Advertisement

ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ ಪ್ರಸಾದ್‌ಗೆ ಗೆಲುವು

09:39 PM Apr 02, 2019 | Team Udayavani |

ಚಾಮರಾಜನಗರ: ಮೈಸೂರು- ಕೊಡಗು ಹಾಗೂ ಚಾಮರಾಜನಗರ ಲೋಕಸಭಾ ಎರಡು ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲುವು ಸಾಧಿಸಲಿದ್ದು, ಬಿಜೆಪಿ ಹಾಗೂ ಮಿತ್ರ ಪಕ್ಷಗಳು 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಭೇರಿ ಬಾರಿಸಿ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್‌ ವಿಶ್ವಾಸ ವ್ಯಕ್ತಪಡಿಸಿದರು.

Advertisement

ನಗರದ ಭ್ರಮರಾಂಬ ಮಲ್ಲಿಕಾರ್ಜುನ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಬಿಜೆಪಿ ಚುನಾಯಿತ ಪ್ರತಿನಿಧಿಗಳು ಹಾಗೂ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ದೇಶದಲ್ಲಿ ಮೋದಿ ಆಲೆ ಎದ್ದಿದೆ. ಈ ಅಲೆಯಲ್ಲಿ ಕಾಂಗ್ರೆಸ್‌ ಹಾಗೂ ಇತರೇ ಪಕ್ಷಗಳು ನಿಲ್ಲಲು ಸಾಧ್ಯವಿಲ್ಲ ಎಂದರು.

ರಾಹುಲ್‌ ಸೋಲು ಖಚಿತ: ಕಾಂಗ್ರೆಸ್‌ ಪಕ್ಷದ ಪ್ರಧಾನಿ ಅಭ್ಯರ್ಥಿ ರಾಹುಲ್‌ ಗಾಂಧಿ ಸೋಲಿನ ಭಯದಿಂದ ಉತ್ತರದಿಂದ ದಕ್ಷಿಣಕ್ಕೆ ಬಂದಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ನೆಲೆ ಕಳೆದುಕೊಂಡಿದೆ. ಬಿಜೆಪಿ, ಬಿಎಸ್ಪಿ ಹಾಗೂ ಎಸ್ಪಿ ಪಕ್ಷಗಳ ಪ್ರಬಲ ಪೈಪೋಟಿ ನಡುವೆ ರಾಹುಲ್‌ಗಾಂಧಿ ಸೋಲು ಖಚಿತ ಎಂಬ ಮಾಹಿತಿಯನ್ನು ಆ ಪಕ್ಷದ ಮುಖಂಡರೇ ಹೇಳುತ್ತಿದ್ದಾರೆ. ಹೀಗಾಗಿ ಕೇರಳದ ವೈನಾಡಿನಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಸಿದ್ದುಗೆ ಶಕ್ತಿ ಇಲ್ಲ: ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಇದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇದು ಸಾಬೀತಾಗಿದೆ. 120 ಇದ್ದ ಕಾಂಗ್ರೆಸ್‌ 78ಕ್ಕೆ ಇಳಿದಿದೆ. 40 ಇದ್ದ ಬಿಜೆಪಿ 104ಕ್ಕೆ ಏರಿಕೆಯಾಗಿದೆ. ಇದು ಸಿದ್ದರಾಮಯ್ಯನಿಗೆ ಅರ್ಥವಾಗುತ್ತಿಲ್ಲವೆ? ರಾಹುಲ್‌ಗಾಂಧಿ ಬಿಜೆಪಿ ಅಧಿಕಾರಕ್ಕೆ ಬಂದರೆ ನಮಗೆ ಕಷ್ಟ ಎಂದು ಫ‌ಲಿತಾಂಶ ಬರುವ ಮುನ್ನವೇ ಗುಲಾಮ್‌ ನಬಿ ಅಜಾದ್‌ರನ್ನು ದೇವೇಗೌಡರ ಮನೆಗೆ ಕಳುಹಿಸಲಿಲ್ಲವೇ. ಅವರಪ್ಪರಾಣೆ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಹೇಳುತ್ತಿದ್ದ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತು. ಕುಮಾರಸ್ವಾಮಿ ಬಳಿ ಕೈಕ‌ಟ್ಟಿ ನಿಲ್ಲಲ್ಲಿವೇ? ಎಂದು ತಿಳಿಸಿದರು.

