Advertisement
ಕಳೆದ 10 ವರ್ಷಗಳಲ್ಲಿ ಶೇ.90ರಷ್ಟು ಚುನಾವಣೆಗಳನ್ನು ಸೋಲುತ್ತಲೇ ಬಂದಿರುವ; “ಕಾಸ್ಟ್ ಅವೇ’ ಸಿನೆಮಾದ ನಾಯಕನಂತೆ ಅಲೆಗಳಿಗೆ ಕೊಚ್ಚಿ ತಬ್ಬಿಬ್ಟಾದ ಸ್ಥಿತಿಯಲ್ಲಿರುವ ಕಾಂಗ್ರೆಸ್ ಪಾಲಿಗೆ ಪ್ರಶಾಂತ್ ಕಿಶೋರ್ ಈಗ ಬೆಳಕಿಂಡಿ. ಚುನಾವಣ ಚತುರನನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ಹುಕಿ ಸೋನಿಯಾ ಮೇಡಂಗೂ ಜೋರಾಗಿದೆ. ಇತ್ತ ಪ್ರಶಾಂತ್ ಕೂಡ ತಮ್ಮ ಬತ್ತಳಿಕೆಯಲ್ಲಿ ಒಂದಿಷ್ಟು ರೋಡ್ ಮ್ಯಾ ಪ್‌ಗ್ಳ ಬಾಣ ಇಟ್ಟುಕೊಂಡು, ಕಾಂಗ್ರೆಸ್‌ನ ಹೊಸ್ತಿಲಲ್ಲಿ ಕುಳಿತಿದ್ದಾರೆ. “ಚುನಾವಣ ತಂತ್ರಜ್ಞನಾಗಿ ಕೆಲಸ ಮಾಡಿದ್ದು ಸಾಕು, ಇನ್ನು ನೇರ ರಾಜಕೀಯ ಮಾಡೋಣ’ ಎಂದು ನಿರ್ಧರಿಸಿರುವ ಜತೆಗೆ, ಮುಳುಗುತ್ತಿರುವ ಕಾಂಗ್ರೆಸ್ಸನ್ನು ಹೇಗಾದರೂ ಮೇಲಕ್ಕೆತ್ತಿರುವ ಮಹಾನ್ ಛಲವೂ ಅವರಲ್ಲಿ ಉಕ್ಕಿದಂತೆ ತೋರುತ್ತಿದೆ. “ನನ್ನ ಆಲೋಚನೆ, ಮೌಲ್ಯಗಳು ಬಿಜೆಪಿಗಿಂತ ಕಾಂಗ್ರೆಸ್ ಜತೆ ಹೆಚ್ಚು ಮ್ಯಾಚ್ ಆಗುತ್ತದೆ’ ಎನ್ನುವ ಮೂಲಕ, ಸೈದ್ಧಾಂತಿಕ ಹೊಂದಾಣಿಕೆಗೆ ಪ್ರಯತ್ನಿಸುತ್ತಿದ್ದಾರೆ.
