Advertisement

ಮೇಘಾಲಯದಲ್ಲಿ ಪ್ರಮೀಳಾ ರಾಜ್ಯ

10:00 AM Dec 06, 2019 | Lakshmi GovindaRaju |

ಮನೆಯಲ್ಲಿ ಹೆಣ್ಣುಮಗು ಹುಟ್ಟಿದರೆ ಅವರಿಗೆ ಸಂಭ್ರಮ. ಗಂಡು ಮಗುವಿಗೆ ಆದ್ಯತೆ ಕಡಿಮೆ. ಮನೆಯ ಹೆಚ್ಚಿನ ಜವಾಬ್ದಾರಿಗಳನ್ನು ಹೆಣ್ಣೇ ಹೊರುತ್ತಾಳೆ. ಕೊನೆಯ ಮಗಳು (ಖಾ ಖದುಹ್‌ ) ಮನೆಯ ಆಸ್ತಿಗೆ ಹಕ್ಕುದಾರಳು. ಆದರೆ, ಆಸ್ತಿ ಮಾರಾಟದ ವಿಷಯದಲ್ಲಿ ಸೋದರಮಾವ ಹಾಗೂ ಅಣ್ಣತಮ್ಮಂದಿರ ಮಾತಿಗೂ ಆಕೆ ಬೆಲೆ ಕೊಡಬೇಕು.

Advertisement

ಇತ್ತೀಚೆಗೆ, ಈಶಾನ್ಯ ಭಾರತದಲ್ಲಿರುವ ಮೇಘಾಲಯದ ಕೆಲವು ಹಳ್ಳಿಗಳಿಗೆ ಪ್ರವಾಸ ಹೋಗಿದ್ದೆವು. ಮೇಘಾಲಯವು ತನ್ನ ವಿಶಿಷ್ಟ ಭೌಗೋಳಿಕ, ರಾಜಕೀಯ ಹಾಗೂ ಸುರಕ್ಷತೆಯ ಕಾರಣಗಳಿಂದಾಗಿ ಆಗಾಗ ನಲುಗಿಹೋಗಿದ್ದು, ಇತ್ತೀಚೆಗೆ ಹೊರಜಗತ್ತಿಗೆ ತೆರೆದುಕೊಳ್ಳುತ್ತಿದೆ. ಅಲ್ಲಿನ ಪ್ರಾಕೃತಿಕ ಸೌಂದರ್ಯ ಅನನ್ಯ. ಹೆಸರೇ ಸೂಚಿಸುವಂತೆ ಅದು ಮೇಘಗಳ ನಾಡು. ಸುಂದರವಾದ ಗುಡ್ಡಗಾಡು ಪ್ರದೇಶಗಳು, ಅಸಂಖ್ಯಾತ ಜಲಪಾತಗಳು, ಪ್ರಾಕೃತಿಕ ಗುಹೆಗಳು, ಶುದ್ಧನೀರಿನ ನದಿಗಳನ್ನು ಹೊಂದಿರುವ ಸುಂದರವಾದ ಪುಟ್ಟ ರಾಜ್ಯ ಮೇಘಾಲಯ.

ನಾವು ಅಡ್ಡಾಡಿದ ಮಾಫ್ಲಾಂಗ್‌, ಟೈರ್ನಾ, ಲ್ಯಾಟಿಂಗೋ ಮೊದಲಾದ ಹಳ್ಳಿಗಳಲ್ಲಿ ಹಾಗೂ ದಾರಿಯುದ್ದಕ್ಕೂ ಕಾಣಿಸಿದ ಬೇರೆ ಹಳ್ಳಿಗಳಲ್ಲಿ, ಗಮನಿಸಿದ ವೈಶಿಷ್ಟ್ಯವೇನೆಂದರೆ ಮಹಿಳೆಯರೇ ಹೆಚ್ಚಾಗಿ ಕಾಣಿಸುತ್ತಿದ್ದುದು. ಹೊಲಗಳಲ್ಲಿ ಮಗುವನ್ನು ಬೆನ್ನಿಗೆ ಕಟ್ಟಿಗೆ ದುಡಿಯುವವರು, ಇದ್ದಿಲು ತಯಾರಿಕೆಯಲ್ಲಿ ಕೈಗೆ ಮಸಿ ಮೆತ್ತಿಕೊಂಡಿದ್ದವರು, ಹೋಟೆಲ್‌ , ರಸ್ತೆಬದಿಯ ಚಿಕ್ಕ ಸ್ಟಾಲ್‌ನಲ್ಲಿ ತಿಂಡಿತಿನಿಸುಗಳನ್ನು ಮಾರುತ್ತಿದ್ದವರು, ಅಂಗಡಿಗಳನ್ನು ನಿರ್ವಹಿಸುತ್ತಿದ್ದವರು, ಹೋಮ್‌ ಸ್ಟೇ ನಡೆಸುತ್ತಿದ್ದವರು, ಅಧ್ಯಾಪಕಿಯರು…ಹೀಗೆ ಎಲ್ಲಿ ನೋಡಿದರೂ ಮಹಿಳೆಯರೇ ಪ್ರಾಬಲ್ಯ ಮೆರೆದಿದ್ದರು. ಅಲ್ಲಿನ ಹವಾಮಾನಕ್ಕೆ ತಕ್ಕಂತೆ, ಬೆಳಗ್ಗೆ ನಾಲ್ಕು ಗಂಟೆಗೆ ಸೂರ್ಯೋದಯವೂ, ಸಂಜೆ ನಾಲ್ಕೂವರೆಗೆ ಸೂರ್ಯಾಸ್ತವೂ ಆಗುತ್ತಿತ್ತು. ರಾತ್ರಿ 8 ಗಂಟೆಯ ಹೊತ್ತಿಗೆ ಅಂಗಡಿ ಮುಂಗಟ್ಟುಗಳ ಶಟರ್‌ ಹಾಕುತ್ತಿದ್ದವರೂ ಮಹಿಳೆಯರೇ. ತೀರಾ ಅಪರೂಪವೆಂಬಂತೆ, ಕೆಲವು ಪುರುಷರೂ ಇದೇ ಕೆಲಸ ನಿರ್ವಹಿಸುತ್ತಿದ್ದರು. ಟ್ಯಾಕ್ಸಿ ಡ್ರೈವರ್‌ ಮತ್ತು ವಸ್ತುಗಳನ್ನು ಹೊರುವ ಕೆಲಸಗಳಲ್ಲಿ ಮಾತ್ರ ಪುರುಷರನ್ನು ಕಕ್ಷಿಂಡೆವು.

