Advertisement

“ಟೀಕೆ ಬಂದಾಗ ಕುಗ್ಗಲಿಲ್ಲ, ಹೊಗಳಿಕೆಯಿಂದ ಹಿಗ್ಗಲಿಲ್ಲ’

02:32 AM May 11, 2022 | Team Udayavani |

ಉಡುಪಿ: ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರಿದ ಎರಡೇ ದಿನಗಳಲ್ಲಿ ನಗರದಲ್ಲಿ ಮಂಗಳವಾರ ನಡೆದ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ “ಉದಯವಾಣಿ’ ಯೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.

Advertisement

ಬಿಜೆಪಿ ಸೇರುವ ಬಗ್ಗೆ 4 ವರ್ಷಗಳಿಂದ ಚರ್ಚೆಯಾಗುತ್ತಿತ್ತು. ಕೊನೆ ಕ್ಷಣದವರೆಗೂ ಬಿಜೆಪಿ ಸೇರುವ ಬಗ್ಗೆ ಯಾರಿಗೂ ತಿಳಿಸಿಲ್ಲ ಯಾಕೆ?
– ಮೇ 7ರಂದು ಮಧ್ಯಾಹ್ನ 2.45ರ ವರೆಗೆ ನನಗೂ ಬಿಜೆಪಿ ಸೇರ್ಪಡೆ ಬಗ್ಗೆ ತಿಳಿದಿರಲಿಲ್ಲ. ಮುಖ್ಯ ಮಂತ್ರಿಯವರು ಕರೆ ಮಾಡಿ 4 ಗಂಟೆಯ ಕಾರ್ಯಕ್ರಮದಲ್ಲಿರಲು ತಿಳಿಸಿದರು. ರಾಜ್ಯಾಧ್ಯಕ್ಷರ ಮನವಿಯ ಬಳಿಕ ತರಾತುರಿಯಲ್ಲಿ ಕೈಗೊಂಡ ನಿರ್ಧಾರ ಇದು.

ಕಾಂಗ್ರೆಸ್‌ ತೊರೆಯುವ ಅನಿವಾರ್ಯ ಏನಿತ್ತು ?
– ಕಾಂಗ್ರೆಸ್‌ ಪಕ್ಷದ ರಾಜ್ಯ, ಕೇಂದ್ರದ ನಾಯಕರಿಂದ ಸಮಸ್ಯೆಯಾಗಿಲ್ಲ. ಜಿಲ್ಲೆಯಲ್ಲಿ ಪಕ್ಷದ ಸ್ಥಿತಿಗತಿ ಸೂಕ್ತವಿ ರಲಿಲ್ಲ. ವರಿಷ್ಠರ ಗಮನಕ್ಕೆ ತಂದರೂ ಸರಿಯಾಗಲಿಲ್ಲ. ಹಾಗಾಗಿ ಪಕ್ಷದ ಸಭೆ, ಸಮಾರಂಭಗಳಿಂದ ದೂರವಿದ್ದೆ.

ಉಡುಪಿಯಲ್ಲಿ ನೀವು ಅಂದರೆ ಕಾಂಗ್ರೆಸ್‌ ಅನ್ನುವಂತಿತ್ತು. ನೀವೇ ಸರಿಪಡಿಸಬಹುದಿತ್ತಲ್ಲ?
– ಕಾಂಗ್ರೆಸ್‌ ನನಗೆ ಬೇಕಾದ್ದನ್ನು ಕೊಟ್ಟಿದೆ. ಭಿನ್ನಮತ, ಸಮಸ್ಯೆಗಳನ್ನು  ವಿವರಿಸಿದ ಬಳಿಕವೂ ಕಾಂಗ್ರೆಸ್‌ ವರಿಷ್ಠರು  ಪರಿಹಾರಕ್ಕೆ ಮುಂದಾಗದಿದ್ದುದು ಸಾಕಷ್ಟು ಬೇಸರ ಮೂಡಿಸಿತ್ತು. ಪಕ್ಷದ ಸಭೆ, ಸಮಾರಂಭಗಳಿಂದ ದೂರವಿದ್ದರೂ ಉಡುಪಿಗೆ ಬರುತ್ತಿದ್ದ ವರಿಷ್ಠರು ನನ್ನ ಮನೆಗೂ ಬರುತ್ತಿದ್ದರು.

