Advertisement

ಸೊಹೈಲ್‌ ವಿಕೆಟ್‌ ಬೇಟೆಯನ್ನು ನೆನಪಿಸಿಕೊಂಡ ಪ್ರಸಾದ್‌

02:21 AM Jun 13, 2020 | Sriram |

ಬೆಂಗಳೂರು: ಭಾರತ- ಪಾಕಿಸ್ಥಾನ ನಡುವಿನ ಕ್ರಿಕೆಟ್‌ ಪಂದ್ಯದ ಜೋಶ್‌ ಹೇಗಿರುತ್ತದೆಂಬುದನ್ನು ಬಣ್ಣಿ ಸುವ ಅಗತ್ಯವಿಲ್ಲ. ಬಿಗಿ ವಾತಾವರಣದಲ್ಲಿ ನಡೆಯುವ ಈ ಮುಖಾಮುಖಿ ಒಂದಲ್ಲ ಒಂದು ಪ್ರಕರಣಕ್ಕೆ, ಕಹಿ ಘಟನೆಗೆ ಸಾಕ್ಷಿ ಯಾಗಿದ್ದನ್ನೂ ಮರೆಯುವಂತಿಲ್ಲ. ಇದರಲ್ಲಿ 1996ರ ವಿಶ್ವಕಪ್‌ ಕ್ವಾರ್ಟರ್‌ ಫೈನಲ್‌ ಪಂದ್ಯದ ಪ್ರಸಾದ್‌-ಸೊಹೈಲ್‌ “ಫೇಮಸ್‌ ಸೆಂಡ್‌ಆಫ್’ ಪ್ರಕರಣವೂ ಒಂದು. 24 ವರ್ಷಗಳ ಬಳಿಕ “ವೆಂಕಿ’ ಈ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಆಗ ವಿಕೆಟಿಗೋಸ್ಕರ ತನ್ನ ರಕ್ತ ಕುದಿಯುತ್ತಿತ್ತು ಎಂದು ಹೇಳಿದ್ದಾರೆ.

Advertisement

ಅಮಿರ್‌ ಸೊಹೈಲ್‌ ಕಿರಿಕ್‌
1996ರ ಮಾ. 9ರಂದು ಬೆಂಗಳೂರಿನಲ್ಲಿ ನಡೆದ ಈ ಪಂದ್ಯದಲ್ಲಿ ಪಾಕಿಸ್ಥಾನ 288 ರನ್‌ ಚೇಸ್‌ ಮಾಡಲಿಳಿದಿತ್ತು. ವೆಂಕಟೇಶ ಪ್ರಸಾದ್‌ ಅವರ ಎಸೆತವನ್ನು ಬೌಂಡರಿಗೆ ಅಟ್ಟಿದ ಆರಂಭಕಾರ ಅಮಿರ್‌ ಸೊಹೈಲ್‌, ನಿಮ್ಮ ಮುಂದಿನ ಎಸೆತವನ್ನೂ ಬೌಂಡರಿಗೆ ಅಟ್ಟುತ್ತೇನೆ ಎಂದು ಬ್ಯಾಟ್‌ ಮೂಲಕ ಸನ್ನೆ ಮಾಡಿದರು. ಆಗ ಇಬ್ಬರ ನಡುವೆಯೂ ಮಾತಿನ ಚಕಮಕಿ ನಡೆಯಿತು. ಭಾರೀ ರೋಷದಲ್ಲಿದ್ದ ಪ್ರಸಾದ್‌ ಮುಂದಿನ ಎಸೆತದಲ್ಲೇ ಸೊಹೈಲ್‌ ಅವರನ್ನು ಕ್ಲೀನ್‌ಬೌಲ್ಡ್‌ ಮಾಡಿದ್ದರು!

ರಕ್ತ ಕುದಿಯುತ್ತಿತ್ತು!
“ಅಭಿಮಾನಿಗಳು ಆ ಘಟನೆಯನ್ನು ಜ್ಞಾಪಿಸದ ದಿನಗಳಿಲ್ಲ. 24 ವರ್ಷಗಳ ಬಳಿಕವೂ ಯಾರಾದರೊಬ್ಬರು ಈ ಬಗ್ಗೆ ನನ್ನಲ್ಲಿ ಕೇಳುತ್ತಲೇ ಇರುತ್ತಾರೆ. ಅಂದೇನು ನಡೆಯಿತು ಎಂಬುದನ್ನು ಇಡೀ ದೇಶವೇ ಗಮನಿಸಿದೆ. ನಮಗೆ ಆಗ ವಿಕೆಟ್‌ ಅಗತ್ಯವಿತ್ತು. ಇದಕ್ಕಾಗಿ ನನ್ನ ರಕ್ತ ಕುದಿಯುತ್ತಿತ್ತು…’ ಎಂದು ಪ್ರಸಾದ್‌ ಯೂ ಟ್ಯೂಬ್‌ ವೀಡಿಯೋದಲ್ಲಿ ಹೇಳಿದ್ದಾರೆ.ಈ ಒಂದು ವಿಕೆಟ್‌ಗೊಸ್ಕರ ಪ್ರಸಾದ್‌ ಮನೆಯಲ್ಲಿ ಉಡುಗೊರೆಯ ರಾಶಿಯೇ ಬಿದ್ದದ್ದು ಅಭಿಮಾನಿಗಳ ಮಹಾಸಂಭ್ರಮಕ್ಕೆ ಸಾಕ್ಷಿಯಾಗಿತ್ತು!

ಶಿಕ್ಷೆಯಿಂದ ಪಾರಾದೆ!
“ನನ್ನ ವರ್ತನೆ ಐಸಿಸಿ ನಿಯಮಕ್ಕೆ ವಿರುದ್ಧವಾಗಿತ್ತು. ಆಗ ನಾನು ಶಿಕ್ಷೆಯಿಂದ ಪಾರಾದದ್ದೇ ಆಶ್ಚರ್ಯ. ಅಂಪಾಯರ್‌ ಡೇವಿಡ್‌ ಶೆಫ‌ರ್ಡ್‌, ನಾಯಕ ಅಜರುದ್ದೀನ್‌, ಶ್ರೀನಾಥ್‌, ಸಚಿನ್‌ ಎಲ್ಲರೂ ಬಂದು ನನ್ನನ್ನು ಸಮಾಧಾನಗೊಳಿಸಿದರು. ಇಲ್ಲವಾದರೆ ನನಗೆ ದಂಡವೋ, ನಿಷೇಧವೋ ಎದುರಾಗುತ್ತಿತ್ತು’ ಎಂದು ಪ್ರಸಾದ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next