ಹುಬ್ಬಳ್ಳಿ: “ದೇಶದಲ್ಲಿರುವ ಕಡು ಬಡವರ ಮನೆಗಳ ತಟ್ಟೆಗೆ ನೇರವಾಗಿ ಸಂಪರ್ಕ ಹೊಂದಿದ, ಬಡ ಕುಟುಂಬ ಗಳ ಹೊಟ್ಟೆ ತುಂಬಿಸಿ ಸಂತೃಪ್ತಿ ಭಾವ ಹೊರಹೊಮ್ಮಿಸುವ ಹೃದಯಸ್ಪರ್ಶಿಯ ಖಾತೆ ಸಿಕ್ಕಿದೆ’ ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ನವೀಕರಿ ಸಬಹುದಾದ ಇಂಧನ ಖಾತೆ ನೂತನ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
“ಉದಯವಾಣಿ’ ಜತೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ನನ್ನ ಮೇಲೆ ವಿಶ್ವಾಸವಿರಿಸಿ ಮಹತ್ವದ ಖಾತೆಯ ಜವಾಬ್ದಾರಿ ನೀಡಿದ್ದಾರೆ. ಅತ್ಯಂತ ಸಮರ್ಥ ಹಾಗೂ ಬದ್ಧತೆಯೊಂದಿಗೆ ಖಾತೆ ನಿರ್ವಹಣೆ ಮಾಡಿ, ಪ್ರತಿ ಬಡ ಕುಟುಂಬದಲ್ಲೂ ನೆಮ್ಮದಿ ಭಾವ ಹೊರಹೊಮ್ಮುವಂತೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು.
ಗ್ರಾಹಕರ ವ್ಯವಹಾರ, ಆಹಾರ, ನಾಗರಿಕ ಸರಬರಾಜು ಖಾತೆ ಅತ್ಯಂತ ಮಹತ್ವದ ಹಾಗೂ ಜನರೊಂದಿಗೆ ನೇರವಾಗಿ ಸಂಪರ್ಕ ಕಲ್ಪಿಸುವ ಪ್ರಾಮುಖ್ಯತೆ ಪಡೆದಿದೆ. ಹಸಿದ ಹೊಟ್ಟೆಗಳಿಗೆ ಅನ್ನ ನೀಡುವ ಪುಣ್ಯದ ಕಾರ್ಯಕ್ಕೆ ತೊಡಗಿಸುವ ಹಾಗೂ ದೇಶದ ಬಡ ಕುಟುಂಬಗಳ ಸೇವೆಗೆ ನೇರವಾಗಿ ತೊಡಗಬಹುದಾದ ಖಾತೆ ಇದಾಗಿದೆ ಎಂದರು.
ಒಂದು ಕಡೆ ರಾಷ್ಟ್ರದ ರೈತ ಸಮುದಾಯಕ್ಕೆ, ಮತ್ತೂಂದೆಡೆ ಹಸಿದ ಹೊಟ್ಟೆಗಳಿಗೆ ಅನ್ನ ನೀಡುವ, ರಾಷ್ಟ್ರಕ್ಕೆ ಆಹಾರ ಭದ್ರತೆ ಕಲ್ಪಿಸಲು ಆಹಾರ ಧಾನ್ಯಗಳ ಸಂಗ್ರಹದಂತಹ ಪ್ರಮುಖ ಜವಾಬ್ದಾರಿಯನ್ನು ಖಾತೆ ಹೊಂದಿದೆ. ಕೃಷಿ ಉತ್ಪನ್ನಗಳ ಬೆಲೆ ಕುಸಿತವಾಗಿ ರೈತರು ಸಂಕಷ್ಟದಲ್ಲಿದ್ದಾಗ ಬೆಂಬಲ ಬೆಲೆ(ಎಂಎಸ್ ಪಿ)ಯಡಿ ಕೃಷಿ ಉತ್ಪನ್ನಗಳ ಖರೀದಿಯೊಂದಿಗೆ ರೈತರ ಮೊಗದಲ್ಲಿ ನಗು ಹೊಮ್ಮಿಸುವ ಕಾರ್ಯವನ್ನು ಮಾಡಲಿದೆ. ಕೋಟ್ಯಂತರ ಬಡ ಕುಟುಂಬಗಳಿಗೆ ಆಹಾರ ಭದ್ರತೆ ಒದಗಿಸುವ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದರು.