ಬಿಜೆಪಿಗೆ ಸೇರಿದ ಮೇಲೆ ಯಾವ ರೀತಿ ಜವಾಬ್ದಾರಿ ನಿಭಾಯಿಸುತ್ತೀರಿ ?
– ಬಿಜೆಪಿಯ ಸದ್ಯದ ಗುರಿ 150 ಸ್ಥಾನಗಳನ್ನು ಗೆಲ್ಲುವುದು. ರಾಜ್ಯದಲ್ಲಿ ಎಲ್ಲಿ ಬಿಜೆಪಿ ದುರ್ಬಲವಾಗಿದೆಯೋ ಅಲ್ಲಿಗೆ ಪ್ರವಾಸ ತೆರಳಿ ಪಕ್ಷವನ್ನು ಗೆಲ್ಲಿಸುವುದು ಮೊದಲ ಆದ್ಯತೆ. ಬಿಜೆಪಿ ಸೋಲುವ ಕ್ಷೇತ್ರಗಳಲ್ಲಿ ನನ್ನ ಅಳಿಲ ಸೇವೆ ಮೂಲಕ ಗೆಲ್ಲಿಸುತ್ತೇನೆ.

Advertisement

ರಘುಪತಿ ಭಟ್ಟರು ನಿಮ್ಮನ್ನು ಟೀಕಿಸಿರುವುದು ಸಹಿತ ವಿವಿಧ ವೀಡಿಯೋಗಳು ವೈರಲ್‌ ಆಗುತ್ತಿವೆ. ಅಲ್ಲದೆ ನಿಮ್ಮ ವಿರುದ್ಧ ಸಾಕಷ್ಟು ಟೀಕೆಯೂ ಕೇಳಿ ಬರುತ್ತಿದೆ. ನಿಮಗೆ ಕಸಿವಿಸಿಯಾಗುತ್ತಿಲ್ಲವೆ ?
ನಾನು ಆಡಳಿತ ಪಕ್ಷದಲ್ಲಿರುವಾಗ ವಿಪಕ್ಷದವರು ಟೀಕೆ ಮಾಡಲೇಬೇಕು. ನಮ್ಮ ಹೆಸರಲ್ಲಿ ಅವರು ಹೊಗಳಿ ಭಜನೆ ಮಾಡಲು ಸಾಧ್ಯವಿಲ್ಲ. ನಾನು ಮೋದಿ ಅವರನ್ನು ಟೀಕಿಸಿದ್ದೆ. ಅನಂತರ ಕೋವಿಡ್‌ ಸಂದರ್ಭ ಕಾರ್ಯ ನಿರ್ವಹಣೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದೆ. ಆಗಿನ ವೀಡಿಯೋ ಈಗ ವೈರಲ್‌ ಆಗುತ್ತಿರುವುದರಿಂದ ಚಿಂತೆ ಇಲ್ಲ. ಟೀಕೆ ಬಂದಾಗ ನಾನು ಕುಗ್ಗಲಿಲ್ಲ, ಹೊಗಳಿಕೆ ಬಂದಾಗ ಹಿಗ್ಗಲಿಲ್ಲ. ಟೀಕೆಗಳಿಂದ ವಿಚಲಿತರಾಗಬಾರದು ಇದು ನನ್ನ ಧ್ಯೇಯ.

ನಿಮಗಾಗಿ ಸಮಯ ಕೊಟ್ಟ ಕಾರ್ಯಕರ್ತರ ಕತೆ ಏನು ?
-ನನ್ನ ಮೇಲೆ ಪ್ರೀತಿ ಇರುವವರು ಬಿಜೆಪಿ ಸೇರಲು ಅವಕಾಶವಿದೆ. ಕಾಂಗ್ರೆಸ್‌ನಲ್ಲೇ ನಿಷ್ಠೆಯಿಂದ ಇರುವ ವರಿಗೆ ಅಲ್ಲೇ ಮುಂದುವರಿಯಲು ಹಕ್ಕಿದೆ. ಯಾವುದೇ ಗೊಂದಲವಿಲ್ಲ.

ಬಿಜೆಪಿಯಲ್ಲಿ ಪ್ರಬಲ ವಿರೋಧಿ ಗಳಿದ್ದರೂ ಪಕ್ಷ ಕ್ಕೆ ಹೇಗೆ ಸೇರಿದಿರಿ?
ರಘುಪತಿ ಭಟ್‌ ವಿರೋಧಿಸಿದ್ದರೆ ನನ್ನ ಸೇರ್ಪಡೆ ಸಾಧ್ಯವಾಗುತ್ತಿರಲಿಲ್ಲ. ಭಟ್ಟರು ಹೃದಯ ವೈಶಾಲ್ಯ ಮೆರೆದಿದ್ದಾರೆ.

