ಹೈದರಾಬಾದ್: ʼಸಲಾರ್ʼ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ದಕ್ಷಿಣ ಭಾರತದಲ್ಲಿ ದೊಡ್ಡ ಹಿಟ್ ಆಗುವುದರ ಜೊತೆ ಪ್ಯಾನ್ ಇಂಡಿಯಾದಲ್ಲಿ ʼಕೆಜಿಎಫ್ʼ ಬಳಿಕ ಮಿಂಚು ಹರಿಸಲು ಪ್ರಶಾಂತ್ ನೀಲ್ ರೆಡಿಯಾಗಿದ್ದಾರೆ.
ʼಸಲಾರ್ʼ ಸಿನಿಮಾ ಡಾರ್ಲಿಂಗ್ ಪ್ರಭಾಸ್ ಅವರಿಗೆ ಬಿಗ್ ಹಿಟ್ ನೀಡುತ್ತದೆನ್ನುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಅದಕ್ಕೆ ತಕ್ಕಂತೆ ಸಿನಿಮಾದ ಟ್ರೇಲರ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ʼಸಲಾರ್ ಗೂ ʼಕೆಜಿಎಫ್ʼ ಗೂ ಲಿಂಕ್ ಇದೆ ಎನ್ನುವ ಮಾತುಗಳು ಸಿನಿಮಾ ಸಟ್ಟೇರಿದ ದಿನಗಳಿಂದ ಹರಿದಾಡುತ್ತಿದೆ.
ಇದಕ್ಕೆ ಕಾರಣ ʼಸಲಾರ್ʼ ಕೂಡ ʼಕೆಜಿಎಫ್ʼನಂತೆ ಡಾರ್ಕ್ ಥೀಮ್ ನಲ್ಲೇ ಬಂದಿದೆ ಎನ್ನುವುದು ಕೂಡ ಒಂದು. ಈ ಮಾತಿಗೆ ನಿರ್ದೇಶಕ ಪ್ರಶಾಂತ್ ನೀಲ್ ಮೌನ ಮುರಿದಿದ್ದಾರೆ. ಈ ಹಿಂದೆ ಪ್ರಶಾಂತ್ ನೀಲ್ ಅವರೇ ʼಸಲಾರ್ʼ – ʼಕೆಜಿಎಫ್ʼ ಕಥೆಯೇ ಬೇರೆ ಎಂದಿದ್ದರು. ಇದೀಗ ಡಾರ್ಕ್ ಥೀಮ್ ಬಗ್ಗೆ ಹೇಳಿದ್ದಾರೆ.
ʼಗಲ್ಲಾಟ್ಟ ಪ್ಲಸ್ʼ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ್ದಾರೆ. ನಿಮ್ಮ ಚಿತ್ರಗಳಿಗೆ ನಿರ್ದಿಷ್ಟ ಬಣ್ಣದ ಟೋನ್ ಏಕೆ ಇರುತ್ತದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, “ʼಸಲಾರ್ ಕೆಜಿಎಫ್ ನಂತೆ ಡಾರ್ಕ್ ಥೀಮ್ ನಂತೆ ಕಾಣುತ್ತದೆ ಏಕೆಂದರೆ, ನನಗೆ ಒಸಿಡಿ ಇದೆ (ಗೀಳು ಮನೋರೋಗ -ಒಸಿಡಿ -ಒಬ್ಸೆಸಿವ್ ಕಂಪಲ್ಶನ್ ಡಿಸಾರ್ಡರ್) ಹೆಚ್ಚು ಬಣ್ಣಗಳಿರುವ ಯಾವುದನ್ನೂ ನಾನು ಹೆಚ್ಚು ಇಷ್ಟಪಡುವುದಿಲ್ಲ. ಇದು ನನ್ನ ವ್ಯಕ್ತಿತ್ವದ ಪ್ರತಿಬಿಂಬವಾಗಿದ್ದು ತೆರೆಯ ಮೇಲೆ ಬರುತ್ತದೆ” ಎಂದು ಹೇಳಿದ್ದಾರೆ.
ಇದೇ ಡಿ.22 ರಂದು ʼಸಲಾರ್ʼ ರಿಲೀಸ್ ಆಗಲಿದ್ದು, ಸಿನಿಮಾದಲ್ಲಿ ಪ್ರಭಾಸ್ ಜೊತೆ ಶ್ರುತಿ ಹಾಸನ್, ಜಗಪತಿ ಬಾಬು, ಟಿನ್ನು ಆನಂದ್, ಬಾಬಿ ಸಿಂಹ, ಈಶ್ವರಿ ರಾವ್, ಶ್ರೀಯಾ ರೆಡ್ಡಿ, ಮೈಮ್ ಗೋಪಿ, ಜಾನ್ ವಿಜಯ್ ಮತ್ತು ಅನೇಕರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.