Advertisement

ಪಟೇಲರ ಗರಡಿಯಲ್ಲಿ  ಪಳಗಿ ಬೆಳೆದಿದ್ದ  ಪ್ರಸಾದ್‌

03:45 AM Jan 04, 2017 | Harsha Rao |

ಬೆಂಗಳೂರು: ಭೂ ಸುಧಾರಣೆ ಹರಿಕಾರ ದೇವರಾಜ ಅರಸು ಅವರ ಚಿಂತನೆಗಳಿಗೆ ಮಾರುಹೋಗಿ ಜೆ.ಎಚ್‌.ಪಟೇಲರ ಅನುಯಾಯಿಯಾಗಿ ಜನತಾಪಕ್ಷದ ಮೂಲಕ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿ ಕಾಂಗ್ರೆಸ್‌ನಲ್ಲಿ ಭದ್ರ ನೆಲೆ ಕಂಡುಕೊಂಡ ಎಚ್‌.ಎಸ್‌.ಮಹದೇವಪ್ರಸಾದ್‌ ಮೂರು ದಶಕಗಳ ರಾಜಕೀಯ ಅನುಭವಿ.

Advertisement

ಪ್ರಥಮ ಚುಂಬನಂ ದಂತ ಭಗ್ನಂ ಎಂಬಂತೆ ಸ್ಪರ್ಧೆ ಮಾಡಿದ ಮೊದಲ ಚುನಾವಣೆಯಲ್ಲೇ ಸೋತು, ಎರಡನೇ ಪ್ರಯತ್ನದಲ್ಲೂ ಸೋಲು ಬೆನ್ನತ್ತಿದರೂ ಛಲಬಿಡದ ತ್ರಿವಿಕ್ರಮನಂತೆ ಮರಳಿ ಯತ್ನವ ಮಾಡಿ ಮೂರನೇ ಬಾರಿಗೆ ಸ್ಪರ್ಧಿಸಿ ಜಯ ತಮ್ಮದಾಗಿಸಿಕೊಂಡು ಆ ನಂತರ ಸೋಲಿಲ್ಲದ ಸರದಾರನಾದವರು.

ಎರಡು ಚುನಾವಣೆಯಲ್ಲಿ ಸೋತ ನಂತರ ಗೆಲುವಿನ ಯಾತ್ರೆ ಮುಂದುವರಿದು ಐದು ಬಾರಿ ಸತತವಾಗಿ ಗೆದ್ದು ಬಂದ ಮಹದೇವಪ್ರಸಾದ್‌ ಜೆ.ಎಚ್‌.ಪಟೇಲ್‌ ಬಿಟ್ಟರೆ ಸಿದ್ದರಾಮಯ್ಯ ಅವರಿಗೆ ಅತಿ ಹೆಚ್ಚು ನಿಷ್ಠರಾಗಿದ್ದವರು.

ಮೂಲತಃ ರಾಜಕೀಯ ಹಿನ್ನೆಲೆ ಇದ್ದ ಕುಟುಂಬದವರಾದ ಮಹದೇವಪ್ರಸಾದ್‌ ತಂದೆ ಎಚ್‌.ಎನ್‌.ಶ್ರೀಕಂಠಶೆಟ್ಟಿ ಅವರು ತಾಲೂಕು ಅಭಿವೃದ್ಧಿ ಮಂಡಲಿ ಅಧ್ಯಕ್ಷರಾಗಿದ್ದವರು. 1978ರಲ್ಲಿ ಸಂಸ್ಥಾ ಕಾಂಗ್ರೆಸ್‌ ಹಾಗೂ 1983ರಲ್ಲಿ ಜನತಾ
ಪಕ್ಷದಿಂದ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಿಂದ ಪ್ರಭಾವಿ ರಾಜಕಾರಣಿ ಕೆ.ಎಸ್‌.ನಾಗರತ್ನಮ್ಮ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಹೀಗಾಗಿ, ರಾಜಕೀಯ ಪ್ರವೇಶಕ್ಕೆ ತಂದೆಯೇ ಮಾರ್ಗದರ್ಶಕರು.

1980ರಲ್ಲೇ ರಾಜಕೀಯ ಪ್ರವೇಶ ಮಾಡಿ ಕ್ರಾಂತಿರಂಗದ ಜತೆ ಗುರುತಿಸಿಕೊಂಡು 1985 ಹಾಗೂ 1989ರಲ್ಲಿ ಜನತಾಪಕ್ಷದಿಂದ ಸ್ಪರ್ಧಿಸಿ ಕೆ.ಎಸ್‌ .ನಾಗರತ್ನಮ್ಮ ವಿರುದ್ಧ ಸೋತ ಮಹದೇವಪ್ರಸಾದ್‌, 1994ರಲ್ಲಿ ಜನತಾದಳದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ನಂತರ 1999ರಲ್ಲಿ ಸಂಯುಕ್ತ ಜನತಾದಳದಿಂದ, 2004ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು.

