ಪೊಲೀಸರ ಸಾಹಸಗಾಥೆಗಳ ಕುರಿತಾಗಿ ಈಗಗಾಲೇ ಅನೇಕ ಸಿನಿಮಾಗಳು ಬಂದಿವೆ. ಆದರೆ, ಪೊಲೀಸರ ಕುಟುಂಬ, ಅವರ ನೋವು-ನಲಿವು, ಒತ್ತಡಗಳ ಕುರಿತಾಗಿ ಸಿನಿಮಾ ಬಂದಿರೋದು ಕಡಿಮೆ. ಇದನ್ನೇ ಗಮನದಲ್ಲಿಟ್ಟುಕೊಂಡ ರಿಷಭ್ ಶೆಟ್ಟಿ ತಂಡದ ಭರತ್ ರಾಜ್ ಮಾಡಿರುವ ಸಿನಿಮಾ “ಲಾಫಿಂಗ್ ಬುದ್ಧ’. ಮೊದಲ ಬಾರಿಗೆ ಪ್ರಮೋದ್ ಶೆಟ್ಟಿ ನಾಯಕರಾಗಿರುವ ಈ ಚಿತ್ರ ಆಗಸ್ಟ್ 30ರಂದು ತೆರೆಕಾಣುತ್ತಿದೆ.
ಅದಕ್ಕೂ ಮೊದಲು ಆ.15ರಂದು ಟ್ರೇಲರ್ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಚಿತ್ರದ “ಎಂಥಾ ಚಂದಾನೇ ಇವಳು’ ಹಾಡು ಬಿಡುಗಡೆಯಾಯಿತು. ಈ ಚಿತ್ರವನ್ನು ರಿಷಭ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ.
ಭರತ್ ರಾಜ್ ಹೇಳಿದ ಕಥೆ ಇಷ್ಟವಾದ ಕೂಡಲೇ ರಿಷಭ್ ಶೆಟ್ಟಿ, ಪ್ರಮೋದ್ ಅವರಿಗೆ ಕರೆಮಾಡಿ, ಅರ್ಜೆಂಟಾಗಿ ಆಫೀಸಿಗೆ ಬರುವಂತೆ ಹೇಳಿದರಂತೆ. ಬಂದ ಕೂಡಲೇ “ಲಾಫಿಂಗ್ ಬುದ್ಧ’ ಚಿತ್ರಕ್ಕೆ “ನೀವೇ ಹೀರೋ ರೆಡಿಯಾಗಿ’ ಅಂದರಂತೆ. ಒಮ್ಮೆ ಆಶ್ಚರ್ಯಗೊಂಡ ಪ್ರಮೋದ್, “ಯಾವ ಧೈರ್ಯದ ಮೇಲೆ ನನ್ನ ಮೇಲೆ ದುಡ್ಡು ಹಾಕುತ್ತೀಯಾ’ ಎಂದು ಕೇಳಿದಾಗ ರಿಷಭ್, “ನಾನು ದುಡ್ಡು ಹಾಕುತ್ತಿರೋದು ನಿನ್ನ ಮೇಲಲ್ಲ, ಕಥೆ ಮೇಲೆ’ ಅಂದರಂತೆ. ಅಲ್ಲಿಂದ ಪಾತ್ರಕ್ಕಾಗಿ ಪ್ರಮೋದ್ 30 ಕೆಜಿ ತೂಕ ಹೆಚ್ಚಿಸಿಕೊಂಡು ಚಿತ್ರೀಕರಣ ಮಾಡಿದ್ದಾರೆ. ಇದು ಪೊಲೀಸರ ವೈಯಕ್ತಿಕ ಬದುಕಿನ ಸುತ್ತ ನಡೆಯುವ ಕಥೆಯಾದ್ದರಿಂದ ಜನರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸ ಪ್ರಮೋದ್ ಅವರಿಗಿದೆ.
ನಿರ್ದೇಶಕ ಭರತ್ ರಾಜ್ ಮಾತನಾಡಿ, “ಈ ಕಥೆ ಹುಟ್ಟಲು ನಾನು ಯುಟ್ಯೂಬ್‌ನಲ್ಲಿ ನೋಡಿದ ವಿಡಿಯೋವೊಂದು ಕಾರಣ. ಹಿಮಾಚಲ ಪ್ರದೇಶದಲ್ಲಿ ನಡೆದ ಘಟನೆಯೊಂದನ್ನು ಯೂಟ್ಯೂಬ್‌ನಲ್ಲಿ ನೋಡಿದೆ. ಪೊಲೀಸ್ ಪೇದೆಯೊಬ್ಬ ತನ್ನ ಎಸ್.ಪಿ ಬೈದರು ಎಂಬ ಕಾರಣಕ್ಕೆ ಅಳುತ್ತಿದ್ದ ಘಟನೆ ಅದಾಗಿತ್ತು. ಅದರಲ್ಲಿ ಬಹಳ ಕೆಟ್ಟ ಕಾಮೆಂಟ್‌ಗಳನ್ನು ಹಾಕಿದ್ದರು. ಆಗ ಈ ಕಥೆ ಹುಟ್ಟಿತು. ಪೊಲೀಸರ ಕುರಿತು ಹಲವು ಚಿತ್ರಗಳು ಬಂದಿವೆ. ಆದರೆ, ಇದು ಅವರ ವೈಯಕ್ತಿಕ ವಿಚಾರದ ಕುರಿತಾದ ಚಿತ್ರ. ಪ್ರಮೋದ್ ಶೆಟ್ಟಿ ಇಲ್ಲಿ ಗೋವರ್ಧನ್ ಎಂಬ ಹೆಡಕಾನ್ಸ್‌ಟೇಬಲ್ ಪಾತ್ರ ಮಾಡಿದ್ದಾರೆ’ ಎಂದರು.
ಚಿತ್ರದ ವಿಶೇಷ ಪಾತ್ರವೊಂದರಲ್ಲಿ ದಿಗಂತ್ ನಟಿಸಿದ್ದಾರೆ. ಈ ಪಾತ್ರವನ್ನು ರಿಷಭ್ ಶೆಟ್ಟಿ ಮಾಡಬೇಕಿತ್ತಂತೆ. ತೇಜು ಬೆಳವಾಡಿ ಈ ಚಿತ್ರದ ನಾಯಕಿ.