Advertisement

ಮೈಸೂರು ಗ್ಯಾಸ್ ಟ್ರಬಲ್: ಸ್ವಪಕ್ಷೀಯರ ವಿರುದ್ಧ ಮತ್ತೆ ಸಿಂಹ ಘರ್ಜನೆ

01:40 PM Jan 29, 2022 | Team Udayavani |

ಮೈಸೂರು: ಮೈಸೂರು ಅಭಿವೃದ್ಧಿ ಮಾಡಿದ್ದು ನಾನು, ಮೈಸೂರು ಮಹಾರಾಜರನ್ನು ಬಿಟ್ಟರೆ ಅತಿಹೆಚ್ಚು ಲೀಡ್‌ನಲ್ಲಿ ಗೆದ್ದಿರೋದು ನಾನು ಎಂದು ಮೈಸೂರಿನ ಸ್ವಪಕ್ಷೀಯ ಶಾಸಕರಿಗೆ ಸಂಸದ ಪ್ರತಾಪ್ ಸಿಂಹ ಶುಕ್ರವಾರ ಸವಾಲು ಹಾಕಿದ್ದಾರೆ.

Advertisement

ಜಲದರ್ಶಿನಿ ಅತಿಥಿ ಗೃಹದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಮೈಸೂರು ನಗರ ಅತಿ ವೇಗವಾಗಿ ಬೆಳೆಯುತ್ತಿದೆ.ಮನೆ ಮಂದಿಯೆಲ್ಲಾ ದುಡಿಯುವ ಪರಿಸ್ಥಿತಿ ಇದೆ. ಎರಡು ಸಿಲಿಂಡರ್ ಇದ್ದರೂ ಅದನ್ನು ಪಡೆಯಲು ಮನೆಯಲ್ಲೊಬ್ಬರು ಇರಲೇಬೇಕಿದೆ. ಸಿಲಿಂಡರ್ ನೀಡುವವರು ಹಣ ಪಡೆಯುತ್ತಾರೆ. ಸಿಲಿಂಡರ್ ಸ್ಪೋಟಗೊಂಡು ಅವಘಡಗಳು ಸಂಭವಿಸುತ್ತಿವೆ.ಇವೆಲ್ಲಾ ಸಮಸ್ಯೆಗಳನ್ನು ನಿವಾರಿಸುವ ಸಲುವಾಗಿ ಗ್ಯಾಸ್ ಪೈಪ್ ಲೈನ್ ಅಳವಡಿಕೆ ಮೂಲಕ ಅನಿಲ ಪೂರೈಕೆ ಚಿಂತನೆ ಆರಂಭವಾಗಿದೆ.ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆ ಇದಾಗಿದೆ.ಮೈಸೂರು ಸೇರಿದಂತೆ ರಾಜ್ಯದ ಹಲವಾರು ನಗರಗಳಲ್ಲಿ ಗ್ಯಾಸ್ ಪೈಪ್ ಲೈನ್ ಅಳವಡಿಸುವ ಉದ್ದೇಶವಿದೆ.ಲೈನ್ ಪೈಪ್ ಅಳವಡಿಕೆಯಿಂದ ಜನರಿಗೆ ತುಂಬಾ ಅನುಕೂಲವಾಗಲಿದೆ ಎಂದರು.

ಮೋದಿಯವರು ಗುಜರಾತ್ ನಲ್ಲಿ ಇದನ್ನು ಮೊದಲು ಆರಂಭಿಸಿದ್ದರು‌‌‌.ಬೆಂಗಳೂರು, ಮೈಸೂರು, ರಾಮನಗರ, ಮಂಡ್ಯ, ತುಮಕೂರು, ಹಾಸನ, ಶಿವಮೊಗ್ಗ, ಹುಬ್ಬಳಿ ಧಾರಾವಾಡ, ಚಿತ್ರದುರ್ಗ, ಕಲಬುರಗಿ ಹೀಗೆ ಹಲವು ಜಿಲ್ಲೆಗಳಲ್ಲಿ ಇದನ್ನು ಜಾರಿಗೆ ತರಲಾಗಿದೆ.ಎಲ್ ಪಿ ಜಿ ಬೆಲೆ 904 ರೂಪಾಯಿ ಇದೆ. ಗ್ಯಾಸ್ ಪೈಪ್ ಲೈನ್ ಬಂದರೆ ಅದು 500 ರೂಪಾಯಿಗೆ ಸಿಗುತ್ತದೆ. ಇದರಿಂದ ಜನಕ್ಕೆ 400 ರೂಪಾಯಿ ಉಳಿತಾಯವಾಗುತ್ತದೆ ಎಂದರು.

ಇದನ್ನೂ ಓದಿ : ಮೈಸೂರು: ವಿದ್ಯಾರ್ಥಿನಿಗೆ ಮುಖ್ಯೋಪಾಧ್ಯಾಯನ ಕಿಸ್; ವಿಡಿಯೋ ವೈರಲ್

ಶಾಸಕ ಎಲ್ ನಾಗೇಂದ್ರ ಅಭಿವೃದ್ಧಿಯ ಹರಿಕಾರ ಎನ್ನುವ ಭ್ರಮೆಯಲ್ಲಿದ್ದಾರೆ.ನನ್ನಿಂದಲೇ ಮೈಸೂರು ಅಭಿವೃದ್ಧಿ ಆಗಿರೋದು ಎಂದು ಕೊಂಡಿದ್ದಾರೆ. 30 ಕೋಟಿ ರೂಪಾಯಿ ಅನುದಾನ ತಂದಿಲ್ಲ. 300 ಕೋಟಿ ರೂಪಾಯಿ ಕೆಲಸ ಅಂತ ಹೇಳ್ತಾರೆ. ಎಲ್ಲಿದೆ 300 ಕೋಟಿ ? ಯಾವ ರಸ್ತೆ ಮಾಡಿದ್ದೀರಿ ಅಂತ ತೋರಿಸಿ. ಚಾಮರಾಜ ಕ್ಷೇತ್ರದ ಕೆ ಆರ್ ಆಸ್ಪತ್ರೆಯಲ್ಲಿ ಸೊಳ್ಳೆ, ನಾಯಿ ಕಾಟ ಇದೆ. ನಿಮ್ಮ ಕ್ಷೇತ್ರದ ವಿಜಯನಗರದಲ್ಲಿ ವಾಟರ್ ಟ್ಯಾಂಕ್ ಹಾಕಿಸಿದ್ದು ನಾನು. ಪಾಸ್ ಪೊರ್ಟ್ ಸೇವಾ ಕೇಂದ್ರ ಮಾಡಿಸಿದ್ದು ನಾನು. ನೀವು ಗೋವಾಕ್ಕೆ ಹೋಗುವ ಫ್ಲೈಟ್ ತಂದಿದ್ದು ನಾನು.ಬೆಂಗಳೂರು-ಮೈಸೂರು ಹೆದ್ದಾರಿ ಮಾಡಿಸಿದ್ದು ನಾನು. ಕೆ ಆರ್ ಕ್ಷೇತ್ರದ ಕಸದ ಸಮಸ್ಯೆ ನಿವಾರಿಸಿದ್ದು ನಾನು. ಶಾಸಕರು ರಿಯಲ್ ಎಸ್ಟೇಟ್ ಮಾಡಲಿ.ಆದರೆ ಕೃಷ್ಣರಾಜ, ಚಾಮರಾಜ ಕ್ಷೇತ್ರಗಳು ಅವರ ಬಡಾವಣೆಗಳಲ್ಲ ಎಂದು ಸ್ವಪಕ್ಷೀಯ ಶಾಸಕರಿಗೆ ಟಾಂಗ್ ನೀಡಿದರು.

Advertisement

ಚಾಮರಾಜ ಕ್ಷೇತ್ರದಲ್ಲಿ ಈಗ ನೀವು ಹಾಕಿರುವ ರಸ್ತೆಗಳು ಒಂದು ವರ್ಷವೂ ಬಳಕೆ ಬರುವುದಿಲ್ಲ.ಸುಮ್ಮನೆ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ಮಾತು ಬರುತ್ತದೆ ಅಂತಾ ಏನೇನೋ ಮಾತಾಡಬೇಡಿ. ಮನೆ ಮನೆಗೆ ಗ್ಯಾಸ್ ಕೊಟ್ಟರು ಅಂತಾ ನಾಗೇಂದ್ರ ಅವರ ಹೆಸರನ್ನೆ ಹೇಳ್ತೀನಿ. ಮೋದಿ ಅವರಿಗಿಂತಲೂ ರಾಮದಾಸ್, ನಾಗೇಂದ್ರ ಅವರು ರಾಜಕೀಯದಲ್ಲಿ ಸಿನೀಯರ್‌.ಅವರಿಬ್ಬರು ಈ ಯೋಜನೆ ಸರಿ ಇಲ್ಲ ಅಂತಾ ಮೋದಿ ಅವರಿಗೆ ಪತ್ರ ಬರೆಯಲಿ. ಆಗ ನಾನು ಸುಮ್ಮನಾಗುತ್ತೇನೆ ಎಂದರು.