ಆದರೆ, ಇಲ್ಲಿ ಪ್ರಶ್ನೆ ಇರುವುದು ಪ್ರಶಾಂತ್‌ರ ಶೂರತ್ವದ ಬಗ್ಗೆ. ನಿರೀಕ್ಷಿತ ಗೆಲುವಿನ ಪಂದ್ಯಗಳಲ್ಲೇ ಪ್ರಶಾಂತ್ “ಮ್ಯಾನ್ ಆಫ್ ದಿ ಮ್ಯಾಚ್’ ಪಡೆದ ಸತ್ಯವನ್ನು ಕಾಂಗ್ರೆಸ್ ಪರಾಮರ್ಶಿ ಸಲೂ ಹೋಗುತ್ತಿಲ್ಲ. ನಾಯಕರ ವರ್ಚಸ್ಸು ಇದ್ದಲ್ಲಿ ಮಾತ್ರವೇ ಪ್ರಶಾಂತ್‌ರ ಕೈಚಳಕ ಸಹಜವಾಗಿ ಕ್ಲಿಕ್ ಆಗಿರುವುದಂತೂ ಸ್ಪಷ್ಟ. 2014ರಲ್ಲಿ ಬಿಜೆಪಿ ಐತಿಹಾಸಿಕ ಬಹುಮತ ಪಡೆಯುವಾಗ ಪ್ರಶಾಂತ್‌ರ ಕಾರ್ಯತಂತ್ರವೊಂದೇ ವರ್ಕ್ ಆಗಿತ್ತೆನ್ನುವುದು ಹುಂಬತನವಾದೀತು. ಗುಜರಾತ್‌ನಲ್ಲಿ 3 ಬಾರಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ನರೇಂದ್ರ ಮೋದಿ ಅವರ ಕೈಗೆ ದೇಶದ ಚುಕ್ಕಾಣಿ ಕೊಡಬೇಕೆನ್ನುವ ಮತದಾರರೊಳಗಿನ ಕಾತರ, ಬಹುದೊಡ್ಡ ಅಲೆಯಾಗಿ ಪರಿವರ್ತನೆಯಾಗಿದ್ದ ಸಂದರ್ಭ ಅದು. 2015ರಲ್ಲಿ ಬಿಹಾರದಲ್ಲಿ ನಿತೀಶ್ ಕುಮಾರ್; 2017ರಲ್ಲಿ ಪಂಜಾಬ್‌ನಲ್ಲಿ ಕ್ಯಾ| ಅಮರೀಂದರ್ ಸಿಂಗ್; ಅದೇ ವರ್ಷ ಆಂಧ್ರಪ್ರದೇಶದಲ್ಲಿ ವೈಎಸ್ಸಾರ್ ಪುತ್ರ ಜಗನ್‌ಮೋಹನ್ ರೆಡ್ಡಿ; 2018ರಲ್ಲಿ ತೆಲಂಗಾಣದಲ್ಲಿ ಕೆಸಿಆರ್; 2020ರಲ್ಲಿ ದಿಲ್ಲಿಯಲ್ಲಿ ಅರವಿಂದ ಕೇಜ್ರಿವಾಲ್; 2021ರಲ್ಲಿ ಪಶ್ಚಿಮ ಬಂಗಾಲದಲ್ಲಿ ಮಮತಾ ಬ್ಯಾನರ್ಜಿ, ಇತ್ತ ತಮಿಳುನಾಡಿನಲ್ಲಿ ಸ್ಟಾಲಿನ್- ಬಹುಮತದಿಂದ ಗೆಲ್ಲುವಾಗ ಆ ನಾಯಕರ ವರ್ಚಸ್ಸು ಆಯಾ ರಾಜ್ಯಗಳಲ್ಲಿ ಬೃಹತ್ ಅಲೆಯ ಸ್ವರೂಪದಲ್ಲೇ ಇತ್ತು. ಇದರೊಟ್ಟಿಗೆ ಪ್ರಶಾಂತ್‌ರ ಕಾರ್ಯತಂತ್ರವೂ ಜತೆಯಾಗಿ ಆ ನಾಯಕರೆಲ್ಲ ಅಧಿಕಾರ ಹಿಡಿದಿದ್ದರು ಎನ್ನುವುದಂತೂ ಸತ್ಯ. ಕಾಂಗ್ರೆಸ್ ಕಣ್ಣಿಗೆ ಪ್ರಶಾಂತ್ ಯಾಕೆ ಹೀರೋ?: 2013- 14ರ ಕಾಲಘಟ್ಟದಲ್ಲಿ ಕಾಂಗ್ರೆಸ್ಸನ್ನು ಕಟುವಾಗಿ ಟೀಕಿಸುತ್ತಿದ್ದ ಪ್ರಶಾಂತ್, ಕಾಲಕ್ರಮೇಣ ಕೊಂಚ ಮೃದುವಾಗುತ್ತಾ, ಇಂದು ಆ ಪಕ್ಷದೊಳಗೇ ಒಂದಾಗುವ ಹಂತ ತಲುಪಿದ್ದಾರೆ. ಪ್ರಶಾಂತ್‌ಗೆ ಕಾಂಗ್ರೆಸ್ ಸಿದ್ಧಾಂತ ತೀರಾ ಹತ್ತಿರವಾಗಿದ್ದು, 2017ರ ಪಂಜಾಬ್ ವಿಧಾನಸಭಾ ಚುನಾವಣೆ ವೇಳೆ. ಮೋದಿ ಅವರನ್ನು ಪ್ರಧಾನಿ ಹುದ್ದೆಗೆ ಏರಿಸುವಾಗ ಪ್ರಯೋಗಿಸಿದ ತಂತ್ರಗಳನ್ನೇ, ಇತ್ತ ಪಂಜಾಬ್‌ನಲ್ಲಿ ಅವರು ಕ್ಯಾಪ್ಟನ್‌ಗೂ ರೂಪಿಸಿಕೊಟ್ಟಿದ್ದರು. “ಚಾಯ್ ಪೇ ಚರ್ಚಾ’ ಹೋಗಿ “ಕಾಫೀ ವಿತ್ ಕ್ಯಾಪ್ಟನ್’ ಆಗಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಕಾಂಗ್ರೆಸ್‌ಗೆ ಹೊಸಪ್ರಭೆ ತಂದುಕೊಟ್ಟ ಪ್ರಯತ್ನಗಳು ಒಂದೇ ರೀತಿ ಇದ್ದವು. ಕೊನೆಗೂ ಕ್ಯಾಪ್ಟನ್ ಮತ್ತು ಪ್ರಶಾಂತ್ ಜೋಡಿ, ಕಾಂಗ್ರೆಸ್ಸನ್ನು ಗೆಲುವಿನ ಗೆರೆ ಮುಟ್ಟಿಸಿತ್ತು.
Related Articles
Advertisement
ಮಹಾಘಟಬಂಧನ್ ಎಂಬ ವ್ಯಥೆ: ಆದಾಗ್ಯೂ, ಪ್ರಶಾಂತ್ ಕಿಶೋರ್ ಕಾಂಗ್ರೆಸ್‌ನ ಕಣ್ಣಿಗೆ ಒಬ್ಬ ಪವಾಡ ಪುರುಷ. ಈ ನಂಬಿಕೆಗೆ ಜೋತುಬಿದ್ದು ಎದುರಿಸಿದ 2019ರ ಸಂಸತ್ ಚುನಾವಣೆ, ಕಾಂಗ್ರೆಸ್‌ಗೆ ಇನ್ನೊಂದು “ಮಹಾ’ ಮಜುಗರ. ಕಾಂಗ್ರೆಸ್ ನೇತೃತ್ವದಲ್ಲಿ ಅಂದು ಎಸ್ಪಿ, ಬಿಎಸ್ಪಿ, ಆರ್‌ಜೆಡಿ, ಸಿಪಿಐ-ಎಂ ಮುಂತಾದ ಪಕ್ಷಗಳೆಲ್ಲ ಸೇರಿ ಮಹಾಘಟ ಬಂಧನ್ ಕಟ್ಟಿದ್ದು ಕೂಡ ಪ್ರಶಾಂತ್‌ರ ತಂತ್ರಗಾರಿಕೆಯ ಫಲವೇ ಆಗಿತ್ತು. ಆದರೆ, ಮೋದಿ ಅವರ ಅಲೆಯ ಮುಂದೆ ಪ್ರಶಾಂತ್‌ರ ಪ್ರಯತ್ನ ಯಾವ ಪವಾಡವನ್ನೂ ಸೃಷ್ಟಿಸಲಿಲ್ಲ. ಮರುವರ್ಷ, ಬಿಹಾರ ವಿಧಾನಸಭಾ ಚುನಾವಣೆಯಲ್ಲೂ ಪ್ರಶಾಂತ್ ಉರುಳಿಸಿದ ಮಹಾಘಟಬಂಧನ್ ದಾಳ ವಕೌìಟ್ ಆಗಲೇ ಇಲ್ಲ. ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಂಡು, ಸೀಟು ಬಿಟ್ಟುಕೊಟ್ಟಿದ್ದೇ ಆರ್‌ಜೆಡಿ ಸೋಲಿಗೆ ಕಾರಣ ಎಂಬ ಅಪವಾದವನ್ನೂ ಕೇಳಬೇಕಾಗಿ ಬಂತು.
