ಮೈಸೂರು: ರಾಜ್ಯದಲ್ಲಿ ವಿಧಾನಸಭೆಯ ವಿಪಕ್ಷ ನಾಯಕನ ಆಯ್ಕೆ ಬಿಜೆಪಿಗೆ ಕಗ್ಗಂಟಾಗಿದೆ. ಹಲವು ಹೆಸರುಗಳು ಕೇಳಿ ಬರುತ್ತಿದ್ದರೂ ಬಿಜೆಪಿ ವರಷ್ಠರು ಇದುವರೆಗೆ ಯಾವುದೇ ಹೆಸರನ್ನು ಅಂತಿಮಗೊಳಿಸಿಲ್ಲ. ಇದೇ ವೇಳೆ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಅವರು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರ ಬ್ಯಾಟ್ ಬೀಸಿದ್ದಾರೆ.
ಶೀಘ್ರವೇ ವಿರೋಧ ಪಕ್ಷದ ನಾಯಕನ ಆಯ್ಕೆ ಆಗುತ್ತದೆ. ಎದೆಗಾರಿಕೆ ಇರುವ ನಾಯಕ ಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ಎಲ್ಲಾ ಕಡೆಯೂ ಕೇಳಿ ಬರುತ್ತಿದೆ. ರಾಷ್ಟ್ರೀಯತೆ, ಹಿಂದೂತ್ವ ಎಲ್ಲವನ್ನೂ ಯತ್ನಾಳ ಗಟ್ಟಿಯಾಗಿ ಪ್ರತಿಪಾದಿಸುತ್ತಾರೆ. ಯತ್ನಾಳ್ ಅಂದರೆ ಒಂದು ಹವಾ ಇದೆ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿದರು.
ಸುರೇಶ್ ಕೊರಳಪಟ್ಟಿ ಹಿಡಿಯುತ್ತಾರೆ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಬಗ್ಗೆ ಎಂ.ಬಿ. ಪಾಟೀಲ್ ವ್ಯಂಗ್ಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಂಸದ ಪ್ರತಾಪ್ ಸಿಂಹ, ಸಂತೋಷ್ ಬಗ್ಗೆ ಪದೇ ಪದೇ ಯಾಕೆ ಮಾತನಾಡುತ್ತೀರಿ? ಬ್ರಾಹ್ಮಣರನ್ನು ದಿನವೂ ಯಾಕೆ ಬೈಯುತ್ತೀರಿ? ಯಾಕೆ ನಿಮಗೆ ಬ್ರಾಹ್ಮಣರ ಮೇಲೆ ಇಷ್ಟು ದ್ವೇಷ? ಬಸವೇಶ್ವರರು ಮೂಲದಲ್ಲಿ ಬ್ರಾಹ್ಮಣರಲ್ವಾ? ಬಿ.ಎಲ್. ಸಂತೋಷ್ ನಿಮಗೆ ಏನಾದರೂ ತಿವಿದಿದ್ದಾರಾ? ಎಂ.ಬಿ ಪಾಟೀಲ್ ರೇ ನೀವು ನಿಜವಾಗಲೂ ಲಿಂಗಾಯತರಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:Watch: ಸ್ವೀಟ್ಸ್ ಖರೀದಿಸಿ ಹಣ ಕೊಡಲ್ಲ ಎಂದ ಪಾನಮತ್ತ ಇನ್ಸ್ ಪೆಕ್ಟರ್ ವಿಡಿಯೋ ವೈರಲ್!
ಯಡಿಯೂರಪ್ಪ ಅವರನ್ನು ಜೈಲಿಗೆ ಕಳಿಸಿದ್ದು ಕಾಂಗ್ರೆಸ್ ಕುತಂತ್ರ ಅಲ್ವಾ? ಕಾಂಗ್ರೆಸ್ ಲಿಂಗಾಯತ ರಿಗೆ ಅನ್ಯಾಯ ಮಾಡಿದರೂ ನೀವು ಸುಮ್ಮನಿದ್ದೀರಿ. ದಿನೇಶ್ ಗುಂಡೂರಾವ್ ಯಡಿಯೂರಪ್ಪ ರನ್ನು ಹುಚ್ಚ ಅಂದಿದ್ದರು. ಆಗ ನಿಮ್ಮೊಳಗೆ ಲಿಂಗಾಯತ ಭಾವನೆ ಜಾಗೃತ ಆಗಲಿಲ್ಲವಲ್ಲ. ಯಡಿಯೂರಪ್ಪ ವಿರುದ್ದ ಷಡ್ಯಂತ್ರ ಮಾಡಲು ಕಾಂಗ್ರೆಸ್ ನಿಂದ ಸೂಪಾರಿ ತೆಗೆದು ಕೊಂಡವರು ನೀವೆ ತಾನೇ? ಸಿದ್ದರಾಮಯ್ಯರು ಲಿಂಗಾಯತ ಧರ್ಮ ಒಡೆಯಲು ಹೋದಾಗ ಅದರ ಸೂಪಾರಿ ಪಡೆದವರು ನೀವೆ ತಾನೇ? ಈಗ ಸಿದ್ದರಾಮಯ್ಯ ರೆ ಪೂರ್ಣವಧಿ ಸಿಎಂ ಎನ್ನುವ ಮೂಲಕ ಒಕ್ಕಲಿಗರ ಮುಗಿಸಲು ಹೊರಟ್ಟಿದ್ದರಾ. ನಿಮ್ಮ ಒಂದು ಹೇಳಿಕೆ ಪರಿಣಾಮ ಡಿಕೆ ಸುರೇಶ್ ನಿಮ್ಮ ಕೈ ಎಳೆದಿದ್ದಾರೆ. ಇನ್ನೊಂದು ಬಾರಿ ಅಂತಹ ಹೇಳಿಕೆ ಕೊಟ್ಟರೆ ಡಿಕೆ ಸುರೇಶ್ ನಿಮ್ಮ ಕೊರಳಪಟ್ಟಿ ಹಿಡಿಯುತ್ತಾರೆ ಎಂದು ಎಚ್ಚರಿಸಿದ ಪ್ರತಾಪ್ ಸಿಂಹ, ಎಂ.ಬಿ. ಪಾಟೀಲ್ ಸಿದ್ದರಾಮಯ್ಯರ ಚೇಲಾ ಪಡೆಯ ಅಧ್ಯಕ್ಷ ಎಂದು ಛೇಡಿಸಿದರು.