ಮೈಸೂರಿನಲ್ಲಿ ಈ ಹಿಂದೆಯೂ ಖಾಸಗಿ ಕಂಪನಿಯವರು ಮನಬಂದಂತೆ ರಸ್ತೆಗಳನ್ನು ಅಗೆದಿದ್ದಾರೆ.ಜಸ್ಕೋದವರು ಎಲ್ಲೆಂದರಲ್ಲಿ ರಸ್ತೆಗಳನ್ನು ಅಗೆದಿದ್ದಾರೆ. ಆಗ ಜನಪ್ರತಿನಿಧಿಗಳು ಏಕೆ ಸುಮ್ಮನಿದ್ದರು.ಈಗ ಗ್ಯಾಸ್ ಪೈಪ್ ಲೈನ್ ಕಾಮಗಾರಿಯನ್ನು ಏಕೆ ವಿರೋಧಿಸುತ್ತಿದ್ದಾರೆ ಯೋಜನೆ ವಿರೋಧಿಸಿ ಪತ್ರ ಬರೆಯುವ ಅಗತ್ಯವೇನಿತ್ತು? ಎಂದು ಪತ್ರ ಬರೆದಿರುವ ಔಚಿತ್ಯವನ್ನು ಪ್ರಶ್ನಿಸಿದರು.

ಈ ವಿಚಾರದಲ್ಲಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು.ಪ್ರಧಾನಿ ನರೇಂದ್ರ ಮೋದಿಯವರು ಸಾಧಕ ಬಾಧಕಗಳನ್ನು ಪರಿಶೀಲಿಸಿ ಈ ಯೋಜನೆಯನ್ನು ಜಾರಿಗೊಳಿಸಿದ್ದಾರೆ ಎಂದರು.

ಶಾಸಕ ಎಲ್ ನಾಗೇಂದ್ರ ಕೂಡ ಪಾಲಿಕೆ ಸದಸ್ಯರಾಗಿದ್ದವರು.ಪಾಲಿಕೆ ಕೌನ್ಸಿಲ್ ಸಭೆಗೆ ಭಾಗಿಯಾಗದೇ ನಮ್ಮ ಪಕ್ಷದ ಮೇಯರ್ ಸುನಂದಾ ಪಾಲನೇತ್ರ ಅವರಿಗೆ ಅಗೌರವ ತೋರಲಾಗಿದೆ. ನಮ್ಮ ಪಕ್ಷದ ಮೇಯರ್ ಗೆ ಅಗೌರವ ತೋರಿದ್ದು ಸರಿಯಾದ ನಿಲುವೇ? ಎಂದು ಪ್ರಶ್ನಿಸಿದರು.

ನಮ್ಮ ಪಕ್ಷದ ಕಾರ್ಯಕರ್ತರ ಅವಿರತ ಪರಿಶ್ರಮದ ಫಲವಾಗಿ ನಾನು ಸಂಸದನಾಗಿ ಮರು ಆಯ್ಕೆಯಾಗಿದ್ದೇನೆ. ಜೆಡಿಎಸ್ ಕಾಂಗ್ರೆಸ್ ನಲ್ಲಿರುವ ಮೋದಿ ಅಭಿಮಾನಿಗಳು ಸಹ ನನಗೆ ಬೆಂಬಲ ನೀಡಿದ್ದಾರೆ. ಅವರೆಲ್ಲರ ಬೆಂಬಲದಿಂದ ನಾನು ಮರು ಆಯ್ಕೆಯಾಗಿದ್ದೇನೆ. ಶಾಸಕ ನಾಗೇಂದ್ರ ಅವರು ವಾಸಿಸುತ್ತಿರುವ ಕೆ ಜಿ ಕೊಪ್ಪಲಿನಲ್ಲಿ ನನಗೆ ಲೀಡ್ ಸಿಕ್ಕಿಲ್ಲ.ಕೆ ಜಿ ಕೊಪ್ಪಲಿನಲ್ಲಿ ನನಗೆ ಹಿನ್ನಡೆಯಾಗಿದೆ.ನಗರಪಾಲಿಕೆ ಚುನಾವಣೆಯಲ್ಲೂ ಕೆ ಜಿ ಕೊಪ್ಪಲಿನಲ್ಲಿ ಬಿಜೆಪಿ ಅಭ್ಯರ್ಥಿ ಸೋತಿದ್ದಾರೆ.ಅಲ್ಲಿ ಹರೀಶ್ ಗೌಡ ಬೆಂಬಲಿತ ಅಭ್ಯರ್ಥಿ ಗೆದ್ದಿದ್ದಾರೆ. ನಗರಪಾಲಿಕೆ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಶಾಸಕ ನಾಗೇಂದ್ರಗೆ ಸಾಧ್ಯವಾಗಿಲ್ಲ ಎಂದು ಶಾಸಕ ಎಲ್ ನಾಗೇಂದ್ರಗೆ ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next