ಮೈಸೂರು: ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್
ಬೆಂಬಲಿಗರ ಒತ್ತಡಕ್ಕೆ ಮಣಿದು ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ತೀವ್ರಗೊಂಡಿದೆ.
ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ಶ್ರೀನಿವಾಸ ಪ್ರಸಾದ್ ಅವರ ನಿವಾಸಕ್ಕೆ ಗುರುವಾರ ಆಗಮಿಸಿದ ಚಾಮರಾಜನಗರ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವಆರ್.ಧ್ರುವನಾರಾಯಣ ವಿರುದ್ಧ ಸ್ಪರ್ಧೆ ಮಾಡುವಂತೆ ಒತ್ತಡ ಹೇರಿದರು.
ನಂಜನಗೂಡು ಉಪ ಚುನಾವಣೆ ಸಮಯದಲ್ಲೇ ನಾನು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದೇನೆ. ನಾನು ಚುನಾವಣೆಗೆ ಸ್ಪರ್ಧಿಸುವ ಮನಸ್ಥಿತಿಯಲ್ಲಿಲ್ಲ. ಚಾಮರಾಜ ನಗರ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಪರ ಒಟ್ಟಾಗಿ ದುಡಿದು ಗೆಲ್ಲಿಸಿಕೊಳ್ಳೋಣ ಎಂದು ತಿಳಿ ಹೇಳಿ ದರು. ಪಟ್ಟು ಬಿಡದಿದ್ದರಿಂದ, ಈ ಬಗ್ಗೆ ಶುಕ್ರವಾರ ಅಂತಿಮ ನಿರ್ಧಾರ ತಿಳಿಸುವುದಾಗಿ ಭರವಸೆ ನೀಡಿ ಕಳುಹಿಸಿದರು.
ಬಿಎಸ್‌ವೈ ಜತೆ ಚರ್ಚೆ ಇಂದು: ಒತ್ತಡಕ್ಕೆ ಮಣಿದ ಶ್ರೀನಿವಾಸ ಪ್ರಸಾದ್ ಅವರು ಶುಕ್ರವಾರ ತಮ್ಮ ನಿರ್ಧಾರ ತಿಳಿಸುವುದಾಗಿ ಹೇಳಿ ಬೆಂಗಳೂರಿಗೆ ತೆರಳಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಶುಕ್ರವಾರ ತಮ್ಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಮನಸ್ಥಿತಿಯಲ್ಲಿಲ್ಲ. ಆದರೆ, ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಒತ್ತಡ ಹೆಚ್ಚಾಗಿದೆ. ಅವರ ಮನವಿಯನ್ನು ಪುರಸ್ಕರಿಸಬೇಕೋ,
ತಿರಸ್ಕರಿಸಬೇಕೋ ಎಂಬುದು ತಿಳಿಯುತ್ತಿಲ್ಲ.ಬಿಜೆಪಿಯ ಹೈಕಮಾಂಡ್ ಕೂಡ ನನಗೆ ಟಿಕೆಟ್ ನೀಡಲು ಮುಂದಾಗಿದೆ. ಈ ಬಗ್ಗೆ ಶೀಘ್ರದಲ್ಲೇ ನಿರ್ಣಯ ಕೈಗೊಳ್ಳುತ್ತೇನೆ.
● ಶ್ರೀನಿವಾಸಪ್ರಸಾದ್, ಮಾಜಿ ಸಚಿವ