ಹಿಂದೊಮ್ಮೆ ಬಿಜೆಪಿ ಸೇರ್ಪಡೆ ಸಂಬಂಧ ಕಠಿನ ಶಬ್ದಗಳಿಂದ ನಿರಾಕರಿಸಿರುವ ನಿಮ್ಮ ವೀಡಿಯೋ ತುಣುಕೊಂದು ಸಾಕಷ್ಟು ವೈರಲ್‌ ಆಗಿದೆಯಲ್ಲ?
– ಖಾಸಗಿ ವಾಹಿನಿಯಲ್ಲಿ 2 ನಿಮಿಷ ಮಾತನಾಡಿದ ವೀಡಿಯೋವನ್ನು 28 ಸೆಕೆಂಡ್‌ಗೆ ಕತ್ತರಿಸಿ ವೈರಲ್‌ ಮಾಡಿದ್ದಾರೆ. 2018ರಲ್ಲಿ ಮಂತ್ರಿ ಆಗಿದ್ದಾಗ ಬಿಜೆಪಿಯಿಂದ ಬಂದ ಆಹ್ವಾನವನ್ನು ತಿರಸ್ಕರಿಸಿದ್ದೆ. ಆಗ ನಾನು ಪಕ್ಷಕ್ಕೆ ರಾಜೀನಾಮೆ ನೀಡಿ ಹೊರ ಬಂದಲ್ಲಿ ಸಿದ್ದರಾಮಯ್ಯರಿಗೆ ನೋವಾಗಬಹುದು ಎಂದು ಪಕ್ಷಕ್ಕೆ ದ್ರೋಹ ಬಗೆಯಲ್ಲ ಎಂದು 2021ರ ಸಂದರ್ಶನದಲ್ಲಿ ಹೇಳಿದ್ದೆ. ಘಟನೆ ಆಗಿ 4 ವರ್ಷಗಳು ಕಳೆದಿವೆ. ಬಳಿಕ ಅನಿವಾರ್ಯವಾಗಿ ರಾಜೀನಾಮೆ ನೀಡುವ ಪರಿಸ್ಥಿತಿ ಬಂದಿತು. ಬದಲಾವಣೆ ಜಗದ ನಿಯಮ.

ಬೇಡಿಕೆ ಇಟ್ಟಿಲ್ಲ, ಬಿಜೆಪಿಯೂ ಭರವಸೆ ಕೊಟ್ಟಿಲ್ಲ
ಉಡುಪಿ: ಬಿಜೆಪಿಯ ಮುಂದೆ ಯಾವುದೇ ಬೇಡಿಕೆ ಇಟ್ಟಿಲ್ಲ ಮತ್ತು ಬಿಜೆಪಿ ನನಗೆ ಯಾವುದೇ ಭರವಸೆ, ಕೊಡುಗೆಯನ್ನೂ ಕೊಟ್ಟಿಲ್ಲ. ಮೂರು ವರ್ಷಗಳಿಂದ ಜಿಲ್ಲಾ ಕಾಂಗ್ರೆಸ್‌ನಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ. ಅಲ್ಲಿನ ವರಿಷ್ಠರ ಗಮನಕ್ಕೂ ತಂದರೂ ಸರಿಯಾಗದೇ ಇದ್ದುದರಿಂದ ಬಿಜೆಪಿಗೆ ಸೇರಿದೆೆ ಎಂದು ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2023ರ ಚುನಾವಣೆಯಲ್ಲಿ ಬಿಜೆಪಿಯು 150ಕ್ಕೂ ಅಧಿಕ ಸೀಟು ಗೆಲ್ಲಲು ಪಕ್ಷ ಯಾವ ಕ್ಷೇತ್ರದಲ್ಲಿ ಕೆಲಸ ಮಾಡಲು ಸೂಚಿಸುತ್ತದೋ ಅಲ್ಲಿ (ವಿಶೇಷವಾಗಿ ಮೀನುಗಾರರು ಹೆಚ್ಚಿರುವ ಕಡೆ) ಕೆಲಸ ಮಾಡಲಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next