ಮುಂಬಯಿ:ಕ್ಲೀನ್ ಇಂಡಿಯಾ-ಗ್ರೀನ್ ಇಂಡಿಯಾ ಅಭಿಯಾನ ಪ್ರಚಾರಕ್ಕಾಗಿ ಹಳ್ಳಿಯ ಕನ್ನಡಿಗ ಯುವಕನೋರ್ವ ಸೋಲೋ ಸೈಕಲ್ ರೈಡಿಂಗ್ ಯಾತ್ರೆಯನ್ನು ಜಮ್ಮು ಕಾಶ್ಮೀರದಿಂದ ಆರಂಭಿಸಿದ್ದು, ಇಂದು ಮುಂಬಯಿಗೆ ಆಗಮಿಸಿ ಗೋವಾ ಮುಖಾಂತರ ಮಂಗಳೂರಿಗೆ ತೆರಳಿದ್ದಾನೆ.
25ರ ಹರೆಯದ ಮೂಲತಃ ಕಾರ್ಕಳದ ನೆಲ್ಲಿಕಾರು ಗ್ರಾಮದ ಪ್ರಸಾದ್ ವಿಜಯ್ ಶೆಟ್ಟಿ ಅವರು ಜಮ್ಮುವಿನ ತವಿಯಿಂದ ಜ. 11ರಂದು ಸೈಕಲ್ ಯಾತ್ರೆ ಆರಂಭಿಸಿದ್ದು, ಈಗಾಗಲೇ ಪಂಜಾಬ್, ದೆಹಲಿ, ಹರಿಯಾಣ, ರಾಜಸ್ಥಾನ ಮತ್ತು ಗುಜರಾತ್ ಮೂಲಕ ಸೋಮವಾರ ಮಹಾರಾಷ್ಟ್ರದ ಗಣೇಶ್‌ಪುರಿಗೆ ತಲುಪಿದ್ದು, ಬುಧವಾರ ಪನ್ವೇಲ್‌ಗೆ ಆಗಮಿಸಿದ್ದಾರೆ.
ಇಲ್ಲಿಂದ ಮುಂದೆ ಅವರು ಗೋವಾ ಮಾರ್ಗವಾಗಿ ಕರ್ನಾಟಕದ ಕುಂದಾಪುರ, ಉಡುಪಿ, ಮಂಗಳೂರು ಮುಖಾಂತರ ಕೇರಳ, ತಮಿಳುನಾಡಿನ ಕನ್ಯಾಕುಮಾರಿಗೆ ತೆರಳಲಿ ದ್ದಾರೆ. ಎಳವೆಯಿಂದಲೇ ಪರ್ವಾತರೋಹಣದಿಂದ ಆಕರ್ಷಿತ ರಾಗಿರುವ ಅವರು, ರಾಜಸ್ಥಾನದ ಮೌಂಟ್‌ಅಬುವಿನ ಸ್ವಾಮಿ ವಿವೇಕಾನಂದ ಇನ್‌ಸ್ಟಿಟ್ಯೂಟ್ ಆಫ್‌ಮೌಂಟೇನರಿಂಗ್ ಇಲ್ಲಿ ರಾಕ್‌ಲೈನ್ ಕೋರ್ಸ್‌ನ್ನು ಪೂರ್ತಿಗೊಳಿಸಿದ್ದಾರೆ.
ಪರ್ವತಾರೋಹಣದ ಬೇಸಿಕ್ ಕೋರ್ಸನ್ನು ಜಮ್ಮು-ಕಾಶ್ಮೀರದ ಪಹಲ್‌ಗಾಂವ್ ಜವಾಹರ್‌ಲಾಲ್ ನೆಹರೂ ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನರಿಂಗ್ ಆ್ಯಂಡ್ ವಿಂಟರ್ ನ್ಪೋರ್ಟ್ಸ್ ಇಲ್ಲಿ ಪಡೆದಿದ್ದಾರೆ. ಮುಂದಿನ ಅಡ್ವಾನ್ಸ್ ತರಬೇತಿಯನ್ನು ವೆಸ್ಟ್‌ಬೆಂಗಾಲ್‌ನ ದಾರ್ಜಿಲಿಂಗ್‌ನ ಹಿಮಾಲಯನ್ ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನರಿಂಗ್ ಇಲ್ಲಿ ಪಡೆದಿದ್ದಾರೆ.
ಸಿಕ್ಕಿಂನ ಖಾಬ್ರೂ ಡಾಮ್‌ನ ಮೊದಲ ಕ್ಯಾಂಪ್‌ನಲ್ಲಿ 17,500 ಅಡಿ ಎತ್ತರವನ್ನು ಏರಿದ ಸಾಧನೆಯನ್ನು ಅವರು ಈ ಮೊದಲು ಮಾಡಿದ್ದರು. ನೆಲ್ಲಿಕಾರು ಸರಕಾರಿ ಕಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಪ್ರಾರಂಭದ ಶಿಕ್ಷಣವನ್ನು ಪಡೆದ ಅವರು, ಜ್ಞಾನಭಾರತಿ ಟ್ಯುಟೋರಿಯಲ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಮುಗಿಸಿ, ತ್ರಿಡಿ ಎನಿಮೇಷನ್ ತರಬೇತಿಯನ್ನು ಪಡೆದಿದ್ದಾರೆ.
ನಿಕ್ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದ್ದ ಮೋಟು ಪತ್ಲು ಧಾರವಾಹಿಯಲ್ಲಿ ತ್ರಿಡಿ ಎನಿಮೇಷನ್‌ನಲ್ಲಿ ಕಾರ್ಯನಿರ್ವಹಿಸಿದ್ದ ಅವರು, ಹಿಮಾಚಲದ ಪ್ರದೇಶದ ಧರ್ಮಶಾಲ ಹಿಮಾಲಯಸ್ ಎಡ್ವೆಚರ್ ಟೂರ್ ಸಂಸ್ಥೆಯಲ್ಲಿ ಅಸಿಸ್ಟೆಂಟ್ ಟ್ರಕ್ ಲೀಡರ್ ಆಗಿ ಆಯ್ಕೆಯಾಗಿದ್ದಾರೆ.
ಈ ಯಾತ್ರೆಯ ಬಳಿಕ ಈಸ್ಟ್-ವೆಸ್ಟ್ ಗುಜರಾತ್-ಅಸ್ಸಾಂ ಸೈಕಲ್ ಯಾತ್ರೆ ಕೈಗೊಳ್ಳುವ ಯೋಜನೆ ರೂಪಿಸುತ್ತಿದ್ದು, ಭವಿಷ್ಯದಲ್ಲಿ ಪ್ರಾಯೋಜಕರರು ಸಿಕ್ಕಿದರೆ ಜಗತ್ತಿನ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಹತ್ತುವ ಉದ್ದೇಶವನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. ಅವರು ಕಾರ್ಕಳ ಮಾಳ ವಿಜಯ ಶೆಟ್ಟಿ ಮತ್ತು ನೆಲ್ಲಿಕಾರು ಬೇಬಿ ಶೆಟ್ಟಿ ದಂಪತಿಯ ಪುತ್ರ.