Advertisement

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಧರ್ಮಸಿಂಗ್‌ ಮುಖ್ಯಮಂತ್ರಿಯಾಗಿದ್ದಾಗ ಮೊದಲ ಬಾರಿಗೆ ಸಚಿವರಾದ ಮಹದೇವಪ್ರಸಾದ್‌ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿಭಾಯಿಸಿದ್ದರು. ಸಿದ್ದರಾಮಯ್ಯ ಅವರು ಜೆಡಿಎಸ್‌ ತೊರೆದಾಗ ಎಂ.ಪಿ.ಪ್ರಕಾಶ್‌ ಜತೆ ಗುರುತಿಸಿಕೊಂಡು ನಂತರ ಅಸ್ತಿತ್ವಕ್ಕೆ ಬಂದ ಬಿಜೆಪಿ-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದ ಮಹದೇವ ಪ್ರಸಾದ್‌, ಕೆಲವೇ ದಿನಗಳಲ್ಲಿ ಎಂ.ಪಿ.ಪ್ರಕಾಶ್‌, ಅಮರೇಗೌಡ ಬಯ್ನಾಪುರ, ಸಂತೋಷ್‌ ಲಾಡ್‌, ಬಿ.ಸಿ.ಪಾಟೀಲ್‌ ಜತೆಗೂಡಿ ಕಾಂಗ್ರೆಸ್‌ ಸೇರ್ಪಡೆಗೊಂಡರು. 2008, 2013ರಲ್ಲಿ ಕಾಂಗ್ರೆಸ್‌ನಿಂದ ಜಯಗಳಿಸಿದ್ದರು.
ಅಂದಿನಿಂದ ಇಲ್ಲಿಯವರೆಗೆ ಸಿದ್ದರಾಮಯ್ಯ ಅವರ ಜತೆ ಗಟ್ಟಿಯಾಗಿ ನಿಂತವರು.

ಸಿದ್ದರಾಮಯ್ಯ ಸಂಪುಟದಲ್ಲಿ ಸಕ್ಕರೆ ಮತ್ತು ಸಹಕಾರ ಸಚಿವರಾಗಿ ಕಾರ್ಯನಿರ್ವಹಿಸಿದ ಅವರು ಸಕ್ಕರೆ ಕಾರ್ಖಾನೆ ಮಾಲಿಕರು ಹಾಗೂ ಕಬ್ಬು ಬೆಳೆಗಾರರ ಸಮಸ್ಯೆ, ಹಾಲು ಉತ್ಪಾದಕರ ಸಮಸ್ಯೆ, ರೈತರ ಸಾಲ ಮತ್ತಿತರ ವಿಚಾರಗಳಲ್ಲಿ
ಸರ್ಕಾರಕ್ಕೆ ಸಂಕಷ್ಟ ಎದುರಾದಾಗಲೆಲ್ಲಾ ನಿರಂತರ ಸಭೆ ನಡೆಸಿ ಎಲ್ಲರ ಜತೆ ಸಂಧಾನ ಮಾಡಿ ಸಮಸ್ಯೆ ಬಗೆಹರಿಸುತ್ತಿದ್ದರು. ಮೂರು ಬಾರಿ ಸಚಿವರಾಗಿದ್ದಾಗಲೂ ಚಾಮರಾಜನಗರ ಜಿಲ್ಲಾ ಉಸ್ತುವಾರಿದ್ದರು.

ರಾಜೀನಾಮೆಗೆ ಮುಂದಾಗಿದ್ದರು: ಹಿಂದೊಮ್ಮೆ ಜೆ.ಎಚ್‌.ಪಟೇಲರು ಮುಖ್ಯಮಂತ್ರಿಯಾಗಿ ಎರಡನೇ ಬಾರಿ ಸಂಪುಟ ವಿಸ್ತರಣೆ ಮಾಡಿದಾಗ ಅತ್ಯಂತ ನಿಷ್ಠನಾಗಿದ್ದ ತನಗೆ ಸಚಿವ ಸ್ಥಾನ ಕೊಡದ ಬಗ್ಗೆ ಬೇಸರಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮಹದೇವಪ್ರಸಾದ್‌ ಮುಂದಾಗಿದ್ದರು. ಆದರೆ, ಜೆ.ಎಚ್‌.ಪಟೇಲರು ಬುದ್ಧಿಮಾತು ಹೇಳಿ
ವಾಪಸ್‌ ಕಳುಹಿಸಿ, ಒಂದಲ್ಲ ಒಂದು ದಿನ ನೀನು ಸಚಿವನಾಗುತ್ತೀಯ ಹೋಗು, ಇನ್ನೂ ವಯಸ್ಸಿದೆ ಎಂದು ಹೇಳಿದ್ದರು.
ಆತ್ಮೀಯರ ಜತೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಜೆ.ಎಚ್‌.ಪಟೇಲರ ಜತೆಗಿನ ಒಡನಾಟ, ಜನತಾ ಪರಿವಾರ ಅಧಿಕಾರಕ್ಕೆ ಬಂದಾಗ ನಡೆಯುತ್ತಿದ್ದ ಒಳಜಗಳ, ಅದನ್ನು ಸರಿಪಡಿಸಲು ನಡೆಸುತ್ತಿದ್ದ ಹರಸಾಹಸದ ಬಗ್ಗೆ ಸ್ವಾರಸ್ಯಕರವಾಗಿ ವಿವರಿಸುತ್ತಿದ್ದರು.

