ, ಆ ರಾಜ್ಯದಲ್ಲಿ ಎನ್‌ಡಿಎ ಅಂಗಪಕ್ಷವಾಗಿರುವ ಅಪ್ನಾ ದಳದ ಅನುಪ್ರಿಯಾ ಪಟೇಲ್‌ಗೆ, ಉತ್ತರಾ ಖಾಂಡ್‌ನ ಅಜಯ್ ಭಟ್ ಅಥವಾ ಅನಿಲ್ ಬಲುನಿ ಅವರಿಗೆ ಸಚಿವ ಸ್ಥಾನ ಸಿಗಬಹುದು.
ಪಶ್ಚಿಮ ಬಂಗಾಲದ ಬಿಜೆಪಿ ನಾಯಕರಾದ ಜಗನ್ನಾಥ್ ಸರ್ಕಾರ್, ಶಾಂತನು ಠಾಕೂರ್, ನಿಥೀಟ್ ಪ್ರಾಮಾಣಿಕ್ ಅವರು ಸಚಿವರಾಗುವ ಸಾಧ್ಯತೆಯಿದೆ. ಇದಲ್ಲದೆ, ಬ್ರಿಜೇಂದ್ರ ಸಿಂಗ್ (ಹರಿಯಾಣ), ರಾಹುಲ್ ಕಸ್ವಾನ್ (ರಾಜಸ್ಥಾನ), ಅಶ್ವಿನಿ ವೈಷ್ಣವ್ (ಒಡಿಶಾ), ಪೂನಮ್ ಮಹಾಜನ್ ಅಥವಾ ಪ್ರೀತಮ್ ಮುಂಡೆ (ಮಹಾರಾಷ್ಟ್ರ) ಹಾಗೂ ಪರ್ವೇಶ್ ವರ್ಮಾ ಅಥವಾ ಮೀನಾಕ್ಷಿ ಲೇಖೀ (ದಿಲ್ಲಿ) ಅವರೂ ಸಂಪುಟ ಸೇರುವ ಸಾಧ್ಯತೆಯಿದೆ.