Advertisement

ಪ್ರಜ್ವಲ್‌ಗೆ ಜೆಡಿಎಸ್‌ ರಾಜ್ಯ ಪ್ರ.ಕಾರ್ಯದರ್ಶಿ ಹುದ್ದೆ

06:50 AM Nov 28, 2017 | Team Udayavani |

ಬೆಂಗಳೂರು:ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಮೊಮ್ಮಗ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಪುತ್ರ ಪ್ರಜ್ವಲ್‌ ರೇವಣ್ಣ ಗೆ ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

Advertisement

ಈ ಮೂಲಕ ದೇವೇಗೌಡರ ಕುಟುಂಬದ ಮೂರನೇ ತಲೆಮಾರಿಗೂ ಜೆಡಿಎಸ್‌ ಪಕ್ಷದಲ್ಲಿ ಅಧಿಕೃತ ಸ್ಥಾನಮಾನ ದೊರೆತಂತಾಗಿದೆ.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿಯೇ ಸಿದ್ಧ ಎಂದು ಕುಟುಂಬದಲ್ಲೇ ಸಂಘರ್ಷಕ್ಕೆ ಕಾರಣವಾಗಿದ್ದ ಪ್ರಜ್ವಲ್‌ ರೇವಣ್ಣಗೆ ರಾಜ್ಯ ಪ್ರಧಾನ ಕಾರ್ಯದರ್ಶಿಯಂತಹ ಮಹತ್ವದ ಹುದ್ದೆ ನೀಡಿರುವುದು ಕುತೂಹಲ ಮೂಡಿಸಿದೆ.ಈ ಮೂಲಕ ಪ್ರಮುಖ ಹುದ್ದೆ ಗಿಟ್ಟಿಸಿಕೊಳ್ಳುವಲ್ಲಿಯೂ ಪ್ರಜ್ವಲ್‌ ಯಶಸ್ವಿಯಾಗಿದ್ದಾರೆ.

ಪ್ರಜ್ವಲ್‌ ರೇವಣ್ಣ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸಂಘಟನೆಗೆ ಇಳಿಯುವ ಮುನ್ನ ಹುದ್ದೆಯೊಂದಿಗೆ ಅಖಾಡಕ್ಕಿಳಿದಿದ್ದಾರೆ.

ಖುದ್ದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ನೇಮಕಾತಿ ಆದೇಶವನ್ನು ಮೊಮ್ಮಗ ಪ್ರಜ್ವಲ್‌ ರೇವಣ್ಣ ಅವರಿಗೆ ಸೋಮವಾರ ಕೊಟ್ಟು ತಿರುಪತಿ ಲಡ್ಡು ಪ್ರಸಾದ ಸಮೇತ ಆರ್ಶೀವದಿಸಿದ್ದಾರೆ.
ರಾಷ್ಟ್ರೀಯ ಅಧ್ಯಕ್ಷರಾದ ಎಚ್‌.ಡಿ.ದೇವೇಗೌಡ ಹಾಗೂ ರಾಜ್ಯಾಧ್ಯಕ್ಷರಾದ ಎಚ್‌.ಡಿ.ಕುಮಾರಸ್ವಾಮಿ ಆದೇಶದ ಮೇರೆಗೆ ಪ್ರದೇಶ ಜನತಾದಳ ಜಾತ್ಯತೀತ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಕೂಡಲೇ ಜಾರಿಗೆ ಬರುವಂತೆ ಪ್ರಜ್ವಲ್‌ ರೇವಣ್ಣ ಅವರನ್ನು ನೇಮಕ ಮಾಡಲಾಗಿದೆ. ಗುರುತರ ಜವಾಬ್ದಾರಿ ವಹಿಸಿಕೊಂಡು ಪಕ್ಷದ ತತ್ವ ಹಾಗೂ ಸಿದ್ಧಾಂತಗಳಿಗೆ ಬದ್ಧರಾಗಿ ರಾಜ್ಯದಲ್ಲಿ ಪಕ್ಷ ಪರಿಣಾಮಕಾರಿಯಾಗಿ ಸಂಘಟಿಸಿ ಎಂದು ಪಕ್ಷದ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ಫ‌ರೂಕ್‌ ಆದೇಶದಲ್ಲಿ ತಿಳಿಸಿದ್ದಾರೆ.

Advertisement

ಬೇಲೂರು, ಹುಣಸೂರು, ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರಗಳ ಪೈಕಿ ಒಂದರಲ್ಲಿ ಪ್ರಜ್ವಲ್‌ ರೇವಣ್ಣ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆಯಾದರೂ ಹಾಸನದಲ್ಲಿ ನನ್ನ ನಂತರ ನೀನೇ ಲೋಕಸಭೆ ಚುನಾವಣೆಗೆ ನಿಲ್ಲುವಂತೆ. ಸದ್ಯಕ್ಕೆ ಪಕ್ಷ ಸಂಘಟನೆ ಮಾಡು ಎಂದು ಪ್ರಜ್ವಲ್‌ಗೆ ದೇವೇಗೌಡರು ಕಿವಿಮಾತು ಹೇಳಿದ್ದಾರೆ ಎಂದು ಹೇಳಲಾಗಿದೆ.

ಪಕ್ಷದ ಸಂಘಟನೆ ದೃಷ್ಟಿಯಿಂದ ಪ್ರಜ್ವಲ್‌ ರೇವಣ್ಣರನ್ನು ಪದಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಪಕ್ಷ ಸಂಘಟನೆ ಪ್ರಜ್ವಲ್‌ ಉದ್ದೇಶವೂ ಹೌದು. ಎಲ್ಲ ಪದಾಧಿಕಾರಿಗಳಿಗೂ ಟಿಕೆಟ್‌ ಕೊಡೋಕೆ ಆಗಲ್ಲ, ಇದರಲ್ಲಿ ಬೇರೆ ರೀತಿ
ಅರ್ಥೈಸಿಕೊಳ್ಳುವುದೇನಿಲ್ಲ. ನಮ್ಮ ಕುಟುಂಬದಲ್ಲಿ ಟಿಕೆಟ್‌ಗಾಗಿ ಒಡಕು ಏರ್ಪಡುವುದಿಲ್ಲ.

–  ಕುಮಾರಸ್ವಾಮಿ,
ಜೆಡಿಎಸ್‌ ರಾಜ್ಯಾಧ್ಯಕ್ಷ

“ನನ್ನ-ಸಿಎಂ ನಡುವಿನ ಸವಾಲಿನ ಚುನಾವಣೆ’
ನಾಗಮಂಗಲ:
ಮುಂದಿನ ಚುನಾವಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ದೇವೇಗೌಡರ ನಡುವಿನ ಸವಾಲಿನ
ಚುನಾವಣೆಯೇ ಹೊರತು, ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ನಡುವಿನ ಚುನಾವಣೆಯಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ತಿಳಿಸಿದರು. ಬೆಳ್ಳೂರಿನಲ್ಲಿ ಜೆಡಿಎಸ್‌ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ವಿರುದ್ಧ ಕಿಡಿಕಾರಿದರು.

ಉಡುಪಿಯಲ್ಲಿ ಧರ್ಮ ಸಂಸದ್‌ ನಡೆಸುತ್ತಿರುವವರು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ವಿಶ್ವದಲ್ಲಿರುವ ಎಲ್ಲ ಧರ್ಮಗಳೂ ಒಂದೇ. ದೇವರ ಹೆಸರಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಅಸ್ಪೃಶ್ಯರ ಮನೆಗೆ ಹೋಗಬೇಕು, ಅವರ ಮನೆಯಲ್ಲಿ ಊಟ ಮಾಡಬೇಕು ಎಂದು ಹೇಳುವ ಜನರು, ಈ ಹಿಂದೆ ಅವರನ್ನು ನಿಕೃಷ್ಟವಾಗಿ ಕಂಡಿದ್ದೇಕೆ?
– ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next