ಜನನ: 1958ರ ಆಗಸ್ಟ್‌ 5
ಸ್ಥಳ: ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿ ಗ್ರಾಮ
ವಿದ್ಯಾಭ್ಯಾಸ: ಜೆಎಸ್‌ಎಸ್‌ ಕಾಲೇಜಿನಲ್ಲಿ ಪದವಿ
ತಂದೆ: ಎಚ್‌.ಎನ್‌.ಶ್ರೀಕಂಠಶೆಟ್ಟಿ
ತಾಯಿ: ವೀರಮ್ಮ
ಪತ್ನಿ: ಎಂ.ಸಿ.ಮೋಹನಕುಮಾರಿ
ಪುತ್ರ: ಎಚ್‌.ಎಂ.ಗಣೇಶ್‌ಪ್ರಸಾದ್‌
ಚುನಾವಣೆಗೆ ಸ್ಪರ್ಧೆ: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಿಂದ 1985 ಹಾಗೂ 89ರಲ್ಲಿ ಸ್ಪರ್ಧಿಸಿ ಸೋಲು.
ಶಾಸಕರಾಗಿ ಆಯ್ಕೆ: 1994, 1999, 2004, 2008, 2013ರಲ್ಲಿ ಸತತ ಐದು ಬಾರಿ ಶಾಸಕರಾಗಿ ಗೆಲುವು.
ಸಚಿವರಾಗಿ ಕಾರ್ಯನಿರ್ವಹಿಸಿದ್ದು: 2004ರಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಆಹಾರ ಸಚಿವರು
2007ರಲ್ಲಿ ಜೆಡಿಎಸ್‌-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಕನ್ನಡ, ಸಂಸ್ಕೃತಿ ಸಚಿವರು.
– 2013ರಿಂದ ಈಗಿನ ಕಾಂಗ್ರೆಸ್‌ ಸರ್ಕಾರದಲ್ಲಿ ಸಹಕಾರ, ಸಕ್ಕರೆ ಸಚಿವರು
– 2010ರಿಂದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ:
ಈ ಅವಧಿಯಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಪಕ್ಷ ಸಂಘಟನೆ. ಜಿ.ಪಂ. ತಾ.ಪಂ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷಕ್ಕೆ ಗೆಲುವು ತಂದುಕೊಟ್ಟರು.
– ಇತರ ಹುದ್ದೆ/ಜವಾಬ್ದಾರಿ: ಸಾಮೂಹಿಕ ವಿವಾಹ, ಆರೋಗ್ಯ ಶಿಬಿರ ಸೇರಿದಂತೆ ಇತರ ಸಾಮಾಜಿಕ ಚಟುವಟಿಕೆಗಳನ್ನು ಕೈಗೊಳ್ಳುವ ಗುಂಡ್ಲುಪೇಟೆಯ ಸಂಗಮ ಪ್ರತಿಷ್ಠಾನದ ಅಧ್ಯಕ್ಷ.
– ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಮೈಸೂರಿನ ಜ್ಞಾನಬುತ್ತಿ ಸಂಸ್ಥೆಯ ಅಧ್ಯಕ್ಷ.
– 1990ರಿಂದ 98ರವರೆಗೆ ಮೈಸೂರು ವಿವಿ ಸಿಂಡಿಕೇಟ್‌ ಸದಸ್ಯರಾಗಿ ಸೇವೆ.

