ಮಣಿಪಾಲ್ : ಕೋವಿಡ್ ಎರಡನೇ ಅಲೆಯ ಪರಿಣಾಮ ದೇಶದಲ್ಲಿ ಜೀವವಾಯು ಆಕ್ಸಿಜನ್‍ಗಾಗಿ ಪರದಾಟ ಶುರುವಾಗಿದೆ. ಕೋವಿಡ್ ಸೋಂಕಿನಿಂದ ನರಳುತ್ತಿರುವವರಿಗೆ ಆಮ್ಲಜನಕ ಪೂರೈಕೆ ಮಾಡಲು ಸರ್ಕಾರಗಳು, ಆಸ್ಪತ್ರೆಗಳು ಪರದಾಡುತ್ತಿವೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಗಂಗಾವತಿ ಪ್ರಾಣೇಶ್ ಅವರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸದ್ಯ ಎದುರಾಗಿರುವ ಆಕ್ಸಿಜನ್ ಹಾಹಾಕಾರದ ಮುನ್ಸೂಚನೆ ಐದು ವರ್ಷಗಳ ಹಿಂದೆಯೇ ಹಾಸ್ಯ ಮಾತುಗಾರ,ವಾಘ್ಮಿ ಗಂಗಾವತಿ ಪ್ರಾಣೇಶ್ ಅವರು ನೀಡಿದ್ದರು. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ಮುಂದಿನ ಕೆಲವು ವರ್ಷಗಳಲ್ಲಿ ಎದುರಾಗಬಹುದಾದ ಆಮ್ಲಜನಕದ ಕೊರತೆ ಬಗ್ಗೆ ಹೇಳಿದ್ದರು. ಪರಿಸರ ನಾಶದಿಂದ, ಗಿಡ-ಮರಗಳ ಕಡಿತದಿಂದ ಮುಂದೊಂದು ದಿನ ನಾವು ತೊಂದರೆ ಪಡಬೇಕಾಗುತ್ತದೆ. ಇಂದು ಪ್ರಕೃತಿಯಿಂದ ಉಚಿತವಾಗಿ ಪಡೆಯುತ್ತಿರುವ ಆಮ್ಲಜನಕಕ್ಕೆ ನಾವು ಲಕ್ಷಾಂತರ ರೂಪಾಯಿ ಖರ್ಚು ಮಾಡುವಂತಹ ದಿನಗಳ ಬರಲಿವೆ ಎಂದು ಅಭಿನವ ಬೀಚಿ ಪ್ರಾಣೇಶ್ ಎಚ್ಚರಿಸಿದ್ದರು.
ಅಂದು ಪ್ರಾಣೇಶ್ ಅವರು ಹೇಳಿರುವ ಮಾತುಗಳು ಇಂದು ಪ್ರಸ್ತುತ ಎನ್ನಿಸುತ್ತಿವೆ. ನಿಜಕ್ಕೂ ಇಂದು ದೇಶದಲ್ಲಿ ಆಕ್ಸಿಜನ್ ಅಭಾವ ಎದುರಾಗಿದೆ. ದುಡ್ಡು ಕೊಟ್ಟರೂ ಆಮ್ಲಜನಕ ಸಿಗದಂತಾಗಿದೆ.
ಪ್ರಾಣೇಶ್ ಅವರು ಐದು ವರ್ಷಗಳ ಹಿಂದೆ ಮಾತನಾಡಿರುವ ವಿಡಿಯೋ ಇದೀಗ ಮುನ್ನೆಲೆಗೆ ಬಂದಿದೆ. ಸೋಷಿಯಲ್ ಮೀಡಿಯಾ ತಾಣಗಳಾದ ಟ್ವಿಟರ್, ಇನ್‍ಸ್ಟಾಗ್ರಾಂ ಹಾಗೂ ವಾಟ್ಸಾಪ್‍ಗಳಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ಸಹಜ ಹಾಸ್ಯದ ಮೂಲಕ ನಮ್ಮನ್ನು ಎಚ್ಚರಿಸುತ್ತಿರುವ ಪ್ರಾಣೇಶ್ ಅವರ ಮುಂದಾಲೋಚನೆ ಹಾಗೂ ಸಾಮಾಜಿಕ ಕಳಕಳಿಗೆ ಎಲ್ಲರೂ ತಲೆ ಬಾಗುತ್ತಿದ್ದಾರೆ.