Advertisement

ಅಗಲಿದ ಪ್ರಣವ್‌

02:41 AM Sep 01, 2020 | Hari Prasad |

ಮಾಜಿ ರಾಷ್ಟ್ರಪತಿ, ಕಾಂಗ್ರೆಸ್‌ ಹಿರಿಯ ನಾಯಕ ಪ್ರಣವ್‌ ಮುಖರ್ಜಿ ಭಾರತೀಯ ರಾಜಕಾರಣದಲ್ಲಿ, ಜನಮಾನಸದಲ್ಲಿ ವಿಶಿಷ್ಟ ಸ್ಥಾನ ಪಡೆದವರು.

Advertisement

ತಮ್ಮ ನೇರ ನಿಷ್ಠುರ ನಡೆಗಳಿಂದ ಗುರುತಿಸಿಕೊಂಡಿದ್ದ ಪ್ರಣವ್‌ ಮುಖರ್ಜಿ ಎಲ್ಲರಿಗೂ ಪ್ರೀತಿಯ ಪ್ರಣವ್‌ ದಾ ಆಗಿದ್ದವರು. ತಮ್ಮ ಹೆಗಲೇರಿದ ಜವಾಬ್ದಾರಿಗಳನ್ನೆಲ್ಲ ನಿಷ್ಠೆಯಿಂದ ನಿಭಾಯಿಸಿದವರು.

ವಿತ್ತ ಸಚಿವರಾಗಿ ಅವರು ತಂದ ಕೆಲವು ಸುಧಾರಣೆಗಳು ಭಾರತೀಯ ಆರ್ಥಿಕತೆಯ ದಿಕ್ಕನ್ನೇ ಬದಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವು ಎಂದರೆ ಸುಳ್ಳಾಗದು.

ಈ ಕಾರಣಕ್ಕಾಗಿಯೇ ಆಧುನಿಕ ಭಾರತದ ಆರ್ಥಿಕ ಸುಧಾರಣೆಯ ವಿಚಾರ ಪ್ರಸ್ತಾಪವಾಗುವಾಗೆಲ್ಲ, ಕಡ್ಡಾಯವಾಗಿ ಪ್ರಣವ್‌ ಮುಖರ್ಜಿ ಹೆಸರು ಬಂದೇ ಬರುತ್ತದೆ.

ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೆ ತರಲು ಶ್ರಮಿಸಿದವರಲ್ಲಿ ಪ್ರಣವ್‌ ಕೂಡ ಒಬ್ಬರು. ಮೂಲ ಸೌಕರ್ಯಾಭಿವೃದ್ಧಿ ಯೋಜನೆಗಳಿಗೆ ಬಲ ನೀಡುವುದೇ ಆರ್ಥಿಕ ಬಲದ ಮೂಲ ಮಂತ್ರ ಎಂದು ಬಲವಾಗಿ ಪ್ರತಿಪಾದಿಸುತ್ತಿದ್ದ ಪ್ರಣವ್‌ ರಾಷ್ಟ್ರೀಯ ಅಭಿವೃದ್ಧಿ ಯೋಜನೆಗಳು, ವಿದ್ಯುತ್‌ ಸೇವಾ ಯೋಜನೆಗಳ ವಿಸ್ತರಣೆ ಸೇರಿದಂತೆ ಹಲವಾರು ಜನಪರ ಯೋಜನೆಗಳಿಗೆ ಕಾರಣವಾದವರು.

Advertisement

90ರ ದಶಕದಿಂದ ಏರುಗತಿಯಲ್ಲಿ ಸಾಗುತ್ತಿದ್ದ ವಿತ್ತೀಯ ಕೊರತೆಯನ್ನು ನಿಯಂತ್ರಣಕ್ಕೆ ತರುವ ವಿಚಾರದಲ್ಲಾಗಲಿ, ಲೈಸನ್ಸ್‌ ರಾಜ್‌ ಪದ್ಧತಿ ಕೊನೆಗೊಳ್ಳುವ ವಿಚಾರದಲ್ಲೇ ಆಗಲಿ ಪ್ರಣವ್‌ ನೀಡಿದ ಕೊಡುಗೆಗೆ ಸರಿಸಮನಾದದು ಇಲ್ಲ.
ಪ್ರಣವ್‌ ತಮ್ಮ ದಶಕಗಳ ರಾಜಕೀಯ ಜೀವನದಲ್ಲಿ ಹಲವಾರು ಉನ್ನತ ಸ್ಥಾನಗಳನ್ನು ಅಲಂಕರಿಸಿದವರು.

