Advertisement

ಹೋರಾಟದ ನಡುವೆ ಪ್ರಸಾದ್‌ಗೆ ಒಲಿದ ವಿಜಯಲಕ್ಷ್ಮೀ

12:46 AM May 24, 2019 | Lakshmi GovindaRaj |

ಚಾಮರಾಜನಗರ: ಕೊನೆಯ ಕ್ಷಣದವರೆಗೂ ವಿಜಯಲಕ್ಷ್ಮಿ ಚಂಚಲೆಯಾಗಿ ತೀವ್ರ ಕುತೂಹಲ ಕೆರಳಿಸಿದ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್‌ ಕಡಿಮೆ ಮತಗಳ ಅಂತರದಿಂದ ಜಯಗಳಿಸಿದ್ದಾರೆ.

Advertisement

ಚಾಮರಾಜನಗರ ಕ್ಷೇತ್ರದಲ್ಲಿ ಇದು ಬಿಜೆಪಿಯ ಮೊದಲ ಗೆಲುವು. ತನ್ಮೂಲಕ ಎರಡು ಬಾರಿ ಸತತವಾಗಿ ಗೆದ್ದು ಮೂರನೇ ಬಾರಿ ಗೆಲ್ಲುವ ಮೂಲಕ ಹ್ಯಾಟ್ರಿಕ್‌ ಸಾಧಿಸುವ ಕಾಂಗ್ರೆಸ್‌ ಅಭ್ಯರ್ಥಿ ಧ್ರುವನಾರಾಯಣ ಅವರ ಕನಸು ಭಗ್ನವಾಗಿದೆ. ಶ್ರೀನಿವಾಸ ಪ್ರಸಾದ್‌ ಇದೇ ಕ್ಷೇತ್ರದಲ್ಲಿ 5 ಬಾರಿ ಗೆದ್ದು ಸಂಸದರಾಗಿದ್ದರು.

1980, 1984, 1989, 1991ರಲ್ಲಿ ಕಾಂಗ್ರೆಸ್‌ನಿಂದ ಹಾಗೂ 1999ರಲ್ಲಿ ಸಂಯುಕ್ತ ಜನತಾದಳದಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಈಗ ಬಿಜೆಪಿಯಿಂದ ಗೆಲ್ಲುವ ಮೂಲಕ ಕ್ಷೇತ್ರದಲ್ಲಿ 6ನೇ ಗೆಲುವು ದಾಖಲಿಸಿದ್ದಾರೆ. ಮತ ಎಣಿಕೆ ಆರಂಭಗೊಂಡು ಮೊದಲ ಸುತ್ತಿನಿಂದ 18ನೇ ಸುತ್ತಿನವರೆಗೂ ಕಾಂಗ್ರೆಸ್‌ ಅಭ್ಯರ್ಥಿ ಧ್ರುವನಾರಾಯಣ ಸರಾಸರಿ 8 ಸಾವಿರ ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದರು.

“ಧ್ರುವನಾರಾಯಣ ಗೆದ್ದಾಯಿತು’ ಎಂದೇ ಪಕ್ಷದ ಕಾರ್ಯಕರ್ತರು ಸಂಭ್ರಮಿಸಿದ್ದರು. ಆದರೆ ಕೊನೆ ಸುತ್ತುಗಳಲ್ಲಿ ವಿಜಯಲಕ್ಷ್ಮಿ ಚಂಚಲೆಯಾದಳು. ಈ ಹಂತದಲ್ಲಿ ಕ್ಷೇತ್ರದ ಫ‌ಲಿತಾಂಶ ತೀವ್ರ ಕುತೂಹಲ ಕೆರಳಿಸಿ ಫೋಟೋ ಫಿನಿಷ್‌ ಹಂತಕ್ಕೆ ಬಂದು ತಲುಪಿತು.

ಹೆಗ್ಗಡದೇವನಕೋಟೆ ವಿಧಾನಸಭಾ ಕ್ಷೇತ್ರದ 3 ಹಾಗೂ ತಿ.ನರಸೀಪುರ ಕ್ಷೇತ್ರದ 3 ಮತ ಯಂತ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದಾಗಿ ಅವುಗಳ ಎಣಿಕೆಯನ್ನು ಕೊನೆಗೆ ಇಟ್ಟುಕೊಳ್ಳಲಾಗಿತ್ತು. ಈ ಹಂತದಲ್ಲಿ ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಚಡಪಡಿಕೆ ಉಂಟಾಯಿತು.

