Advertisement
ಪ್ರಾಣಾಯಾಮದಲ್ಲಿ ಇಡಾ, ಪಿಂಗಲಾ, ಸುಷುಮ್ನ ಎಂದು ಮೂರು ನಾಡಿಗಳಾಗಿ ವಿಂಗಡಿಸಲಾಗಿದೆ. ಮೂಗಿನ ಎರಡು ಹೊರಳೆಗಳ ಮೂಲಕ ಉಸಿರಾಟ ಪ್ರಕ್ರಿಯೆ ನಡೆಯುತ್ತದೆ. ಎಡ ಹೊರಳೆ ಚಂದ್ರನಾಡಿಯಾಗಿದ್ದು, ಇದು ಶೀತಕಾರಕವಾಗಿದೆ. ಬಲ ಹೊರಳೆ ಸೂರ್ಯನಾಡಿಯಾಗಿದ್ದು, ಇದು ಉಷ್ಣಕಾರಕವಾಗಿದೆ. ಸುಷುಮ್ನ ನಾಡಿಯು ಎರಡು ನಾಡಿಗಳ ಮಧ್ಯದಲ್ಲಿ ಬೆನ್ನು ಹುರಿಯಿಂದ ನೆತ್ತಿಯವರೆಗೆ ಇರಲಿದೆ.
Related Articles
Advertisement
ನಾಡಿಶೋಧನ: ನಾಡಿಗಳನ್ನು ಶುದ್ಧಗೊಳಿಸುತ್ತದೆ. ಯಾವುದೇ ಅಡೆತಡೆಗಳನ್ನು ನಿವಾರಿಸುತ್ತದೆ. ಮನಸ್ಸನ್ನು ಪ್ರಶಾಂತಗೊಳಿಸಿ ಒತ್ತಡ, ಆತಂಕಗಳನ್ನು ಕಡಿಮೆಗೊಳಿಸಿ ಹೊಸ ಚೈತನ್ಯ ಮೂಡಿಸುತ್ತದೆ. ಅಸ್ತಮಾ, ಅಲರ್ಜಿ,ಬ್ರಾಂಕೈಟಿಸ್ ಮತ್ತಿತರ ಉಸಿರಾಟದ ಸಮಸ್ಯೆಗಳ ನಿವಾರಣೆಗೆ ಸಹಕಾರಿಯಾಗಲಿದೆ. ಉಜ್ಜಾಯಿ: ಥೈರಾಯ್ಡ್, ಪ್ಯಾರಾ ಥೈರಾಯ್ಡ್ ನಿವಾರಣೆಗೆ ಈ ಪ್ರಾಣಾಯಾಮ ಸಹಕಾರಿ. ಅಧಿಕ ರಕ್ತದೊತ್ತಡ, ಆತಂಕ, ಒತ್ತಡ ಕಡಿಮೆಯಾಗುತ್ತದೆ. ಭ್ರಮರಿ: ನಿದ್ರಾಹೀನತೆ, ಅಧಿಕ ರಕ್ತದೊತ್ತಡ, ಆತಂಕ, ಒತ್ತಡ ಕ್ಷೀಣಿಸಲಿದೆ. ಗಾಯಕರಿಗೆ ಉತ್ತಮವಾದ ಧ್ವನಿಗೆ ಭ್ರಮರಿ ತುಂಬಾ ಸಹಕಾರಿಯಾಗಿದೆ. ಪೂರ್ಣ ಯೋಗ ಉಸಿರಾಟ: ಶ್ವಾಸಕೋಶದ ಸಾಮರ್ಥ್ಯವನ್ನು ವೃದ್ಧಿಸಲಿದೆ. ಆಳ, ಗಾಢವಿಲ್ಲದ ಉಸಿರಾಟದ ಸಂದರ್ಭದಲ್ಲಿ ಇದು ಸಾಕಷ್ಟು ಅನುಕೂಲವಾಗಲಿದೆ. ಸೂರ್ಯ ಅನುಲೋಮ ವಿಲೋಮ: ತುಂಬಾ ಮಾನಸಿಕ ಖನ್ನತೆಗೆ ಒಳಗಾದ ರೋಗಿಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಚಂದ್ರ ಅನುಲೋಮ ವಿಲೋಮ: ಅಧಿಕ ರಕ್ತದೊತ್ತಡ, ಕಡಿಮೆ ತೂಕ, ಹೈಪರ್ ಆ್ಯಸಿಡಿಟಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಸೂರ್ಯ ಭೇದನ: ಎಡ ಮೂಗಿನ ಹೊರಳೆ ತಡೆಗಟ್ಟುವಿಕೆ, ಕಡಿಮೆ ರಕ್ತದೊತ್ತಡ, ಮಧುಮೇಹ ನಿವಾರಣೆ, ತೂಕ ನಿರ್ವಹಣೆಗೆ ಸಹಕಾರಿಯಾಗಿದೆ. ಚಂದ್ರ ಭೇದನ: ಬಲ ಮೂಗಿನ ಹೊರಳೆ ತಡೆಗಟ್ಟುವಿಕೆ, ಅಧಿಕ ರಕ್ತದೊತ್ತಡ ಶಮನಕ್ಕೆ ನೆರವಾಗಲಿದೆ. ಸದಂತ ಪ್ರಾಣಾಯಾಮ: ಬೇಸಗೆ ವೇಳೆ ಹೆಚ್ಚಿನ ಶಾಖವಿದ್ದರೆ ದೇಹ ತಂಪಾಗಲಿದೆ. ತಣ್ಣನೆ ಅನುಭವ ನೀಡಲಿದೆ. ಆಮ್ಲಿಯತೆ, ಸುಡುವ ಸಂವೇದನೆ ಸಂದರ್ಭದಲ್ಲಿ ಸಹಾಯವಾಗಲಿದೆ. ಧ್ಯಾನ ಸ್ವಯಂ ಸಾಕ್ಷಾತ್ಕಾರದ ವಿಧಾನ
ಧ್ಯಾನ ಅಷ್ಟಾಂಗ ಯೋಗದ ಏಳನೇ ಅಂಗವಾಗಿದೆ. ಮನಸ್ಸಿನ ಗೊಂದಲಗಳನ್ನು ನಿವಾರಿಸಿ ಪ್ರಶಾಂತ, ಹೊಸ ಚೈತನ್ಯ ಮೂಡಿಸುತ್ತದೆ. ಧ್ಯಾನಸ್ಥ ಸ್ಥಿತಿಯು ಅಸ್ತಿತ್ವದ ಅತ್ಯುನ್ನತ ಸ್ಥಿತಿಯಾಗಿದೆ. ಉಸಿರಾಟವು ಭೌಗೋಳಿಕವಾಗಿ ಇರುವಂತೆ ಆಧ್ಯಾತ್ಮಿಕ ಜೀವನಕ್ಕೆ ಇದು ಅನಿವಾರ್ಯವಾಗಿದೆ. ಧ್ಯಾನವನ್ನು ಪ್ರಜ್ಞೆ ಹಾಗೂ ಅರಿವಿನ ವ್ಯಾಯಾಮ ಎಂದು ಕರೆಯಲಾಗುತ್ತದೆ. ಇದು ಮಾನಸಿಕ ಪ್ರಕ್ರಿಯೆಯಾಗಿದ್ದು, ಇದರಲ್ಲಿ ಚಿಂತನೆ ಹಾಗೂ ಅರ್ಥಗರ್ಭಿತ ಗ್ರಹಿಕೆಗಳು ನಡೆಯುತ್ತವೆ. ಇದು ಸ್ವಯಂ ಸಾಕ್ಷಾತ್ಕಾರದ ಒಂದು ವಿಧಾನವಾಗಿದೆ. ಧ್ಯಾನದ ವಿಧಾನಗಳು: ಓಂ ಧ್ಯಾನ, ಚಕ್ರಧ್ಯಾನ, ಮೌನಧ್ಯಾನ, ಜಪಧ್ಯಾನ, ನಾದನುಸಂಧಾನ ಮತ್ತಿತರ ವಿಧಾನಗಳಲ್ಲಿ ಧ್ಯಾನ ಮಾಡಬಹುದು. ಧ್ಯಾನ ಮಾಡಲು ಸರಿಯಾದ ಅಥವಾ ತಪ್ಪು ಮಾರ್ಗವಿಲ್ಲ. ಇದು ವೈಯಕ್ತಿಕ ಅಗತ್ಯತೆಗಳು ಹಾಗೂ ಆಸಕ್ತಿಯನ್ನು ಅವಲಂಬಿಸಿರುತ್ತದೆ. ಒಬ್ಬರು ಸುಮ್ಮನೆ ಕುಳಿತು ಕೇಂದ್ರೀಕೃತ ಉಸಿರಾಟದ ಮೇಲೆ ಗಮನಿಸಬಹುದು. ಇದು ಅವರಿಗೆ ಧ್ಯಾನವಾಗುತ್ತದೆ. -ಜಿ.ಆರ್.ಲಾವಣ್ಯ ಎಂ.ಎಸ್ಸಿ
ಯೋಗ ಶಿಕ್ಷಕಿ, ಬೆಂಗಳೂರು