ಚಿಕ್ಕೋಡಿ: ಕಳೆದ 2014ರಲ್ಲಿ ಮಂಜೂರಾದ ಕುಡಚಿ-ಬಾಗಲಕೋಟ ರೈಲ್ವೆ ಲೈನ್ ಕಾಮಗಾರಿ ವಿಳಂಬವಾಗುತ್ತಿದ್ದು, ಬರುವ ಒಂದು ವರ್ಷದ ಒಳಗೆ ರೈತರಿಗೆ ಸೂಕ್ತ ಪರಿಹಾರ ನೀಡಿ ರೈಲ್ವೆ ಲೈನ್ ಕಾಮಗಾರಿ ಮುಕ್ತಾಯ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಸರ್ಕಾರವನ್ನು ಒತ್ತಾಯಿಸಿದರು.
ಚಿಕ್ಕೋಡಿ ನಗರದಲ್ಲಿ ಮಾತನಾಡಿದ ಅವರು, ಕುಡಚಿ-ಬಾಗಲಕೋಟ ರೈಲ್ವೆ ಲೈನ್ ಕಾಮಗಾರಿ ಆರಂಭವಾಗಿದೆ. ಈಗಾಗಲೇ ಬಾಗಲಕೋಟ ಜಿಲ್ಲೆಯ ಹದ್ದಿಯಲ್ಲಿ ಕಾಮಗಾರಿ ಮುಕ್ತಾಯಗೊಂಡಿದೆ. ಆದರೆ ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ 102 ಕಿ.ಮೀ ಕಾಮಗಾರಿ ಆಗಲು ವಿಳಂಬವಾಗಲು ಕಾರಣ ಏನು ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಈಗಾಗಲೇ ಬೆಳಗಾವಿ ಜಿಲ್ಲಾಧಿಕಾರಿ ಜೊತೆ ಈ ಕಾಮಗಾರಿ ಕುರಿತು ಮಾತುಕತೆ ನಡೆಸಲಾಗಿದೆ. ರೈಲ್ವೆ ಕಾಮಗಾರಿಗೆ ವಶಪಡಿಸಿಕೊಂಡಿರುವ ರೈತರಿಗೆ ಸೂಕ್ತ ಪರಿಹಾರ ಕೊಡಲು 29 ಕೋಟಿ ರೂ ಅನುದಾನ ಬಿಡುಗಡೆ ಮಾಡಿ ಉಪವಿಭಾಗಾಧಿಕಾರಿಗೆ ಕಳಿಸಲಾಗಿದೆಂದು ಹೇಳಿದ್ದಾರೆ. ತಕ್ಷಣಾ ಚಿಕ್ಕೋಡಿ ಉಪವಿಭಾಗಾಧಿಕಾರಿಗಳು ರೈತರಿಗೆ ಪರಿಹಾರ ನೀಡಿ ರೈಲ್ವೆ ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಲೋಂಡಾದಿಂದ ಕುಡಚಿಯವರಿಗೆ ಡಬಲ್ ಲೈನ್ ಕಾಮಗಾರಿ ಭರದಿಂದ ನಡೆಯುತ್ತಿದೆ. ಬರುವ ಮಾರ್ಚ ಒಳಗೆ ಕಾಮಗಾರಿ ಮುಕ್ತಾಯ ಮಾಡಿ ದೇಶಕ್ಕೆ ಸಮರ್ಪಿಸಲಾಗುತ್ತದೆಂದು ರೈಲ್ವೆ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಬರುವ 2024 ರ ಒಳಗಾಗಿ ಕುಡಚಿ-ಬಾಗಲಕೋಟ ರೈಲ್ವೆ ಲೈನ್ ಕಾಮಗಾರಿ ಮುಕ್ತಾಯವಾಗಲು ಚಿಕ್ಕೋಡಿ ಉಪವಿಭಾಗಾಧಿಕಾರಿ ಮಾಧವ ಗೀತ್ತೆ ಅವರು ಪ್ರಯತ್ನ ನಡೆಸಬೇಕು ಎಂದರು.
ಚಿಕ್ಕೋಡಿಯಲ್ಲಿ ನಿರ್ಮಾಣವಾಗುತ್ತಿರುವ ತಾಐಇ-ಮಗು 100 ಹಾಸಿಗೆ ಆಸ್ಪತ್ರೆ ಕಾಮಗಾರಿ ಮುಕ್ತಾಯ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಪ್ರಕಾಶ ಹುಕ್ಕೇರಿ ಒತ್ತಾಯಿಸಿದರು.