ಹೊಸದಿಲ್ಲಿ: ಚುನಾವಣ ವ್ಯೂಹ ರಚನೆಕಾರ ಪ್ರಶಾಂತ್‌ಕಿಶೋರ್ ಕಾಂಗ್ರೆಸ್ ಸೇರ್ಪಡೆ ಬಹುತೇಕ ಖಚಿತವಾಗಿದೆ.
ಪಕ್ಷದಲ್ಲಿ ಅವರು ಪ್ರಧಾನ ಭೂಮಿಕೆಯನ್ನೇ ನಿಭಾಯಿಸಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಅದಕ್ಕೊಂದು ನಿಯಮವೂ ಅಡ್ಡಿಯಾಗುವ ಸಾಧ್ಯತೆ ಇದೆ.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲು ಕಿಶೋರ್ ಸಲ್ಲಿಸಿರುವ ಪ್ರಸ್ತಾವನೆಗಳನ್ನು ಅಧ್ಯಯನ ಮಾಡಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇಮಿಸಿರುವ ಸಮಿತಿ, “ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಬಳಿಕ ಪ್ರಶಾಂತ್ ಕಿಶೋರ್ ಇತರ ಎಲ್ಲ ರಾಜಕೀಯ ಪಕ್ಷಗಳಿಗೆ ರಣತಂತ್ರ ರಚನೆ ಮಾಡಿಕೊಡುವುದನ್ನು ನಿಲ್ಲಿಸಬೇಕು’ ಎಂದು ಪ್ರತಿಪಾದಿಸಿದೆ.
ಪ್ರಶಾಂತ್ ಕಿಶೋರ್ ಟಿಎಂಸಿ, ವೈಎಸ್‌ಆರ್ ಕಾಂಗ್ರೆಸ್, ಡಿಎಂಕೆ ಜತೆಗೆ ಕೆಲಸ ಮಾಡಿದ್ದರು.
ಅಗತ್ಯವಿಲ್ಲ: ಈ ನಡುವೆ, ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್‌ನಾಥ್, “ಕಾಂಗ್ರೆಸ್‌ಗೆ ಪ್ರಶಾಂತ್ ಬಂದರೂ, ಮಧ್ಯಪ್ರದೇಶದಲ್ಲಿ ಅವರ ಅಗತ್ಯ ಬೀಳಲಾರದು’ ಎಂದು ಹೇಳಿದ್ದಾರೆ.
ಪ್ರಶಾಂತ್ ಕಾಂಗ್ರೆಸ್‌ಗೆ ಬಂದರೆ ಕಮಲ್‌ನಾಥ್‌ಗೆ ವಿಶ್ರಾಂತಿ ನೀಡಬಹುದು ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಲೇವಡಿ ಮಾಡಿದ್ದರು.