ಮೈತ್ರಿ ಸರ್ಕಾರದಲ್ಲಿ ಸಮನ್ವಯತೆ ಇಲ್ಲ: ಈಗಲೂ ಸಹ ಸಿದ್ದರಾಮಯ್ಯ ಇದ್ಯಾವುದನ್ನು ಮರೆತಿಲ್ಲ. ದೇವೇಗೌಡರ ಕುಟುಂಬವನ್ನು ಮುಗಿಸುವ ಸಂಚು ರೂಪಿಸಿದ್ದಾರೆ. ಚಾಮುಂಡೇಶ್ವರಿ ಸೋಲು ಇನ್ನೂ ಸಹ ಸಿದ್ದರಾಮಯ್ಯನನ್ನು ಬಿಟ್ಟಿಲ್ಲ. ಜೆಡಿಎಸ್‌ ಕಾಂಗ್ರೆಸ್‌ ಮೈತ್ರಿಯಲ್ಲಿ ಯಾವುದೇ ಸಮನ್ವಯತೆ ಇಲ್ಲ. ಒಮ್ಮತವೂ ಸಹ ಮೂಡಿಲ್ಲ. ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ವರ್ಚಸ್ಸಿನಿಂದ ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.

Advertisement

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ 17 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಈಗ ಪಕ್ಷ ಉತ್ತಮ ಸ್ಥಿತಿಯಲ್ಲಿದೆ. ರಾಜ್ಯದಲ್ಲಿ ಯಡಿಯೂರಪ್ಪ ಪರವಾದ ಅನುಕಂಪ ಇದೆ ಹೆಚ್ಚು ಸ್ಥಾನಗಳನ್ನು ಮೋದಿ ಅವರಿಗೆ ಕೊಡುತ್ತೇವೆ ಎಂದರು.

ಬಿಎಸ್‌ವೈ ಕೈ ಬಲ ಪಡಿಸಿ: ಪಕ್ಷದ ಜಿಲ್ಲಾಧ್ಯಕ್ಷ ಪೊ›.ಕೆ.ಆರ್‌.ಮಲ್ಲಿಕಾರ್ಜುನಪ್ಪ ಮಾತನಾಡಿ, ಪಕ್ಷದ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್‌ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಪ್ರಧಾನಿ ನರೇಂದ್ರಮೋದಿಯವರು, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಕೈ ಬಲಪಡಿಸಬೇಕಿದೆ. ಪಕ್ಷದ ಪ್ರತಿಯೊಬ್ಬರು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದರೆ ವಿ.ಶ್ರೀನಿವಾಸಪ್ರಸಾದ್‌ ಅವರು ಗೆಲ್ಲುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದರು.

ಬಿಜೆಪಿಗೆ ಸೇರ್ಪಡೆ: ಕೂಡ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್‌, ಕಾಂಗ್ರೆಸ್‌ ಮುಖಂಡ ವಕೀಲರಾದ ಎಂ.ಚಿನ್ನಸ್ವಾಮಿ, ವಾಟಾಳ್‌ ಪಕ್ಷದ ಎಪಿಎಂಸಿ ಮಾಜಿ ನಿರ್ದೇಶಕ ಶಿವಕುಮಾರ್‌, ನಿವೃತ್ತ ಶಿಕ್ಷಕ ಲಿಂಗರಾಜು ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್‌, ಜಿಲ್ಲಾಧ್ಯಕ್ಷ ಪೊ›.ಕೆ.ಆರ್‌.ಮಲ್ಲಿಕಾರ್ಜುನಪ್ಪ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜೇಂದ್ರನ್‌, ಮಾಜಿ ಶಾಸಕರಾದ ಸಿ.ಗುರುಸ್ವಾಮಿ, ಭಾರತೀಶಂಕರ್‌, ಜಿ.ಪಂ. ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಸದಸ್ಯ ಬಾಲರಾಜ್‌, ಮುಖಂಡರಾದ ಸಿ. ಬಸವೇಗೌಡ, ಕೂಡೂರು ಹನುಮಂತಶೆಟ್ಟಿ, ಎಸ್‌.ಮಹದೇವಯ್ಯ, ಮಲ್ಲೇಶ್‌, ವೆಂಕಟರಮಣಸ್ವಾಮಿ (ಪಾಪು), ಮಲ್ಲೇಶ್‌, ಕೆ.ವೀರಭದ್ರಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಎಂ.ಎಸ್‌.ಫ‌ೃಥ್ವಿರಾಜ್‌, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ, ಚಂದ್ರಶೇಖರ್‌, ನಾಗೇಂದ್ರಬಾಬು, ಕುಮಾರಸ್ವಾಮಿ, ಮಹದೇವಸ್ವಾಮಿ ಮಂಗಳಮ್ಮ ಹಾಗೂ ಪಕ್ಷದ ಜನಪ್ರತಿನಿಧಿಗಳು, ಪದಾಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next