ಬೆಂಗಳೂರು: ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಕೇಸ್‌ಗೆ ಸಂಬಂಧಿಸಿದಂತೆ ಆರೋಪಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಪತ್ತೆಯಾಗದೇ ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆಗೆ ಹಿನ್ನಡೆಯಾಗಿದೆ.
ಪ್ರಜ್ವಲ್ ವಿರುದ್ಧ ಎಸ್‌ಐಟಿಯಲ್ಲಿ 4 ಎಫ್ಐಆರ್ ದಾಖಲಾಗಿದೆ. ಆದರೆ, ಈ ಪ್ರಕರಣದ ಆರೋಪಿ ಪತ್ತೆಯಾಗದೇ ತನಿಖೆ ವೇಗವಾಗಿ ಮುಂದೆ ಸಾಗುತ್ತಿಲ್ಲ. ಪ್ರಜ್ವಲ್ ಸಿಕ್ಕಿದರೆ ಹೇಳಿಕೆ ಆಧಾರದ ಮೇಲೆ ತನಿಖೆ ನಡೆಸಿ ಸಾಕ್ಷ್ಯ ಕಲೆ ಹಾಕಬಹುದು. ಜೊತೆಗೆ ಪ್ರಕರಣ ಬೇಧಿಸಲು ಸುಲಭವಾಗುತ್ತದೆ.
ಪ್ರಜ್ವಲ್ ಪಾಸ್‌ಪೋರ್ಟ್ ರದ್ದು ಮಾಡುವ ಪ್ರಕ್ರಿಯೆಗೆ ಕೆಲವು ದಿನಗಳು ಹಿಡಿದರೆ, ಅವರನ್ನು ಪತ್ತೆ ಹಚ್ಚಿ ಭಾರತಕ್ಕೆ ಹಸ್ತಾಂತರಿಸಲು ಇನ್ನೂ ಕೆಲ ದಿನಗಳೇ ಬೇಕಾಗಬಹುದು ಎನ್ನಲಾಗುತ್ತಿದೆ. ಈ ಬೆಳವಣಿಗೆ ಗಮನಿಸಿದರೆ ಲೋಕಸಭಾ ಚುನಾವಣಾ ಫಲಿತಾಂಶ ಬಳಿಕವೇ ಪ್ರಜ್ವಲ್‌ರನ್ನು ಬಂಧಿಸುವ ಲಕ್ಷಣಗಳು ಗೋಚರಿಸುತ್ತಿದೆ ಎಂಬ ಮಾತುಗಳು ಪೊಲೀಸ್ ವಲಯದಲ್ಲಿ ಕೇಳಿ ಬರುತ್ತಿದೆ.
ಹೇಗೆ ಸಾಗುತ್ತಿದೆ ಎಸ್‌ಐಟಿ ತನಿಖೆ ?:
ದೂರು ಕೊಟ್ಟಿರುವ ಸಂತ್ರಸ್ತೆಯರ ಹೇಳಿಕೆ ದಾಖಲಿಸಿಕೊಂಡು ಮಹಜರು ಪ್ರಕ್ರಿಯೆ ನಡೆಸಲಾಗಿದೆ. ಕಲೆ ಹಾಕಲಾದ ಕೆಲವು ಸಾಕ್ಷ್ಯ, ಜಪ್ತಿ ಮಾಡಿರುವ ಎಲೆಕ್ಟ್ರಾನಿಕ್ ವಸ್ತುಗಳು, ಇನ್ನಿತರ ದಾಖಲೆಗಳ ಖಚಿತತೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಎಸ್‌ಐಟಿಯ ಒಂದು ತಂಡವು ಸಾಕ್ಷ್ಯ ಕಲೆ, ಮತ್ತೂಂದು ತಂಡವು ಪ್ರಜ್ವಲ್ ಪತ್ತೆಗೆ ಅಗತ್ಯ ಕಾನೂನು ಪ್ರಕ್ರಿಯೆಯಲ್ಲಿ ತೊಡಗಿದೆ. ಇನ್ನೊಂದು ತಂಡವು ತಾಂತ್ರಿಕ ಕಾರ್ಯಾಚರಣೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.