ಚನ್ನಪಟ್ಟಣ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ, ಉದ್ಯಮಿ ಪಂಚಮಿ ಪ್ರಸನ್ನ ಪಿ.ಗೌಡ ಅವರು ಚನ್ನಪಟ್ಟಣದ ತಮ್ಮ ಕಚೇರಿಯಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಸ್ಥಳೀಯ ಜೆಡಿಎಸ್ ಮುಂಚೂಣಿ ಮುಖಂಡರ ಸಮ್ಮುಖದಲ್ಲಿ ಜೆಡಿಎಸ್‌ಗೆ ಸೋಮವಾರ ಅಧಿಕೃತವಾಗಿ ಸೇರ್ಪಡೆಯಾದರು.
ಚನ್ನಪಟ್ಟಣ ಟಿಕೆಟ್ ಸಿಗುವುದು ಅನುಮಾನ ಎನ್ನುವ ಸುಳಿವು ಸಿಗುತ್ತಿದ್ದಂತೆಯೇ ಪ್ರಸನ್ನ ಪಿ.ಗೌಡ ಕಾಂಗ್ರೆಸ್ ತೊರೆದು ಜೆಡಿಎಸ್‌ನತ್ತ ಮುಖ ಮಾಡಿದ್ದಾರೆ. ಮೈಸೂರಿನಲ್ಲಿ ನಡೆದ ಜೆಡಿಎಸ್ ಪಂಚರತ್ನ ರಥಯಾತ್ರೆ ಸಮಾರೋಪದಲ್ಲಿ ಜೆಡಿಎಸ್ ಸೇರುವ ಇಂಗಿತ ವ್ಯಕ್ತಪಡಿಸಿದ್ದರು. ಇದೀಗ ಸ್ವತಃ ಕುಮಾರಸ್ವಾಮಿ ಅವರೇ ಪಕ್ಷದ ಶಾಲು, ಮೈಸೂರು ಪೇಟ ಹಾಗೂ ಹಾರ ತುರಾಯಿ ಹಾಕುವ ಮೂಲಕ ಉದ್ಯಮಿ ಪ್ರಸನ್ನ ಪಿ.ಗೌಡರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಅಧಿಕೃತ: ಪ್ರಸನ್ನ ಪಿ.ಗೌಡ ಮಾತನಾಡಿ, “ಚನ್ನ ಪಟ್ಟಣ ದಲ್ಲಿ ನಾನು ಕಾಂಗ್ರೆಸ್ ಅಭ್ಯರ್ಥಿಯಾಗ ಬೇಕಿತ್ತು. ಆದರೆ, ಕಾಂಗ್ರೆಸ್‌ನ ನಾಯಕತ್ವದಿಂದ ಬೇಸತ್ತಿರುವೆ. ಆ ಪಕ್ಷದಲ್ಲಿ ಸ್ಪಷ್ಟ ನಿಲುವು ಇಲ್ಲ. ಸುಳ್ಳು ಘೋಷಣೆ ಮಾಡಿ ಜನರ ದಾರಿ ತಪ್ಪಿಸುತ್ತಿ ದ್ದಾರೆ. ಹೀಗಾಗಿ ಕುಮಾರಸ್ವಾಮಿ ನಾಯಕತ್ವ ಮೆಚ್ಚಿಕೊಂಡು ಜೆಡಿಎಸ್ ಸೇರುತ್ತಿದ್ದೇನೆ’ ಎಂದರು.
ಸೇರ್ಪಡೆ: ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ರಾಮನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದ ಪೈಕಿ 3 ಕ್ಷೇತ್ರಕ್ಕೆ ಟಿಕೆಟ್ ಘೋಷಿಸಲಾಗಿದೆ. ಆದರೆ, ಚನ್ನಪಟ್ಟಣ ಕ್ಷೇತ್ರಕ್ಕೆ ಟಿಕೆಟ್ ಫೈನಲ್ ಆಗದ ಕಾರಣ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ರಿಗೆ ಕೈ ನಾಯಕರು ಬಲೆ ಬೀಸಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಹಾಗೆಯೇ ನಟಿ ರಮ್ಯಾ ಕೂಡ ಚನ್ನಪಟ್ಟಣದಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಮಾತು ಹರಿದಾಡುತ್ತಿವೆ. ಹೀಗಾಗಿ ಈ ಎಲ್ಲಾ ಬೆಳವಣಿಗೆ ಗಮನಿಸಿ ಹಲವರೂ ಜೆಡಿಎಸ್‌ಗೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ, ಮಾಗಡಿ ಶಾಸಕ ಎ.ಮಂಜುನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್‌ಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ.ಜಯಮುತ್ತು, ನಗರ ಘಟಕದ ಅಧ್ಯಕ್ಷ ಅಜಯ್ ಕುಮಾರ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರುದೊಡ್ಡಿ ಜಯ ರಾಮು, ಒಕ್ಕಲಿಗರ ಸಂಘದ ನಿರ್ದೇಶಕ ಹಾಪ್ ಕಾಮ್ಸ್ ಸಿ.ದೇವರಾಜು, ಮುಖಂಡರಾದ ಎಂ.ಸಿ. ಕರಿಯಪ್ಪ, ಬೋರ್ ವೆಲ್ ರಾಮಚಂದ್ರು, ವಡ್ಡರ ಹಳ್ಳಿ ರಾಜಣ್ಣ, ರಂಗಸ್ವಾಮಿ ಮತ್ತಿತರರು ಇದ್ದರು.