ದೇಶದ ಭವಿಷ್ಯದ ಎನರ್ಜಿ: ರಾಷ್ಟ್ರದ ಭವಿಷ್ಯದ ದೃಷ್ಟಿಯಿಂದ ನವೀಕರಿಸಬಹುದಾದ ಇಂಧನ ಖಾತೆಯೂ ಮಹತ್ವದ್ದಾಗಿದೆ. ಸಾಂಪ್ರದಾಯಿಕ ಇಂಧನ ಮೂಲಗಳು ಕರಗುತ್ತಿರುವ ಇಂದಿನ ಸ್ಥಿತಿಯಲ್ಲಿ ನವೀಕರಿಸಬಹುದಾದ ಇಂಧನ ಮೂಲ ಗಳ ಮಹತ್ವ ಹೆಚ್ಚುತ್ತಿದೆ. ವಿಶ್ವದ-ದೇಶದ ಭವಿಷ್ಯದ ಎನರ್ಜಿ ಎಂದೇ ನವೀಕರಿಸಬಹುದಾದ ಇಂಧನವನ್ನು ಗುರುತಿಸಲಾಗಿದೆ. ಪ್ರಧಾನಿ ಮೋದಿ ಮಾರ್ಗದರ್ಶನದಲ್ಲಿ ಈ ಕ್ಷೇತ್ರಕ್ಕೆ ಇನ್ನಷ್ಟು ಉತ್ತೇಜನ, ರಾಜ್ಯಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಉತ್ಸುಕನಾಗಿದ್ದೇನೆ ಎಂದರು.
“ಅನ್ನಭಾಗ್ಯ’ ಬೇಡಿಕೆ ಬಗ್ಗೆ ಪರಿಶೀಲಿಸಿ ಪ್ರತಿಕ್ರಿಯೆ: ಕರ್ನಾಟಕದ ಕಾಂಗ್ರೆಸ್ ಸರ್ಕಾರ “ಅನ್ನಭಾಗ್ಯ’ ಯೋಜನೆಯಡಿ ಬಡ ಕುಟುಂಬದ ಪ್ರತಿಯೊಬ್ಬರಿಗೆ 10 ಕೆಜಿ ಉಚಿತ ಪಡಿತರ ಅಕ್ಕಿ ವಿತರಣೆಗೆ ಕೇಂದ್ರದಿಂದ ಅಕ್ಕಿ ನೀಡಬೇಕೆಂಬ ಬೇಡಿಕೆ ಬಗ್ಗೆ ಚರ್ಚಿಸಲಾಗುವುದು. ಕರ್ನಾಟಕ ಸರ್ಕಾರ ರಾಜಕೀಯವಾಗಿ ಏನೇ ಹೇಳಲಿ. ಈ ಬಗ್ಗೆ ಸಮಗ್ರ ಮಾಹಿತಿ, ಅಂಕಿ-ಅಂಶಗಳ ಕುರಿತು ಅಧಿಕಾರಿಗ ಳೊಂದಿಗೆ ಚರ್ಚಿಸಲಾಗುವುದು. ಇಲಾಖೆಯ ನಿಯಮ, ವಾಸ್ತವ ಸ್ಥಿತಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಾಗುವುದು. ಆ ಬಳಿಕವೇ ಪ್ರತಿಕ್ರಿಯೆ ನೀಡಲಾಗವುದು ಎಂದು ಜೋಶಿ ಹೇಳಿದರು.
ಈ ಹಿಂದೆ ಪ್ರಧಾನಿ ಮೋದಿ ಅವರು ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಹಾಗೂ ಗಣಿ ಖಾತೆ ನೀಡಿದಾಗ ಅವರ ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿ ಅತ್ಯಂತ ನಿಷ್ಠೆ, ಬದ್ಧತೆಯಿಂದ ಕಾರ್ಯ ನಿರ್ವಹಿಸಿದ್ದೇನೆ. ಈಗಲೂ ಅದೇ ಬದ್ಧತೆ ಹಾಗೂ ಪರಿಶ್ರಮದೊಂದಿಗೆ ಕಾರ್ಯನಿರ್ವಹಿಸುತ್ತೇನೆ. ದೇಶದ ಏಳ್ಗೆಗೆ ಶ್ರಮಿಸುತ್ತೇನೆ.
●ಪ್ರಹ್ಲಾದ ಜೋಶಿ, ಕೇಂದ್ರ ಸಚಿವ
■ ಅಮರೇಗೌಡ ಗೋನವಾರ