ಅಜಾತ ಶತ್ರು ಮಹದೇವಪ್ರಸಾದ್‌
ಬೆಂಗಳೂರು:
ರಾಜ್ಯ ರಾಜಕಾರಣದಲ್ಲಿ “ಅಜಾತಶತ್ರು’ ಎಂದು ಗುರುತಿಸಿಕೊಂಡವರ ಸಾಲಿನಲ್ಲಿ ನಿಲ್ಲುವ ಹೆಸರು ಎಚ್‌.ಎಸ್‌.ಮಹದೇವ ಪ್ರಸಾದ್‌. ಕಾಂಗ್ರೆಸ್‌, ಜೆಡಿಎಸ್‌ ಅಷ್ಟೇ ಅಲ್ಲದೆ ಬಿಜೆಪಿ ಸಹಿತ ಎಲ್ಲ ಪಕ್ಷಗಳಲ್ಲೂ ಸ್ನೇಹಬಳಗ ಹೊಂದಿದ್ದ ಮಹದೇವ ಪ್ರಸಾದ್‌ ಎಲ್ಲರ ಜತೆಯೂ ಆತ್ಮೀಯತೆ ಹಾಗೂ ಸೌಹಾರ್ದಯುತ ವೈಯಕ್ತಿಕ ಸಂಬಂಧ
ಹೊಂದಿದ್ದವರು.

ದಿನದ 24 ಗಂಟೆಗಳ ಕಾಲ ರಾಜಕಾರಣ ಮಾಡುವ ರಾಜಕಾರಣಿಗಳ ಸಾಲಿಗೆ ಸೇರದೆ ಸಾಹಿತ್ಯ, ಸಂಸ್ಕೃತಿ ಬಗ್ಗೆಯೂ ಒಲವು ಹೊಂದಿದ್ದ (ಅವರ ಪತ್ನಿಯೂ ಲೇಖಕಿ) ಮಹದೇವಪ್ರಸಾದ್‌, ಇತರೆ ಪಕ್ಷದ ನಾಯಕರ ಜತೆ ದ್ವೇಷ ಕಟ್ಟಿಕೊಂಡವರಲ್ಲ.

ವಿಧಾನಮಂಡಲದ ಅಧಿವೇಶನ ಸಂದರ್ಭದಲ್ಲಿಯೂ ಆರೋಪ-ಪ್ರತ್ಯಾರೋಪಗಳು ಬಂದಾಗ ಮಹದೇವಪ್ರಸಾದ್‌ ವಿರುದ್ಧ ಪ್ರತಿಪಕ್ಷಗಳು ಮುಗಿಬೀಳುತ್ತಿದ್ದದ್ದು ಬಹಳ ಕಡಿಮೆ. ಏನಾದರೂ ಸಮಸ್ಯೆ ಇದ್ದರೆ ಹಿರಿಯ ಸಚಿವ ಮಹದೇವಪ್ರಸಾದ್‌ ಅವರೇ ನೀವಿರುವಾಗ ಬಗೆಹರಿಸದಿದ್ದರೆ ಹೇಗೆ ಎಂದು ಚಟಾಕಿ ಹಾರಿಸಿ ಸುಮ್ಮನಾಗುತ್ತಿದ್ದರು. ಎಲ್ಲದಕ್ಕೂ ನಗುತ್ತಲೇ ಉತ್ತರಿಸುತ್ತಿದ್ದ ಪ್ರಸಾದ್‌ ಎಂದೂ ಕೋಪಿಸಿಕೊಳ್ಳುತ್ತಿರಲಿಲ್ಲ. ಹೀಗಾಗಿ, ಮೂಲತಃ ಸೌಮ್ಯ ಸ್ವಭಾವದ ಮಹದೇವ ಪ್ರಸಾದ್‌ ಬಗ್ಗೆ ಎಲ್ಲ ರಾಜಕಾರಣಿಗಳು ಪ್ರೀತಿ ಬೆಳೆಸಿಕೊಂಡಿದ್ದರು.

ರಾಜಕೀಯವಾಗಿ ಜನತಾ ಪರಿವಾರ, ನಂತರ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದರಾದರೂ ಹಿಂದೊಮ್ಮೆ 2008ರಲ್ಲಿ ಬಿಜೆಪಿ ಜತೆ ಹೋಗುತ್ತಾರೆ, ಜಾತಿ ಕಾರಣದಿಂದ ಬಿ.ಎಸ್‌.ಯಡಿಯೂರಪ್ಪ ಅವರ ಜತೆ ಆತ್ಮೀಯತೆ ಇದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಬಿಜೆಪಿಯಿಂದಲೂ ಆಹ್ವಾನ ಸಹ ಇತ್ತು. ಆದರೆ, ಪಕ್ಷಾಂತರ ಮಾಡದೆ ಕಾಂಗ್ರೆಸ್‌ನಲ್ಲೇ
ಉಳಿದ ಮಹದೇವಪ್ರಸಾದ್‌ ಚುನಾವಣೆಯಲ್ಲಿ ಆಯ್ಕೆಯಾಗಿ ಪ್ರತಿಪಕ್ಷದಲ್ಲೇ ಕುಳಿತು ಕೆಲಸ ಮಾಡಿ 2013ರಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ದೊರಕಿಸಿಕೊಡುವಲ್ಲಿಯೂ ಯಶಸ್ವಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next