ಮೇಲೆತ್ತುವ ಸ್ಥಿತಿಯಲ್ಲಿ ಕಾಂಗ್ರೆಸ್ ಇದೆಯೇ?: ದೇಶದ ಬಹುತೇಕ ಕಡೆ ಎದ್ದೇಳಲಾಗದ ಸ್ಥಿತಿಯಲ್ಲಿರುವ ಕಾಂಗ್ರೆಸ್ಸನ್ನು ಕೈಹಿಡಿದು ಮೇಲೆತ್ತಲು ಸಮರ್ಥರೊಬ್ಬರ ಅಗತ್ಯವಂತೂ ಇದ್ದೇ ಇದೆ. ಟೀಕಿಸುತ್ತಲೇ ಕೂರುವ ಜಿ-23 ನಾಯಕರು, ಕಾಲಿಟ್ಟಲ್ಲೆಲ್ಲ ಸೋಲುಣಿಸುವ “ಯುವ’ನಾಯಕತ್ವ- ಇವೆರಡರಿಂದ ಪಕ್ಷ ಏಳ್ಗೆ ಕಂಡಿಲ್ಲ ಎನ್ನುವ ಸತ್ಯ ರಹಸ್ಯವಾಗಿ ಉಳಿದಿಲ್ಲ. ಇಂಥ ದಯನೀಯ ಸ್ಥಿತಿಯಲ್ಲಿ, ಮುಂದಿರುವ ಗುಜರಾತ್, ಕರ್ನಾಟಕ ವಿಧಾನಸಭಾ ಚುನಾವಣೆಗಳು ಪಕ್ಷಕ್ಕೆ ಪ್ರತಿಷ್ಠೆಯ ವಿಚಾರಗಳಾಗಿವೆ. ಇವೆಲ್ಲಕ್ಕೂ ಮಿಗಿಲಾಗಿ 2024ರ ಲೋಕಸಭಾ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ನೀಡುವ ಕನಸನ್ನೂ ಕಾಂಗ್ರೆಸ್ ಕಾಣುತ್ತಿದೆ. ಇದನ್ನೆಲ್ಲ ನೋಡುವಾಗ, ಪ್ರಶಾಂತ್ ಕಿಶೋರ್ ಕಾಂಗ್ರೆಸ್‌ನ ಕಟ್ಟಕಡೆಯ ದಾಳ ಅಂತಲೇ ತೋರುತ್ತಾರೆ.
