Advertisement

ಸಾಂತ್ವನ ಹೇಳಲು ಹೊರಟಿದ್ದ ನನ್ನನು ತಡೆದು ಪೊಲೀಸರು ದೌರ್ಜನ್ಯ ನಡೆಸಿದ್ದಾರೆ: ಮುತಾಲಿಕ್

03:24 PM Oct 18, 2023 | Team Udayavani |

ದಾವಣಗೆರೆ: ಶಿವಮೊಗ್ಗ ಜಿಲ್ಲಾಡಳಿತ ಒಂದು ತಿಂಗಳ‌ವರೆಗೆ ಶಿವಮೊಗ್ಗದ ರಾಗಿ ಗುಡ್ಡ ಪ್ರವೇಶ ನಿರ್ಬಂಧ ವಿಧಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಲಾಗುವುದು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದ ರಾಗಿಗುಡ್ಡಕ್ಕೆ ಪ್ರವೇಶ ಮಾಡದಂತೆ ಪ್ರತಿಬಂಧಕಾಜ್ಞೆ ಹೊರಡಿಸಿರುವುದು ಅತ್ಯಂತ ಖಂಡನೀಯ. ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಯ ಸ್ಪಷ್ಟ ಉದಾಹರಣೆ ಎಂದು ದೂರಿದರು.

ಉಡುಪಿಯಿಂದ ಶಿವಮೊಗ್ಗಕ್ಕೆ ಬಸ್ ನಲ್ಲಿ ಬರುತ್ತಿದ್ದಾಗ ಮಾಸ್ತಿಕಟ್ಟೆ ಬಳಿ ತಡರಾತ್ರಿ ಎರಡು ಗಂಟೆಯಲ್ಲಿ ಬಸ್ ತಡೆಗಟ್ಟಿ, ಪೊಲೀಸರು ನೋಟಿಸ್ ನೀಡಿದ್ದಾರೆ. ನಾನೇನು ಶಿವಮೊಗ್ಗದಲ್ಲಿ ಭಯೋತ್ಪಾದಕ ಕೃತ್ಯಗಳ ನಡೆಸಲು ಹೋಗುತ್ತಿರಲಿಲ್ಲ.‌ ಗಲಭೆಯಿಂದ ಭಯಗೊಂಡಿರುವ ಹಿಂದೂ ಸಮಾಜದವರಿಗೆ ಸಾಂತ್ವನ ಹೇಳಿ, ಆತ್ಮವಿಶ್ವಾಸ ತುಂಬಲು ತೆರಳುತ್ತಿದ್ದಾಗಿ ತಿಳಿಸಿದರು.

ಬೆಂಗಳೂರು, ಕೊಯಮತ್ತೂರು ನಲ್ಲಿ ಬಾಂಬ್ ಸ್ಫೋಟದ ಮೂಲಕ ನೂರಾರು ಜನರ ಮಾರಣಹೋಮಕ್ಕೆ ಕಾರಣವಾದ ಮದನಿಗೆ ತಂದೆ- ತಾಯಿ ನೋಡಲು, ‌ಮದುವೆಯಲ್ಲಿ ಭಾಗವಹಿಸಲು ಜಾಮೀನು ಆಧಾರದ ಮೇಲೆ ಅವಕಾಶ ನೀಡಲಾಗುತ್ತದೆ. ಸಾಂತ್ವನ ಹೇಳಲಿಕ್ಕೆ ಮುಂದಾದ ತಮಗೆ ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಗಿ ಗುಡ್ಡದ ಸಂತ್ರಸ್ಥ ಹಿಂದುಗಳಿಗೆ ಸಾಂತ್ವನ ಹೇಳುವುದು ನನ್ನ ಉದ್ದೇಶ. ನಾವು ಯಾವುದೇ ಗಲಾಟೆ, ಧೋಂಬಿ ಮಾಡಲು ಹೋಗಲು ಅಲ್ಲಿಗೆ ತೆರಳುತ್ತಿರಲಿಲ್ಲ. ಸಾಂತ್ವನ ಹೇಳುವ ಸಲುವಾಗಿ ಅಲ್ಲಿಗೆ ಹೋಗುತ್ತಿದ್ದೆ. ಆದರೆ ನನ್ನನ್ನು ತಡೆದು ಪೊಲೀಸರು ದೌರ್ಜನ್ಯ ಮಾಡಿದ್ದಾರೆ‌ ಎಂದು ತಿಳಿಸಿದರು.

