Advertisement

ಪ್ರೆಸ್ ನಿಂದ ನೋಟು ನೇರ ಕಾಳಧನಿಕರಿಗೆ ರವಾನೆ?

03:50 AM Jan 12, 2017 | Team Udayavani |

ಹೊಸದಿಲ್ಲಿ: 500, 1,000 ರೂ. ಮುಖ ಬೆಲೆಯ ನೋಟುಗಳಿಗೆ ಕೇಂದ್ರ ಸರಕಾರ ನಿಷೇಧ ಹೇರಿದ ಬಳಿಕ ಜನಸಾಮಾನ್ಯರು ಹೊಸ ನೋಟು ಪಡೆಯಲು ಪರದಾಡುತ್ತಿದ್ದಾಗಲೇ, ನೋಟು ಮುದ್ರಣಾಲಯ ಅಥವಾ ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ ಕೆಲವು ಪ್ರಭಾವಿ ವ್ಯಕ್ತಿಗಳ ಮನೆ ಬಾಗಿಲಿಗೇ ಹೊಚ್ಚ ಹೊಸ ನೋಟುಗಳು ತಲುಪಿರುವ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

Advertisement

2000 ರೂ. ಮುಖಬೆಲೆಯ ನೋಟುಗಳ  ಹೋಮ್‌ ಡೆಲಿವರಿ’ ಕುರಿತು ಶಂಕೆ ವ್ಯಕ್ತವಾಗಲು ಕಾರಣ, ಡಿ.15ರಂದು ದಿಲ್ಲಿಯ ಮಾರುಕಟ್ಟೆ ಪ್ರದೇಶವೊಂದರಲ್ಲಿ 2000 ರೂ. ಮುಖಬೆಲೆಯ 20 ಲಕ್ಷ ರೂ. ನೋಟುಗಳ ಕಂತೆ ಸಮೇತ ಸಿಕ್ಕಿಬಿದ್ದ ಕೃಷ್ಣಕುಮಾರ್‌ ಎಂಬ ವ್ಯಕ್ತಿ. ಆತನ ಬಳಿ ಇದ್ದ ನೋಟುಗಳ ಕಂತೆ ಮೇಲೆ ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಲದ ನೋಟು ಮುದ್ರಣಾಲಯಗಳ ಸೀಲ್‌ ಇತ್ತು. ಸರಕಾರಿ ನೋಟು ಮುದ್ರಣಾಲಯಗಳ ಠಸ್ಸೆ ಹೊಂದಿದ್ದ ನೋಟಿನ ಕಂತೆಗಳು ನೇರವಾಗಿ ಸಾರ್ವಜನಿಕರಿಗೆ ತಲುಪಿದ ಪ್ರಕರಣ ಇದೇ ಮೊದಲು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ “ಹೊಸ ನೋಟಿನ ಕಂತೆ ಸೋರಿಕೆ ಯಾಗಿದ್ದು ಎಲ್ಲಿ? ನೋಟು ಮುದ್ರಣಾಲಯಗಳಲ್ಲೋ ಅಥವಾ ರಿಸರ್ವ್‌ ಬ್ಯಾಂಕ್‌ ಚೆಸ್ಟ್‌ನಲ್ಲೋ? ನೋಟುಗಳ  ಹೋಮ್‌ ಡೆಲಿವರಿ’ ನಡೆಯುತ್ತಿತ್ತೆ? ಎಂಬುದರ ಪತ್ತೆಗೆ ತೆರಿಗೆ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಕೃಷ್ಣಕುಮಾರ್‌ ಕೈಗೆ ನೋಟುಗಳ ಕಂತೆ ಬರುವಷ್ಟರಲ್ಲಿ ಅದು ಹಲವು ಕೈಗಳಿಂದ ಬದಲಾಗಿತ್ತು. ಹೀಗಾಗಿ ಆತನಿಂದ ಹೆಚ್ಚಿನ ಮಾಹಿತಿ ಸಿಗುತ್ತಿಲ್ಲ.

ಸಾಮಾನ್ಯವಾಗಿ ನೋಟು ಮುದ್ರಣಾಲಯಗಳು ವಿವಿಧ ಮುಖಬೆಲೆಯ 1000 ನೋಟುಗಳ ಕಂತೆಯನ್ನು ರಿಸರ್ವ್‌ ಬ್ಯಾಂಕ್‌ ಗೋದಾಮಿಗೆ ಕಳುಹಿಸುತ್ತವೆ. ಅಲ್ಲಿ ಆ ಕಂತೆಯನ್ನು ಒಡೆದು, 100 ನೋಟುಗಳ ಕಂತೆ ಮಾಡಿ, ಬ್ಯಾಂಕ್‌ಗಳ ಹೆಸರು ಬರೆದು ರವಾನಿಸಲಾಗುತ್ತದೆ.

ಗಡುವು ಮುಗಿದರೂ ತಿರುಪತಿ ಹುಂಡಿಗೆ 1.7 ಕೋಟಿ ರೂ. ಹಳೆ ನೋಟು 

Advertisement

ತಿರುಪತಿ: ಹಳೆಯ 500 ಹಾಗೂ 1000 ರೂ. ನೋಟುಗಳ ಬದಲಾವಣೆಗೆ ಕಳೆದ ಡಿ.31ಕ್ಕೆ ಗಡುವು ಮುಕ್ತಾಯವಾಗಿದ್ದರೂ ವಿಶ್ವಪ್ರಸಿದ್ಧ ತಿರುಪತಿ ವೆಂಕಟೇಶ್ವರ ದೇಗುಲದ ಹುಂಡಿಗೆ ನಿಷೇಧಿತ ನೋಟುಗಳನ್ನು ಹಾಕಲಾಗುತ್ತಿದೆ. ಕಳೆದ 11 ದಿನಗಳ ಅವಧಿಯಲ್ಲಿ 1.7 ಕೋಟಿ ರೂ. ಮೌಲ್ಯದ ರದ್ದಾದ ನೋಟುಗಳನ್ನು ಹುಂಡಿಗೆ ಹಾಕಲಾಗಿದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ. ಜ.1ರಂದು ಕೂಡ 31 ಲಕ್ಷ ರೂ. ಮೌಲ್ಯದ ನಿಷೇಧಿತ ನೋಟುಗಳು ಹುಂಡಿಯಲ್ಲಿ ದೊರೆತಿದ್ದವು. ಹುಂಡಿಗೆ ಪ್ರತಿದಿನ ಸರಾಸರಿ 2.6 ಲಕ್ಷ ರೂ. ನಗದು ಸೇರಿದಂತೆ ಚಿನ್ನಾಭರಣಗಳನ್ನು ಹಾಕಲಾಗುತ್ತದೆ. 2016ರಲ್ಲಿ ಒಂದು ಸಾವಿರ ಕೋಟಿ ರೂ.ಗೂ ಅಧಿಕ ನಗದು ಸಂಗ್ರಹವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next