ಬೇರೆ ಕಡೆಗಿಂತ ಭಿನ್ನ
ಪುರುಷನು ಮನೆಯ ಯಜಮಾನಿಕೆ ನಡೆಸುವುದು ಹಾಗೂ ಮಹಿಳೆ ಆತನ ಜವಾಬ್ದಾರಿಗೆ ಹೆಗಲು ಕೊಡುವುದು ದೇಶದ ಬಹುತೇಕ ಕಡೆಗಳಲ್ಲಿ ಪಾಲಿಸಲ್ಪಡುವ ಪಿತೃಪ್ರಧಾನ ಕುಟುಂಬ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ತಂದೆಯ ಮೂಲಕ ಮಗುವನ್ನು ಗುರುತಿಸಲಾಗುವುದರಿಂದ, ಗಂಡು ಮಗುವಿಗೆ “ವಂಶೋದ್ಧಾರಕ’ನೆಂಬ ಕಿರೀಟ. ಬದಲಾಗುತ್ತಿರುವ ಈ ದಿನಗಳಲ್ಲಿಯೂ “ಗಂಡು’ ಮಗುವಿಗೆ ಆದರವಿರುವುದು ಸತ್ಯ. ಮದುವೆಯ ನಂತರ ಹೆಣ್ಣು ಗಂಡಿನ ಮನೆಗೆ ಹೋಗುವುದು, ಹಾಗೂ ಅದು ಅವಳ “ಮನೆ’ಯಾಗುವುದು ಸಂಪ್ರದಾಯ. ಆದರೆ, ಮೇಘಾಲಯದ ಖಾಸಿ, ಗಾರೋ ಮತ್ತು ಜೈನ್‌ ತಿಯ ಸಮುದಾಯಗಳ ಪದ್ಧತಿ ಇದಕ್ಕಿಂತ ವಿಬಿನ್ನ.

ಆಸ್ತಿಯೂ ಅವಳದ್ದೇ, ಜವಾಬ್ದಾರಿಯೂ ಆಕೆಗೇ
ಟೈರ್ನಾ ಹಳ್ಳಿಯಲ್ಲಿ ನಾವು ಉಳಿದುಕೊಂಡಿದ್ದ ಹೋಮ್‌ ಸ್ಟೇ ಮಾಲಕಿಯನ್ನು ಮಾತನಾಡಿಸಿದೆವು. ಅವರು ಖಾಸಿ ಬುಡಕಟ್ಟು ಜನಾಂಗದವರು. ಸ್ಥಳೀಯ ಜನಸಂಖ್ಯೆಯಲ್ಲಿ ಇವರದ್ದೇ ಸಿಂಹಪಾಲು. ಅವರ ಸಮುದಾಯದಲ್ಲಿ ಮಾತೃಪ್ರಧಾನ ವ್ಯವಸ್ಥೆಯಿದೆ. ಇವರಲ್ಲದೆ ಸ್ಥಳೀಯ ಗಾರೋ, ಜೈನ್‌ ತಿಯಾ ಸಮುದಾಯಗಳಲ್ಲೂ ಮಗುವಿನ ವಂಶವನ್ನು ತಾಯಿಯ ಮೂಲಕವೇ ಗುರುತಿಸುತ್ತಾರೆ. ಮನೆಯಲ್ಲಿ ಹೆಣ್ಣುಮಗು ಹುಟ್ಟಿದರೆ ಅವರಿಗೆ ಸಂಭ್ರಮ. ಗಂಡು ಮಗುವಿಗೆ ಆದ್ಯತೆ ಕಡಿಮೆ. ಮನೆಯ ಹೆಚ್ಚಿನ ಜವಾಬ್ದಾರಿಗಳನ್ನು ಹೆಣ್ಣೇ ಹೊರುತ್ತಾಳೆ. ಕೊನೆಯ ಮಗಳು (ಖಾ ಖದುಹ್‌ ) ಮನೆಯ ಆಸ್ತಿಗೆ ಹಕ್ಕುದಾರಳು. ಆದರೆ, ಆಸ್ತಿ ಮಾರಾಟದ ವಿಷಯದಲ್ಲಿ ಸೋದರಮಾವ ಹಾಗೂ ಅಣ್ಣತಮ್ಮಂದಿರ ಮಾತಿಗೂ ಆಕೆ ಬೆಲೆ ಕೊಡಬೇಕು. ತನ್ನ ಅವಿವಾಹಿತ ಒಡಹುಟ್ಟಿದವರನ್ನು ಸಾಕುವ ಜವಾಬ್ದಾರಿಯೂ ಅವಳಿಗಿರುತ್ತದೆ. ಮದುವೆಯ ನಂತರ ಗಂಡು ತನ್ನ ಹೆಂಡತಿಯ ಮನೆಗೆ ಹೋಗುವ ಪದ್ಧತಿಯನ್ನು ಪಾಲಿಸುತ್ತಾರೆ.

