ತಿ.ನರಸೀಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನಲ್ಲಿ ದಲಿತ ನಾಯಕರಾದ ಮಾಜಿ ಸಚಿವ ವಿ.ಶ್ರೀನಿವಾಸ್‌ಪ್ರಸಾದ್ ಸಿಂಹಸ್ವಪ್ನವಾಗಿ ಕಾಡುತ್ತಿರುವುದರಿಂದಲೇ ನಂಜನಗೂಡಿನಲ್ಲಿ ಅವರನ್ನು ಸೋಲಿಸುವುದೇ ತನ್ನ ಗುರಿ ಎಂಬ ಮಾತುಗಳನ್ನಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಎಸ್ಸಿ ಮೋರ್ಚಾದ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್ ಹೇಳಿದರು.
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮೂರನ್ನು ಬಿಟ್ಟಿದ್ದರಿಂದಲೇ ಹಿರಿಯ ದಲಿತ ನಾಯಕರೊಬ್ಬರಿಗೆ ಹೆದರಿಕೊಂಡು ಚುನಾವಣೆ ಘೋಷಣೆಯಾಗುವ ಮೊದಲೇ ಸ್ನೇಹಿತರೊಬ್ಬರ ಮನೆಯಲ್ಲಿನ ಊಟಕ್ಕೆ ತೆರಳಿ ಸೋಲಿಸುವುದೇ ಗುರಿ ಎನ್ನುತ್ತಿದ್ದಾರೆ. ಐದು ಭಾರಿ ಸಂಸತ್ ಸದಸ್ಯ, ಕೇಂದ್ರದಲ್ಲಿ ಸಚಿವರು ಮತ್ತು ಎರಡು ಬಾರಿ ಶಾಸಕರಾಗಿ ಸಚಿವರಾಗಿರುವ ಶ್ರೀನಿವಾಸ್ ಪ್ರಸಾದ್ ಅವರ ಮುಂದೆ ಸಿದ್ದರಾಮಯ್ಯ ದುರ್ಬಲರೇ ಎಂದು ಸಿಎಂ ಅವರನ್ನು ಕುಟುಕಿದರು.
ಲೋಕೋಪಯೋಗಿ ಅತಿಥಿ ಗೃಹದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಹುಸಂಖ್ಯಾತ ದಲಿತ ಸಮುದಾಯಕ್ಕೆ ಸಿದ್ದರಾಮಯ್ಯ ಅವರಂತೂ ನಾಯಕರಲ್ಲ. ಆಡಳಿತದಲ್ಲಿ ಭ್ರಷ್ಟಚಾರ ತಡೆಗಟ್ಟುವುದು, ಯೋಗ್ಯರನ್ನು ಮಂತ್ರಿ ಮಂಡಲದಲ್ಲಿ ಇಟ್ಟುಕೊಂಡು ಉತ್ತಮ ಸರ್ಕಾರವನ್ನು ಜನರಿಗೆ ನೀಡಬೇಕಾದ ಕರ್ತವ್ಯವಿದ್ದರೂ ಸೋಲಿನ ಭೀತಿಯಿಂದ ಅದನ್ನೇಲ್ಲಾ ಬಿಟ್ಟು ಸೋಲಿಸುವುದೇ ಅವರ ಗುರಿಯಂತೆ.
ಮುಖ್ಯಮಂತ್ರಿಗಳ ದುರಹಂಕಾರದಿಂದಲೇ ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಅವಮಾನವಾದರೂ ಹೇಳಿದಂತೆ ಕೇಳಿಕೊಂಡು ಬಿದ್ದಿರಲು ಪ್ರಸಾದ್ ಅವರು ಡಾ.ಎಚ್.ಸಿ.ಮಹದೇವಪ್ಪ ಅಥವಾ ಡಾ.ಜಿ.ಪರಮೇಶ್ವರ ಅವರಲ್ಲ ಎಂದು ವ್ಯಂಗ್ಯವಾಡಿದರು. ಮೂಲ ಕಾಂಗ್ರೆಸ್ಸಿಗರಾದ ಮಾಜಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ, ಜಾಫರ್ ಷರೀಫ್ ಹಾಗೂ ಎಚ್.ವಿಶ್ವನಾಥ್ ಈಗ ಬೀದಿಗೆ ಬಿದ್ದಿದ್ದಾರೆ.
