ಬೆಂಗಳೂರು: ವಿಧಾನಸೌಧ-ವಿಕಾಸಸೌಧದ ಕೆಲವು ಸಚಿವರ ಕೊಠಡಿಗಳಲ್ಲಿ ನೂತನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭಾವಚಿತ್ರ ಇನ್ನೂ ಅಳವಡಿಸಿಲ್ಲ.ಹೀಗಾಗಿ ಇವರ ಪಾಲಿಗೆ ಇನ್ನೂ ಪ್ರಣಬ್ ಮುಖರ್ಜಿ ಅವರೇ ರಾಷ್ಟ್ರಪತಿ!
ನೂತನ ರಾಷ್ಟ್ರಪತಿಗಳು ಅಧಿಕಾರ ಸ್ವೀಕರಿಸಿ ತಿಂಗಳ ಮೇಲಾದರೂ ಶಕ್ತಿ ಸೌಧ ವಿಧಾನಸೌಧ-ವಿಕಾಸಸೌಧದ ಕೆಲವು ಸಚಿವರ ಕೊಠಡಿಗಳಲ್ಲಿ ಇನ್ನೂ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಚಿತ್ರವೇ ಇದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಬಹುತೇಕ ಸಚಿವರು ಇನ್ನೂ ರಾಮನಾಥ್ ಕೋವಿಂದ್‌ರ ಫೋಟೋ ಪಡೆದು ಅಳವಡಿಸಿಲ್ಲ ಎಂದೂ ಹೇಳಲಾಗಿದೆ.ವಿಕಾಸಸೌಧದಲ್ಲಿರುವ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರ ಕಚೇರಿಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಚಿತ್ರ ಇಲ್ಲದಿರುವುದನ್ನು ಪ್ರತಿ ಪಕ್ಷ ನಾಯಕ ಜಗದೀಶ್ ಶೆಟ್ಟರ್ ಪತ್ತೆ ಹಚ್ಚಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರು ಚಲೋಗೆ ಭದ್ರತೆ ಒದಗಿಸುವಂತೆ ಕೋರಲು ಗೃಹ ಸಚಿವರ ಕೊಠಡಿಗೆ ಬಿಜೆಪಿ ನಿಯೋಗ ಒಯ್ದಿದ್ದ ಶೆಟ್ಟರ್, ಅಲ್ಲಿ ಕೋವಿಂದ್ ಪೋಟೋ ಇಲ್ಲದಿರುವುದು ಗಮನಿಸಿದರು. ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ನೂತನ ರಾಷ್ಟ್ರಪತಿಯಾಗಿ ಇಷ್ಟು ದಿನವಾದರೂ ಇನ್ನೂ ಪ್ರಣಬ್ ಮುಖರ್ಜಿ ಅವರ ಚಿತ್ರವೇ ಕೊಠಡಿಗಳಲ್ಲಿ ಇದೆ. ಇದು ದಲಿತರಿಗೆ ಮಾಡಿದ ಅವಮಾನ. ದಲಿತ ವ್ಯಕ್ತಿಯೊಬ್ಬರು ಉನ್ನತ ಹುದ್ದೆಗೇರಿದ್ದರೂ ಅವರ ಚಿತ್ರ ಹಾಕದೆ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಪ್ರತಿ ಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ,ಸಿದ್ದರಾಮಯ್ಯ ಸರ್ಕಾರ ನಿದ್ದೆ ಮಾಡುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ದೂರಿದರು. ದಲಿತ ವ್ಯಕ್ತಿಯೊಬ್ಬರು ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಿದ್ದಾರೆ. ಆದರೆ ಅವರ ಭಾವಚಿತ್ರ ಹಾಕದೆ ಅವಮಾನ ಮಾಡಲಾಗಿದೆ ಕಿಡಿಕಾರಿದರು.
ಈ ಕುರಿತು ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ ಅಧಿಕಾರಿಯನ್ನು ಕೇಳಿದರೆ, ನೂತನ ರಾಷ್ಟ್ರಪತಿಯವರ ನಿಗದಿತ ಚಿತ್ರ ನಮಗೆ ಬಂದಿದ್ದು ತಡವಾಯಿತು. ನಂತರ ವಾರ್ತಾ ಮತ್ತು ಪ್ರಸಾರ ಇಲಾಖೆ ಕಡೆಯಿಂದ ಅದನ್ನು ಪ್ರಿಂಟ್ ಮಾಡಿಸಿ ಕಟ್ ಹಾಕಿಸಿ ಪಡೆಯಲಾಗಿದೆ. ಚಿತ್ರ ಸಿದ್ಧವಿದ್ದು ಪಡೆದುಕೊಳ್ಳುವಂತೆ ಸಚಿವರ ಕಚೇರಿಗಳಿಗೆ ಮಾಹಿತಿ ನೀಡಲಾಗಿತ್ತು. ಹೆಚ್ಚಿನ ಮಂದಿ ಪಡೆದಿದ್ದಾರೆ. ಇನ್ನೂ ಕೆಲವರು ಪಡೆದಿಲ್ಲ ಎಂದರು.
ಬಸವಣ್ಣ ಅವರದೂ ಕೆಲವೆಡೆ ಇಲ್ಲ: ಬಸವಣ್ಣ ಅವರ ಚಿತ್ರ ವನ್ನೂ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯ ಮಾಡಲಾಗಿದ್ದು, ಸಚಿವರೂ ಸೇರಿದಂತೆ ಕೆಲವು ಕಡೆ ಇನ್ನೂ ಬಸವಣ್ಣ ಅವರ ಚಿತ್ರವನ್ನೂ ಪಡೆದು ಹಾಕಿಲ್ಲ ಎಂದು ಹೇಳಲಾಗಿದೆ.
ಕೋವಿಂದ್ ಅವರು ರಾಷ್ಟ್ರಪತಿಯಾಗಿ ತಿಂಗಳೇ ಕಳೆದಿದೆ. ಆದರೂ ಅವರ ಭಾವಚಿತ್ರವನ್ನು ಹಾಕಿಲ್ಲ.ಇನ್ನೂ ಪ್ರಣಬ್ ಭಾವಚಿತ್ರ ಇರಿಸಿಕೊಳ್ಳಲಾಗಿದೆ.ಇದು ಕೋವಿಂದ್‌ರಿಗೆ ಮಾಡಿದ ಅವಮಾನ.
– ಜಗದೀಶ್ ಶೆಟ್ಟರ್, ಪ್ರತಿಪಕ್ಷ ನಾಯಕ