Advertisement

ಬದಲಾವಣೆಯ ಗಾಳಿ
ಇಲ್ಲಿನ ಸ್ತ್ರೀಯರು ಬಹಳ ಶ್ರಮಜೀವಿಗಳು ಹಾಗೂ ಆತ್ಮವಿಶ್ವಾಸಿಗಳು. ಹಾಗೆಂದು, ಇವರ ಬದುಕು ಸುಲಭ ಎನ್ನಲಾಗದು. ಮಾತೃಪ್ರಧಾನ ವ್ಯವಸ್ಥೆಯ ಲಾಭ ಪಡೆಯಲು, ಇತರ ಸಮುದಾಯದ ಜನರು ಇವರನ್ನು ಮದುವೆಯಾಗುವುದೂ ಇದೆಯಂತೆ.

ಇತ್ತೀಚಿನ ದಿನಗಳಲ್ಲಿ, ಭಾರತದ ಇತರ ಕಡೆಯ ಸಂಪ್ರದಾಯಗಳ ಬಗ್ಗೆ ಅರಿವು ಮೂಡುತ್ತಿರುವುದರಿಂದ ಪುರುಷ ವರ್ಗದವರು, ತಮ್ಮನ್ನು ಇತರರಿಗೆ ಹೋಲಿಸಿಕೊಂಡು ಕೀಳರಿಮೆ ಬೆಳೆಸಿಕೊಳ್ಳುವುದೂ ಇದೆ. ಗುಡ್ಡಗಾಡಿನಲ್ಲಿ ಕೃಷಿಮೂಲದ ಅಲ್ಪಾದಾಯ ಸಾಕಾಗದ ಕಾರಣ, ಪುರುಷರು ಉದ್ಯೋಗಕ್ಕಾಗಿ ನಗರಗಳಿಗೆ ಹೋಗುತ್ತಿದ್ದಾರೆ. ಹಾಗಾಗಿ ಬದಲಾವಣೆಯ ಗಾಳಿ ಮೇಘಾಲಯದಲ್ಲಿಯೂ ಬೀಸುತ್ತಿದೆ. ಬಹುತೇಕ ಪುರುಷರು ಪ್ಯಾಂಟ್‌, ಶರ್ಟ್‌ ಧರಿಸಿ ಆಧುನಿಕರಂತೆ ಕಾಣಿಸುತ್ತಿದ್ದಾರೆ. ಹೀಗಾಗಿ, ಬುಡಕಟ್ಟು ಸಮುದಾಯದ ಸಂಪ್ರದಾಯಗಳು ನಶಿಸಿ ಹೋಗುತ್ತಿವೆ ಎಂಬುದು ಅಲ್ಲಿನ ಕೆಲವರ ಅಳಲಾದರೆ, ಬಹುತೇಕ ಅಜ್ಞಾತವಾಗಿದ್ದ ಈಶಾನ್ಯ ಭಾರತದ ಬುಡಕಟ್ಟು ಜನಾಂಗಗಳು ಹೊಸತನಕ್ಕೆ ತೆರೆದುಕೊಳ್ಳುತ್ತಿವೆ ಎಂಬುದು ಇನ್ನೊಂದು ವಾದ. ಏನಿದ್ದರೂ, ಪ್ರಸ್ತುತ ಸನ್ನಿವೇಶದಲ್ಲಿ, ಮೇಘಾಲಯದ ಬುಡಕಟ್ಟು ಜನಾಂಗಗಳಲ್ಲಿ ಮಹಿಳೆಯರದ್ದೇ ಕಾರುಬಾರು.

– ಹೇಮಮಾಲಾ ಬಿ.

Advertisement

Udayavani is now on Telegram. Click here to join our channel and stay updated with the latest news.

Next