ಸ್ವ ಸಾಮರ್ಥ್ಯದ ಮೇಲೆಯೇ ಶ್ರೀನಿವಾಸ್‌ಪ್ರಸಾದ್ ಕಾಂಗ್ರೆಸ್ ಸರ್ಕಾರದಲ್ಲಿ ಹೈಮಾಂಡ್ ಬೆಂಬಲದಿಂದಲೇ ಸಚಿವರಾಗಿದ್ದರು. ನಂಜನಗೂಡು ಕ್ಷೇತ್ರದ ಮತದಾರರು ದಡ್ಡರಲ್ಲ, ಎಲ್ಲಾ ವರ್ಗದ ಜನರ ಪ್ರೀತಿಯನ್ನು ಗಳಿಸಿರುವುದರಿಂದ ಬಿಜೆಪಿಗೆ ಗೆಲುವು ಕಟ್ಟಿಟ್ಟ ಬುತ್ತಿ. ಎಲ್ಲಾ ಆರೋಪಗಳಿಂದ ಮುಕ್ತರಾಗಿರುವ ಬಿ.ಎಸ್.ಯಡಿಯೂರಪ್ಪ ಮಾಡುತ್ತಿರುವ ಗಂಭೀರ ಆರೋಪಗಳ ವಿರುದ್ಧವೂ ಕಾನೂನು ಕ್ರಮ ತೆಗೆದುಕೊಳ್ಳುವುದರ ಬದಲು ಮಾಧ್ಯಮಗಳ ಮುಂದೆ ಪ್ರತಿ ಟೀಕೆ ಮಾಡುತ್ತಿದ್ದಾರೆ ಎಂದು ಸಿ.ರಮೇಶ್ ಆರೋಪಿಸಿದರು.
ಭೈರಾಪುರ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಟೌನ್ ಅಧ್ಯಕ್ಷ ಬಿ.ವೀರಭದ್ರಪ್ಪ ಮಾತನಾಡಿ, ಸ್ವಾಭಿಮಾನಿ ದಲಿತ ಸಮುದಾಯದ ಹೋರಾಟಗಾರ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ಮಣಿಸಲಾಗದ ಭೀತಿಯಲ್ಲಿ ಮುಖ್ಯಮಂತ್ರಿಗಳು ಲಘುವಾಗಿ ಮಾತನಾಡಿದ್ದಾರೆ. ಹಾಲಹಳ್ಳಿಯಲ್ಲಿ ನಡೆದ ದಿವಂಗತ ಎಚ್.ಎಸ್.ಮಹದೇವಪ್ರಸಾದ್ ಅವರ ಮಹಾಸ್ಮರಣೆಯಲ್ಲಿ ಸಂತಾಪದ ಮಾತುಗಳನ್ನಾಡುವ ಬದಲು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಘನತೆಗೆ ತಕ್ಕುದಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ನಡವಳಿಕೆಯನ್ನು ಸರಿಪಡಿಸಿಕೊಳ್ಳದಿದ್ದರೆ ದುಷ್ಪಾರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಪುರಸಭೆ ಉಪಾಧ್ಯಕ್ಷೆ ರತ್ನಮ್ಮ, ಪಪಂ ಮಾಜಿ ಸದಸ್ಯ ಮೂರ್ತಿ, ಬಿಜೆಪಿ ಟೌನ್ ಪ್ರಧಾನ ಕಾರ್ಯದರ್ಶಿ ಎಸ್. ದಿಲೀಪ, ಜಿಲ್ಲಾ ಎಸ್ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರಾಜಣ್ಣ, ಮುಖಂಡ ವಿಶ್ವ, ರಾಜೇಶ ಹಾಗೂ ಇನ್ನಿತರರು ಉಪಸ್ಥಿತರಿದ್ದರು.