ನಾಂಜಿಂಗ್ (ಚೀನ): ಸೋಮವಾರ ಮೊದಲ್ಗೊಂಡ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಎಚ್.ಎಸ್. ಪ್ರಣಯ್, ಮನು ಅತ್ರಿ-ಬಿ. ಸುಮಿತ್ ರೆಡ್ಡಿ, ಪ್ರಣವ್ ಜೆರ್ರಿ ಚೋಪ್ರಾ-ಎನ್. ಸಿಕ್ಕಿ ರೆಡ್ಡಿ ಜೋಡಿ ದ್ವಿತೀಯ ಸುತ್ತು ತಲುಪಿದೆ.
ಪುರುಷರ ಸಿಂಗಲ್ಸ್‌ನಲ್ಲಿ 11ನೇ ಶ್ರೇಯಾಂಕದ ಎಚ್.ಎಸ್. ಪ್ರಣಯ್ ನ್ಯೂಜಿಲ್ಯಾಂಡಿನ ಅಭಿನವ್ ಮನೋಟಾ ವಿರುದ್ಧ ಕೇವಲ 28 ನಿಮಿಷಗಳ ಹೋರಾಟ ನಡೆಸಿ 21-12, 21-11 ಅಂತರದ ಗೆಲುವು ದಾಖಲಿಸಿದರು.
ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ-ಬಿ. ಸುಮಿತ್ ರೆಡ್ಡಿ ಬಲ್ಗೇರಿಯದ ಡೇನಿಯಲ್ ನಿಕೊಲೋವ್-ಇವಾನ್ ರುಸೇವ್ ವಿರುದ್ಧ 21-13, 21-18 ಅಂತರದಿಂದ ಗೆದ್ದು ಬಂದರು. ಮಿಶ್ರ ಡಬಲ್ಸ್‌ನಲ್ಲೂ ಭಾರತ ಗೆಲುವಿನ ಆರಂಭ ಕಂಡುಕೊಂಡಿತು. ಪ್ರಣವ್ ಜೆರ್ರಿ ಚೋಪ್ರಾ-ಎನ್. ಸಿಕ್ಕಿ ರೆಡ್ಡಿ ಸೇರಿಕೊಂಡು ಜೆಕ್ ಗಣರಾಜ್ಯದ ಜಾಕುಬ್ ಬಿಟ್‌ಮ್ಯಾನ್-ಅಲ್‌ಬೆಟ ಬಸೋವಾ ವಿರುದ್ಧ 21-17, 21-15 ಅಂತರದಿಂದ ಮಣಿಸಿದರು.
ಆದರೆ ವನಿತಾ ಡಬಲ್ಸ್‌ನಲ್ಲಿ ಸಂಯೋಗಿತಾ ಘೋರ್ಪಡೆ-ಪ್ರಜಕ್ತಾ ಸಾವಂತ್ ಮೊದಲ ಸುತ್ತಿನಲ್ಲೇ ಎಡವಿದ್ದಾರೆ. ಟರ್ಕಿಯ ಬೆಂಗಿಸು ಇರ್ಸೆಟಿನ್-ನಝಿÉಕಾನ್ ಇಂಚಿ ಭಾರತೀಯ ಜೋಡಿಯ ವಿರುದ್ಧ 22-20, 21-14 ಅಂತರದ ಜಯ ಸಾಧಿಸಿದರು.
ಹಾಲಿ ಚಾಂಪಿಯನ್ ಮುನ್ನಡೆ
ಇತರ ಪಂದ್ಯಗಳಲ್ಲಿ ಪುರುಷರ ಸಿಂಗಲ್ಸ್ ವಿಭಾಗದ ಹಾಲಿ ಚಾಂಪಿಯನ್, ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್ ಪೋರ್ಚುಗಲ್‌ನ ಡ್ಯುರ್ಟೆ ಅಂಜೊ ಅವರನ್ನು 21-8, 21-7ರಿಂದ; ಆಲ್ ಇಂಗ್ಲೆಂಡ್ ಚಾಂಪಿಯನ್, ಚೀನದ ಶಿ ಯುಕಿ ಜೆಕ್ ಗಣರಾಜ್ಯದ ಆ್ಯಡಂ ಮೆಂಡ್ರೆಕ್ ಅವರನ್ನು 21-13, 21-11ರಿಂದ ಮಣಿಸಿದರು.