Advertisement

ಸಿದ್ದರಾಮಯ್ಯ ಸರ್ಕಾರ ಹಿಂದು ಧರ್ಮದ ವಿರೋಧಿ ಸರ್ಕಾರ, ರಾಗಿ ಗುಡ್ಡದ ಘಟನೆಗೆ ಯಾರು ಕಾರಣ ಎಂದು ತನಿಖೆಯಿಂದ ಹೊರ ಬರಬೇಕಾಗಿದೆ. ಸಿದ್ದರಾಮಯ್ಯ ಕೂಡ ಹಿಂದು ವಿರೋಧಿಗಳ ಕುಮ್ಮಕ್ಕಿನಿಂದ ಇಂತಹ ಘಟನೆ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಬಿಜೆಪಿ ಮುಖಂಡರಿಗೆ ಈಗ ಹಿಂದೂ, ಹಿಂದುತ್ವವೇ ಬೇಕಾಗಿಲ್ಲ. ಹಿಂದೂ ಸಮಾಜದ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಬೇರೆ ಬೇರೆ ಅಲ್ಲವೇ ಅಲ್ಲ. ಎರಡೂ ಒಂದೇ. ನಮ್ಮ ರಕ್ಷಣೆಗೆ ಸರ್ಕಾರ, ಬಿಜೆಪಿ ಬರುತ್ತದೆ ಎಂದು ಭಾವಿಸದೆ ಹಿಂದುಗಳೇ ತಮ್ಮ ರಕ್ಷಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ನರೇಂದ್ರ ಮೋದಿ ಅವರಂತಹ ಸಮರ್ಥ, ಹೋರಾಟದ ನಾಯಕತ್ವ ದೇಶಕ್ಕೆ ಅನಿವಾರ್ಯ. ಹಾಗಾಗಿ ಶ್ರೀರಾಮ ಸೇನೆ ನವಂಬರ್ ನಲ್ಲಿ ರಾಜ್ಯದ 224 ವಿಧಾನ ಸಭಾ ಕ್ಷೇತ್ರದಲ್ಲಿ ಮೋದಿ ಗೆಲ್ಲಿಸಿ, ಭಾರತ ಉಳಿಸಿ.. ಎಂಬ ಅಭಿಯಾನ ನಡೆಸಲಿದೆ. ಅಭಿಯಾನದ ರೂಪುರೇಷೆ, ನೀಲನಕ್ಷೆ ಎಲ್ಲವೂ ಸಿದ್ಧವಾಗಿದೆ. ಬೆಳಗಾವಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡುವ ಚಿಂತನೆ ಇದೆ. ಸಂಸದ ಪ್ರತಾಪ್ ಸಿಂಹ, ಮೋದಿ ಬ್ರಿಗೇಡ್ ರಾಷ್ಟ್ರೀಯ ಅಧ್ಯಕ್ಷರು, ಕೆಲವಾರು ಸ್ವಾಮೀಜಿಯವರು ಭಾಗವಹಿ ಸುವರು. ಸಂವಾದ, ಪ್ರಶ್ನೋತ್ತರ, ‌ವಿಚಾರ ಸಂಕಿರಣ, ಚರ್ಚೆಗಳ ಮೂಲಕ ಅಭಿಯಾನ ನಡೆಸಲಾಗುತ್ತದೆ. ವಿಶೇಷವಾಗಿ ಮಹಿಳೆಯರಲ್ಲಿ ಮೋದಿ ನಾಯಕತ್ವದ ಅಗತ್ಯತೆ ಮತ್ತು ಅನಿವಾರ್ಯತೆಯ ಬಗ್ಗೆ ಹೆಚ್ಚು ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಕಾರ್ಕಳದಲ್ಲಿ ಪರಶುರಾಮನ ವಿಗ್ರಹ ಸ್ಥಾಪನೆ ವಿಷಯವಾಗಿ ಸಮಸ್ತ ಪರಶುರಾಮನ ಆರಾಧಕರು, ಭಕ್ತರಿಗೆ ಅಪಮಾನ ಮಾಡಲಾಗಿದೆ. ಅಲ್ಲಿನ ಶಾಸಕ ಸುನೀಲ್ ಕುಮಾರ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

33 ಅಡಿ ಎತ್ತರದ ಪರಶುರಾಮನ ವಿಗ್ರಹ ನಿರ್ಮಾಣಕ್ಕೆ ಒಂದು ವರ್ಷವಾದರೂ ಬೇಕು ಎಂಬುದಾಗಿ ತಜ್ಞರು ಹೇಳಿದ್ದರೂ 41 ದಿನಗಳಲ್ಲಿ ಬೋಗಸ್, ನಕಲಿ ಪ್ರತಿಮೆ ಇಡಲಾಗಿತ್ತು. ನೂರಾರು ಕೋಟಿಯ ಅನುದಾನ ಏನಾಯಿತು, ಯಾರು ಯಾರು ಎಷ್ಟೆಷ್ಟು ತಿಂದಿರಬಹುದು ಎಂಬುದು ಸಮಗ್ರ ತನಿಖೆಯಾಗಬೇಕು. ತಪ್ಪಿತಸ್ಥರು ಯಾರೇ ಆಗಿರಲಿ ಅವರನ್ನು ಜೈಲಿಗೆ ಕಳಿಸಬೇಕು. ಅಲ್ಲಿಯವರೆಗೆ ಉಡುಪಿ ಜಿಲ್ಲಾಡಳಿತ ಹಳೆಯದಾಗಲಿ ಅಥವಾ ಹೊಸ ಪ್ರತಿಮೆ ಪ್ರತಿಷ್ಠಾಪನೆಗೆ ಅನುಮತಿ ನೀಡಲೇಬಾರದು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಣಿ ಸರ್ಕಾರ್, ಪರಶುರಾಮ ನಡುಮನಿ, ಬಿ.ಜಿ.ರಾಹುಲ್, ಅನಿಲ್ ಸುರ್ವೆ, ಶ್ರೀಧರ್, ಮಧು, ಸಿದ್ದಾರ್ಥ, ವಿನಯ್ ಇತರರು ಇದ್ದರು.

ಇದನ್ನೂ ಓದಿ: Karnataka Politics: ಕಾಂಗ್ರೆಸ್‌ಗೆ ಆಪರೇಷನ್ ಹಸ್ತದ ಅವಶ್ಯಕತೆ ಇಲ್ಲ: ದಿನೇಶ್ ಗುಂಡೂರಾವ್

Advertisement

Udayavani is now on Telegram. Click here to join our channel and stay updated with the latest news.

Next