ಪ್ರಶಾಂತ್ ಬಂದೂ ಕಾಂಗ್ರೆಸ್‌ನಲ್ಲಿ ಮಾಡುವುದಾದರೂ ಏನು? ಮೋದಿ ಅವ ರಿಗೆ ಸರಿಸಮನಾ ಗಿ ಆತ ನಿರೀಕ್ಷಿಸುತ್ತಿರುವ ಫೇಸ್‌ವ್ಯಾಲ್ಯೂ ಆ ಪಕ್ಷದಲ್ಲಿ ಯಾರಿಗೂ ಇಲ್ಲ. ಪ್ರಿಯಾಂಕಾ ಗಾಂಧಿ ಮೇಲೆ ಪ್ರಶಾಂತ್‌ಗಿದ್ದ ಒಂದೇ ಒಂದು ಭರವಸೆ, ಮೊನ್ನೆ ಉ.ಪ್ರ. ಚುನಾವಣಾ ಸೋಲಿನ ಮೂಲಕ ಸುಳ್ಳಾಗಿದೆ. ಚದುರಿಹೋಗಿರುವ ಮಿತ್ರಪಕ್ಷಗಳನ್ನೆಲ್ಲ ಒಗ್ಗೂಡಿಸಿ, ಅದೇ ಮಹಾಘಟಬಂಧನ್ ಕಟ್ಟುವಂಥ ಮುಂಚಿನ ವಾತಾವರ ಣವೂ ಈಗಿಲ್ಲ. ಕಾಂಗ್ರೆಸ್‌ನ ಪಕ್ಕಕ್ಕೆ ನಿಲ್ಲಲು ವೈಎಸ್ಸಾರ್, ಮಮತಾ, ಮಾಯಾವತಿ- ಯಾರೂ ಸಿದ್ಧರಿಲ್ಲ. ಅವರೆಲ್ಲ ಕಾಂಗ್ರೆಸ್ಸನ್ನು “ಸ್ಮಾಲ್ ಪಾಟ್ನìರ್’ ಅಂತಲೇ ಭಾವಿಸುತ್ತಿದ್ದಾರೆ.
ಅದೇನೇ ಇರಲಿ, ದೇಶದ ಅತ್ಯಂತ ಹಳೆಯ ಪಕ್ಷದ “ಕೈ’ಹಿಡಿಯುತ್ತಿರುವ ಪ್ರಶಾಂತ್‌ಗೆ ಚುನಾವಣ ತಂತ್ರಗಾರಿ ಕೆಯ ದಟ್ಟ ಅನುಭವವಂತೂ ಇದ್ದೇ ಇದೆ. ಅವರ ಸಿಟಿಜನ್ಸ್ ಫಾರ್ ಅಕೌಂಟೇಬಲ್ ಗವರ್ನನ್ಸ್ (ಸಿಎಜಿ) ತಂಡದ 500 ನಿಪುಣ ಸದಸ್ಯರು, ಹೊಸ ಹೊಸ ಆಲೋಚನೆಗಳೊಂದಿಗೆ ಪ್ರತೀ ಚುನಾವಣೆಯನ್ನೂ ಎದುರು ನೋಡುವಂಥವರು. ಅಕ್ಷರಶಃ ಚುನಾವಣ ಸೈನಿಕರಾಗಿ, ಬದ್ಧತೆಯಿಂದ ಹಳ್ಳಿಹಳ್ಳಿಗಳಲ್ಲಿ ತಿರುಗಿ, ಬೇರು ಮಟ್ಟದಲ್ಲಿ ಅಭಿಪ್ರಾಯ- ಸಲಹೆ ಸಂಗ್ರಹಿಸಿ, ವಿನೂತನ ಕಾರ್ಯಸೂತ್ರ ಹೆಣೆಯುವ ಕಲೆ ಆ ತಂಡಕ್ಕೆ ಸಿದ್ಧಿಸಿದೆ. ಈ ತಂಡವನ್ನೂ ಕಾಂಗ್ರೆಸ್‌ನೊಟ್ಟಿಗೆ ಸೇರಿಸುವ ತವಕದಲ್ಲಿರುವ ಪ್ರಶಾಂತ್, ಮುಂದೆಷ್ಟು “ಮ್ಯಾನ್ ಆಫ್ ದಿ ಮ್ಯಾಚ್’ ಪಡೆಯುತ್ತಾರೆ ಎನ್ನುವುದೇ ಕುತೂಹಲ.
-ಕೀರ್ತಿ ಕೋಲ್ಗಾರ್