Advertisement

ಕ್ಲರ್ಕ್ to ರಾಷ್ಟ್ರಪತಿಯವರೆಗೆ “ಪ್ರಣಬ್” ರಾಜಕೀಯ ಜೀವನಗಾಥೆ; ಕೈತಪ್ಪಿದ್ದ ಪ್ರಧಾನಿ ಪಟ್ಟ

06:03 PM Aug 31, 2020 | Nagendra Trasi |

ಮಣಿಪಾಲ: ಭಾರತದ ರಾಜಕೀಯ ಇತಿಹಾಸದಲ್ಲಿ ಬರೋಬ್ಬರಿ ಐದು ದಶಕಗಳ ಕಾಲ ಸೇವೆ ಸಲ್ಲಿಸಿದವರು ಪ್ರಣಬ್ ಮುಖರ್ಜಿ. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಆಗಿರುವ ಮುಖರ್ಜಿ ಭಾರತ ಸರ್ಕಾರದಲ್ಲಿ ಹಲವಾರು ಪ್ರಮುಖ ಸಚಿವ ಸ್ಥಾನ ನಿರ್ವಹಿಸಿದ ಹೆಗ್ಗಳಿಕೆ ಇವರದ್ದಾಗಿದೆ. 2009ರಿಂದ 2012ರವರೆಗೆ ವಿತ್ತ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2019ರಲ್ಲಿ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ಪ್ರಶಸ್ತಿಗೆ ಮುಖರ್ಜಿ ಭಾಜನರಾಗಿದ್ದರು. 2012ರಿಂದ 2017ರವರೆಗೆ ದೇಶದ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು.

Advertisement

ಪ್ರಣಬ್ ಮುಖರ್ಜಿ ಅವರು ಬೆಂಗಾಲಿ ಕುಟುಂಬದಲ್ಲಿ 1935ರ ಡಿಸೆಂಬರ್ 11ರಂದು ಮಿರಾಟಿ ಹಳ್ಳಿಯಲ್ಲಿ ಜನಿಸಿದ್ದರು. ಇವರ ತಂದೆ ಕಾಮಾದಾ ಕಿಂಕರ್ ಮುಖರ್ಜಿ ಅವರು ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ತಾಯಿ ರಾಜಲಕ್ಷ್ಮಿ ಮುಖರ್ಜಿ. ಪಾಲಿಟಿಕಲ್ ಸೈನ್ಸ್ ನಲ್ಲಿ ಎಂಎ ಪದವಿ ಪಡೆದ ಮುಖರ್ಜಿ ನಂತರ ಕೋಲ್ಕತಾ ಯೂನಿರ್ವಸಿಟಿಯಲ್ಲಿ ಎಲ್ ಎಲ್ ಬಿ ಪದವಿ ಪಡೆದಿದ್ದರು. ಇವರು ಆರಂಭದಲ್ಲಿ ಕೋಲ್ಕತಾದ ಪೋಸ್ಟ್ ಆ್ಯಂಡ್ ಟೆಲಿಗ್ರಾಫ್ ಕಚೇರಿಯಲ್ಲಿ ಕ್ಲರ್ಕ್ ಆಗಿ ಕಾರ್ಯನಿರ್ವಹಿಸಿದ್ದರು. 1963ರಲ್ಲಿ ಮುಖರ್ಜಿ ಕೋಲ್ಕತಾದ ವಿದ್ಯಾಸಾಗರ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದರು. ಅಷ್ಟೇ ಅಲ್ಲ ರಾಜಕೀಯ ಜೀವನಕ್ಕೆ ಪ್ರವೇಶಿಸುವ ಮುನ್ನ ಮುಖರ್ಜಿ ಪತ್ರಕರ್ತರಾಗಿಯೂ ದುಡಿದಿದ್ದರು.

ಪ್ರಣಬ್ ಮುಖರ್ಜಿ ಅವರು 1957ರ ಜುಲೈ 13ರಂದು ಸುವ್ರಾ ಮುಖರ್ಜಿ ಅವರನ್ನು ವಿವಾಹವಾಗಿದ್ದಾರೆ. ಇವರಿಗೆ ಇಬ್ಬರು ಗಂಡು ಮಕ್ಕಳು, ಅಭಿಜಿತ್ ಹಾಗೂ ಸುರೋಜಿತ್ ಮತ್ತು ಒಬ್ಬಳು ಪುತ್ರಿ.