ವಿದೇಶಾಂಗ, ವಾಣಿಜ್ಯ, ರಕ್ಷಣೆ, ಕೈಗಾರಿಕೆ ಇಲಾಖೆಗಳ ಸಚಿವರಾಗಿ ಛಾಪು ಮೂಡಿಸಿದ್ದ ಅವರು ಭಾರತದ ಪ್ರಧಾನಿಯಾಗಬೇಕಿತ್ತು ಎನ್ನುವುದು ಬಹುಜನರ ನಿರೀಕ್ಷೆ ಹಾಗೂ ಬಯಕೆಯಾಗಿತ್ತಾದರೂ ಈ ವಿಚಾರದಲ್ಲಿ ಅವರಿಗೆ ಕಾಂಗ್ರೆಸ್‌ನಿಂದ ನ್ಯಾಯ ಸಲ್ಲಲೇ ಇಲ್ಲ. ಸ್ವಾತಂತ್ರ್ಯ ಹೋರಾಟಗಾರ ರಾಜಕೀಯ ಕುಟುಂಬದಲ್ಲಿ ಜನಿಸಿದ ಪ್ರಣವ್‌ ಬೋಧಕರಾಗಿ, ಪತ್ರಕರ್ತರಾಗಿ ದುಡಿದವರು.

ಇಂದಿರಾ, ರಾಜೀವ್‌, ಸೋನಿಯಾ ಹಾಗೂ ರಾಹುಲ್‌ ಗಾಂಧಿಯವರೆಗೆ ಗಾಂಧಿ ಕುಟುಂಬಕ್ಕೆ ಆಪ್ತರಾಗಿದ್ದ ಪ್ರಣವ್‌ ಕೆಲವೊಮ್ಮೆ ಈ ನಿಷ್ಠೆಯಿಂದಾಗಿ ಟೀಕೆಗೂ ಒಳಗಾಗಿದ್ದರು.

ರಾಷ್ಟ್ರಪತಿಯಾಗಿ ಅವರು ಕೈಗೊಂಡ ಕಾರ್ಯಗಳು ಎಲ್ಲ ವಲಯದಿಂದಲೂ ಶ್ಲಾಘನೆಗೆ ಒಳಗಾಗಿದ್ದವು. ಕಟ್ಟಾ ಕಾಂಗ್ರೆಸ್ಸಿಗರಾದರೂ, ಎದುರಾಳಿ ಪಕ್ಷಗಳ ನಾಯಕರೊಂದಿಗೂ ಉತ್ತಮ ಬಾಂಧವ್ಯ ಹೊಂದಿ ಅಜಾತಶತ್ರುವೇ ಆಗಿದ್ದರು.

ಪ್ರಧಾನಿ ಮೋದಿಯವರೊಂದಿಗೂ ಬಹಳ ಆಪ್ತತೆ ಇಟ್ಟುಕೊಂಡಿದ್ದ ಅವರು ಜಿಎಸ್‌ಟಿ ಸೇರಿದಂತೆ ಮೋದಿ ಸರಕಾರ ತಂದ ಹಲವು ಕಾನೂನುಗಳಿಗೆ ಅಂಕಿತಹಾಕಿದ್ದರು.

ಮೊದಲಿನಿಂದಲೂ ಉಗ್ರವಾದ, ಮೂಲಭೂತವಾದವನ್ನು ಕಟುಮಾತಿನಲ್ಲೇ ಟೀಕಿಸುತ್ತಾ ಬರುತ್ತಿದ್ದ ಅವರು ವೆಂಕಟರಾಮನ್‌ ಅನಂತರ ಅತಿಹೆಚ್ಚು ಕ್ಷ‌ಮಾದಾನ ಅರ್ಜಿಗಳನ್ನು ತಿರಸ್ಕರಿಸಿದ ರಾಷ್ಟ್ರಪತಿಯಾಗಿ ಗುರುತಿಸಿಕೊಂಡವರು.

ಒಟ್ಟಲ್ಲಿ ಪ್ರಣವ್‌ ಮುಖರ್ಜಿ ಪ್ರಧಾನಿಯಾಗಬೇಕಿತ್ತು ಎನ್ನುವ ಅನೇಕ ಕಾಂಗ್ರೆಸ್ಸಿಗರ ಬಯಕೆ ಬಯಕೆಯಾಗಿಯೇ ಉಳಿದುಹೋಯಿತು. ಆದರೆ ಜನಪರ ಕಾರ್ಯ ಮಾಡಲು ಪ್ರಧಾನಿ ಹುದ್ದೆಯೇ ಬೇಕಾಗಿಲ್ಲ ಎನ್ನುವುದನ್ನು ತಮಗೆ ಸಿಕ್ಕ ಜವಾಬ್ದಾರಿಗಳನ್ನು ದೇಶ ಹಿತದ ದೃಷ್ಟಿಯಿಂದ ನಿರ್ವಹಿಸುವ ಮೂಲಕ ತೋರಿಸಿಕೊಟ್ಟರು.

ಹಿರಿಯರೊಬ್ಬರು ಅಗಲಿದಾಗ ಎಂಡ್‌ ಆಫ್ ಆ್ಯನ್‌ ಎರಾ ಎನ್ನುವುದು ಒಂದು ಕ್ಲೀಷೆಯಾಗಿದೆ. ಆದರೆ ಪ್ರಣವ್‌ ಮುಖರ್ಜಿ ಅವರ ವಿಚಾರದಲ್ಲಿ ಈ ಮಾತು ಅಕ್ಷರಶಃ ಅನ್ವಯವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next