Advertisement

ಈ ಆರು ಕ್ಷೇತ್ರಗಳ ಮತ ಯಂತ್ರಗಳ ದೋಷದಿಂದಾಗಿ ಮತಗಳು ಡಿಸ್‌ಪ್ಲೇ ಆಗದ ಕಾರಣ, ವಿವಿ ಪ್ಯಾಟ್‌ನಲ್ಲಿದ್ದ ಚೀಟಿಗಳನ್ನು ಎಣಿಕೆ ಮಾಡಲಾಯಿತು. ಎಣಿಕೆ ಮುಗಿದ ಬಳಿಕ ಶ್ರೀನಿವಾಸ ಪ್ರಸಾದ್‌ ಅವರು ಮುನ್ನಡೆ ಸಾಧಿಸಿದರು. ಬಳಿಕ ಅಂಚೆ ಮತಗಳನ್ನೂ ಎಣಿಕೆ ಮಾಡಿದಾಗ ಒಟ್ಟು 1,817 ಮತಗಳ ಅಂತರದ ಗೆಲುವು ಸಾಧಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದೇವೆ. ಮೋದಿ ಮತ್ತೂಮ್ಮೆ ಪ್ರಧಾನಿಯಾಗಲಿ ಎಂದು ಜನ ಮತ ನೀಡಿದ್ದಾರೆ. ನನ್ನನ್ನು ಮುಗಿಸುತ್ತೇನೆ ಎಂದು ನಮ್ಮ ಜಿಲ್ಲೆಯ ನಾಯಕರೊಬ್ಬರು ಹೇಳುತ್ತಿದ್ದರು. ಇದು ಜನರ ಗೆಲುವು. ನನಗೆ ಮತ ನೀಡಿದ ಮತದಾರರಿಗೆ, ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವೆ.
-ವಿ.ಶ್ರೀನಿವಾಸಪ್ರಸಾದ್‌, ವಿಜೇತ ಅಭ್ಯರ್ಥಿ

ಚಾಮರಾಜನಗರ
-ವಿಜೇತರು ವಿ.ಶ್ರೀನಿವಾಸ ಪ್ರಸಾದ್‌ (ಬಿಜೆಪಿ)
-ಪಡೆದ ಮತ 5,68,537
-ಎದುರಾಳಿ ಧ್ರುವನಾರಾಯಣ (ಮೈತ್ರಿ ಅಭ್ಯರ್ಥಿ)
-ಪಡೆದ ಮತ 5,66,720
-ಗೆಲುವಿನ ಅಂತರ 1,817

ಗೆಲುವಿಗೆ 3 ಕಾರಣ
-ದಲಿತ ಮತಗಳು “ಕೈ’ಕೊಟ್ಟು ಬಿಜೆಪಿ ಅಭ್ಯರ್ಥಿ ಪರ ಹೋದದ್ದು.
-ಲೆಕ್ಕಾಚಾರದಂತೆ ಮೈತ್ರಿ ಧರ್ಮ ಪಾಲನೆಯಾಗದೆ ಜೆಡಿಎಸ್‌ ಮತ ಬಿಜೆಪಿಗೆ ಬಿದ್ದದ್ದು
-ಎಚ್‌.ಸಿ.ಮಹದೇವಪ್ಪ ಕಾಂಗ್ರೆಸ್‌ ಪರ ಕೆಲಸ ಮಾಡದಿರುವುದು

ಸೋಲಿಗೆ 3 ಕಾರಣ
-ದೇಶಾದ್ಯಂತ ಎದ್ದ ನರೇಂದ್ರ ಮೋದಿ ಅಲೆ
-ದಲಿತ ಸಮುದಾಯದ ಶ್ರೀನಿವಾಸ ಪ್ರಸಾದ್‌ಗೆ ಬಂದ ದಲಿತ ಮತ
-ಹನೂರು ಕ್ಷೇತ್ರದಲ್ಲಿ ಜೆಡಿಎಸ್‌ ಮತಗಳು ಬಿಜೆಪಿಗೆ ದೊರೆತದ್ದು

Advertisement

Udayavani is now on Telegram. Click here to join our channel and stay updated with the latest news.

Next