1969ರಲ್ಲಿ ರಾಜಕೀಯ ಜೀವನಕ್ಕೆ ಪ್ರವೇಶ:

1969ರಲ್ಲಿ ಪಶ್ಚಿಮಬಂಗಾಳದ ಮಿಡ್ನಾಪುರ್ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿಕೆ ಕೃಷ್ಣ ಮೆನನ್ ಅವರ ಪ್ರಚಾರಾಂದೋಲನದಲ್ಲಿ ತೊಡಗಿಕೊಂಡು ಗೆಲ್ಲಿಸುವಲ್ಲಿ ಮುಖರ್ಜಿ ಯಶಸ್ವಿಯಾಗಿದ್ದರು. ಅಲ್ಲಿಂದ ಪ್ರಣಬ್ ರಾಜಕೀಯ ಜೀವನ ಆರಂಭವಾಗಿತ್ತು. ನಂತರ ಮುಖರ್ಜಿ ಅವರ ಪ್ರತಿಭೆಯನ್ನು ಪ್ರಧಾನಿ ಇಂದಿರಾ ಗಾಂಧಿ ಗುರುತಿಸಿದ್ದು, ಬಳಿಕ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. 1969ರ ಜುಲೈನಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ತದನಂತರ 1975, 1981, 1983 ಹಾಗೂ 1999ರಲ್ಲಿ ಸತತವಾಗಿ ಮೇಲ್ಮನೆಗೆ ಪುನರಾಯ್ಕೆಗೊಂಡಿದ್ದರು.

Advertisement

ನಂತರ ರಾಜೀವ್ ಗಾಂಧಿ ಹತ್ಯೆಯ ಬಳಿಕ ಪಿವಿ ನರಸಿಂಹ ರಾವ್ ಅವರು ಪ್ರಣಬ್ ಮುಖರ್ಜಿ ಅವರನ್ನು ಇಂಡಿಯನ್ ಪ್ಲ್ಯಾನಿಂಗ್ ಕಮಿಷನ್ ನ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. 1995ರಿಂದ 1996ರವರೆಗೆ ಮೊದಲ ಬಾರಿಗೆ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಕೈತಪ್ಪಿ ಹೋದ ಪ್ರಧಾನಿ ಪಟ್ಟ:

2004ರಲ್ಲಿ ಸೋನಿಯಾ ಗಾಂಧಿ ಪ್ರಧಾನಿಯಾಗಲು ನಿರಾಕರಿಸಿದ್ದರಿಂದ ಪ್ರಣಬ್ ಮುಖರ್ಜಿ ಅವರನ್ನು ಪ್ರಧಾನಿಯನ್ನಾಗಿ ಮಾಡುತ್ತಾರೆ ಎಂದು ಸುದ್ದಿ ಹರಿದಾಡಿತ್ತು. ಆದರೆ ಗಾಂಧಿ ಕುಟುಂಬದ ಪರಮಾಪ್ತರಾಗಿದ್ದರೂ ಕೂಡಾ ಪ್ರಣಬ್ ಮುಖರ್ಜಿ ಅವರನ್ನು ಕಡೆಗಣಿಸಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯನ್ನಾಗಿ ನೇಮಕ ಮಾಡಲಾಗಿತ್ತು.

ಮನಮೋಹನ್ ಸಿಂಗ್ ಸರ್ಕಾರದಲ್ಲಿ ಪ್ರಣಬ್ ಮುಖರ್ಜಿ ಅವರು ರಕ್ಷಣಾ ಸಚಿವ, ವಿತ್ತ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಸಕ್ರಿಯ ರಾಜಕೀಯ ಜೀವನದಿಂದ ನಿವೃತ್ತರಾದ ನಂತರ ಮುಖರ್ಜಿ ಅವರನ್ನು 2012ರಲ್ಲಿ ರಾಷ್ಟ್ರಪತಿಯನ್ನಾಗಿ ನೇಮಕ ಮಾಡಲಾಯ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next