ಪಣಜಿ : ಪ್ರಮೋದ್ ಸಾವಂತ್ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಕ್ರೀಡಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಸಮಾರಂಭದಲ್ಲಿ ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉಪಸ್ಥಿತರಿರುವರು ಎಂದು ಸರ್ಕಾರದ ವಕ್ತಾರರು ಭಾನುವಾರ ತಿಳಿಸಿದ್ದಾರೆ.
40 ಸದಸ್ಯ ಬಲದ ಗೋವಾ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 20 ಸ್ಥಾನಗಳನ್ನು ಗೆದ್ದು ಎಂಜಿಪಿ ಮತ್ತು ಪಕ್ಷೇತರರ ಬೆಂಬಲದೊಂದಿಗೆ ಅಧಿಕಾರಕ್ಕೆ ಬರುತ್ತಿದೆ.
ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮಕ್ಕೆ 10 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ಸಾಧ್ಯತೆಯಿದೆ. ಪ್ರಮಾಣ ವಚನ ಸಮಾರಂಭವನ್ನು ಕರಾವಳಿ ರಾಜ್ಯದಾದ್ಯಂತ ವಿವಿಧ ಸುದ್ದಿ ವಾಹಿನಿಗಳ ಮೂಲಕ ಪ್ರಸಾರ ಮಾಡಲಾಗುತ್ತದೆ. ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿರುವ ಇತರ ಸಂಪುಟ ಸಚಿವರ ಸಂಖ್ಯೆ ಬಗ್ಗೆ ಬಿಜೆಪಿ ಇದುವರೆಗೆ ಯಾವುದೇ ಮಾಹಿತಿ ನೀಡಿಲ್ಲ.
ಸಂಪುಟ ಸಚಿವರ ಕುರಿತು ಸಾವಂತ್ ಅವರು ಪಿಟಿಐ ಗೆ ಭಾನುವಾರ ಪ್ರತಿಕ್ರಿಯೆ ನೀಡಿದ್ದು, “ನೀವು ಅದರ ಬಗ್ಗೆ ನಾಳೆ ತಿಳಿಯುವಿರಿ. ಎಷ್ಟು ಸಚಿವರು ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂಬುದು ಸದ್ಯಕ್ಕೆ ಗೊತ್ತಿಲ್ಲ. ಮುಖ್ಯಮಂತ್ರಿಯಲ್ಲದೆ, ಗೋವಾ ಕ್ಯಾಬಿನೆಟ್ 11 ಮಂತ್ರಿಗಳನ್ನು ಹೊಂದಬಹುದು.
ರಾಜ್ಯಪಾಲ ಪಿ ಶ್ರೀಧರನ್ ಪಿಳ್ಳೈ ಅವರು ಮಾರ್ಚ್ 29 ರಿಂದ ಹೊಸ ವಿಧಾನಸಭೆಯ ಎರಡು ದಿನಗಳ ಅಧಿವೇಶನವನ್ನು ಕರೆದಿದ್ದಾರೆ, ಈ ಸಮಯದಲ್ಲಿ ಸಾವಂತ್ ಅವರು ವಿಶ್ವಾಸ ಮತವನ್ನು ಸಾಬೀತುಪಡಿಸ ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.