Advertisement
ಮತ ಎಣಿಕೆ ಆರಂಭದಿಂದ ಮುನ್ನಡೆ: ಪ್ರಜ್ವಲ್ ರೇವಣ್ಣ ಅವರು 6,76,606 ಮತಗಳನ್ನು ಪಡೆದು ವಿಜಯಿಯಾದರೆ, ಅವರ ಸಮೀಪದ ಪ್ರತಿಸ್ಪರ್ಧಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಎ. ಮಂಜು ಅವರು 5,35,282 ಮತಗಳನ್ನು ಪಡೆದು ಪರಾಭವಗೊಂಡರು. ಮತ ಎಣಿಕೆ ಆರಂಭವಾದ ಮೊದಲ ಸುತ್ತಿನಿಂದಲೇ ಮುನ್ನಡೇ ಕಾಯ್ದುಕೊಂಡ ಪ್ರಜ್ವಲ್ ರೇವಣ್ಣ ಅವರು ಎಲ್ಲಾ 23 ಸುತ್ತುಗಳಲ್ಲೂ ಮುನ್ನಡೆ ಸಾಧಿಸುತ್ತಲೇ ಸಾಗಿದ ರೇವಣ್ಣ ಅವರು ಭಾರೀ ಅಂತರದ ಜಯ ದಾಖಲಿಸಿ ಮೊದಲ ಪ್ರಯತ್ನದಲ್ಲೇ ಸಂಸತ್ ಪ್ರವೇಶ ಮಾಡುತ್ತಿದ್ದಾರೆ.
Related Articles
Advertisement
ರೇವಣ್ಣ ಅವರ ಕೈ ಬಿಡದ ಮತದಾರರು: ಪ್ರಜ್ವಲ್ ರೇವಣ್ಣ ಅವರ ಗೆಲುವಿನ ಹಿಂದೆ ಎಚ್.ಡಿ.ರೇವಣ್ಣ ಅವರ ಹೋರಾಟ ಬಹುದೊಡ್ಡ ಫಲ ನೀಡಿದೆ. ಜಿಲ್ಲೆಯ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಕಾರ್ಯಗಳ ಅನುಷ್ಠಾನ ಮಾಡುತ್ತಿರುವ ರೇವಣ್ಣ ಅವರು, ಚುನಾವಣೆ ಘೋಷಣೆ ಆದ ನಂತರ ಮೈತ್ರಿ ಪಕ್ಷದ ಕಾಂಗ್ರೆಸ್ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರದಲ್ಲಿ ಸಂಘಟಿತ ಪ್ರಚಾರ ನಡೆಸಿದರು. ಪಕ್ಷದ ಸಂಘಟನೆ, ರೇವಣ್ಣ ಅವರ ವರ್ಚಸ್ಸು ಪ್ರಜ್ವಲ್ ಗೆಲುವಿಗೆ ಬಹುದೊಡ್ಡ ಕೊಡುಗೆ ನೀಡಿದೆ. ಹಾಸನ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿ ಬಹುಮತ ಸಾಧಿಸಿರುವುದೇ ಇದಕ್ಕೆ ಸಾಕ್ಷಿ.
ಎ.ಮಂಜುಗೆ ಸತತ 3 ಸೋಲು: ರಾಜಕೀಯ ಭವಿಷ್ಯದ ಚಿಂತೆಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ರಾಜಕೀಯ ವೈರಿಯಾಗಿಯೇ ಗುರ್ತಿಸಿಕೊಂಡಿರುವ ಮಾಜಿ ಸಚಿವ ಎ.ಮಂಜು ಅವರು ಪ್ರಜ್ವಲ್ ರೇವಣ್ಣ ಅವರೆದರು ಸೋಲು ಅನುಭವಿಸುವ ಮೂಲಕ ಲೋಕಸಭೆ ಪ್ರವೇಶದ ಕನಸು ಭಗ್ನವಾಗಿದೆ. ಅಷ್ಟೇ ಅಲ್ಲ. ಸತತವಾಗಿ ಮೂರು ಚುನಾವಣೆಗಳಲ್ಲಿ ಸೋಲು ಅನುಭವಿಸುವ ಮೂಲಕ ಜಿಲ್ಲೆಯ ರಾಜಕಾರಣದಲ್ಲಿ ಹಿನ್ನಡೆಯನ್ನೂ ಅನುಭವಿಸಿದ್ದಾರೆ. ಜೆಡಿಎಸ್ ಭದ್ರಕೋಟೆ ಎಂದೇ ಗುರ್ತಿಸಿರುವ ಹಾಸನ ಜಿಲ್ಲೆಯಲ್ಲಿ 2013 ರ ವಿಧಾನಸಭಾ ಚುನಾವಣೆಯಲ್ಲಿ 7 ಕ್ಷೇತ್ರಗಳ ಪೈಕಿ 2 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿತ್ತು. ಅದರಲ್ಲಿ ಎ.ಮಂಜು ಅವರೂ ಒಬ್ಬರು. ಐವರು ಜೆಡಿಎಸ್ ಶಾಸಕರು, ರಾಜಕೀಯ ದಿಗ್ಗಜ, ಹಾಸನ ಲೋಕಸಭಾ ಕ್ಷೇತ್ರದ ಸದಸ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೆದರು ಹೋರಾಡುತ್ತಲೇ ಹಾಸನ ಜಿಲ್ಲೆಯ ರಾಜಕಾರಣದಲ್ಲಿ ಗುರ್ತಿಸಿಕೊಂಡಿದ್ದ ಎ.ಮಂಜು ಅವರು 2014 ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೆದರು ಕಾಂಗ್ರೆಸ್‌ನಿಂದ ಸ್ಪರ್ಧೆಗಿಳಿದು 1.04 ಲಕ್ಷ ಮತಗಳ ಅಂತರದಿಂದ ಸೋಲು ಅನುಭವಿಸಿದರು. ಅದಾದ ನಂತರ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಪಶುಸಂಗೋಪನಾ ಸಚಿವರಾಗಿ ಎರಡೂವರೆ ವರ್ಷ ಜಿಲ್ಲೆಯಲ್ಲಿ ಜೆಡಿಎಸ್‌ನೊಂದಿಗೆ ಸಂಘರ್ಷ ನಡೆಸಿಕೊಂಡೇ ಬಂದ ಎ.ಮಂಜು ಅವರು 2018 ರ ವಿಧಾನಸಭಾ ಚುನಾವಣೆಯಲ್ಲಿ ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದು ಹ್ಯಾಟ್ರಿಕ್ ಗೆಲುವಿನ ಕನಸು ಕಂಡಿದ್ದರು. ಆದರೆ ಜೆಡಿಎಸ್ ಅಭ್ಯರ್ಥಿ ಎ.ಟಿ.ರಾಮಸ್ವಾಮಿ ಅವರೆದುರು 12 ಸಾವಿರ ಮತಗಳ ಅಂತರದಿಂದ ಪರಾಭವಗೊಂಡರು. 2ಸೋಲಿನ ಕಹಿ ಮರೆಯುವ ಮುನ್ನವೇ ಎದುರಾದ ಲೊಕಸಭಾ ಚುನಾವಣೆಯಲ್ಲಿ ಸ್ಪರ್ಧೆಗಿಳಿದು ರಾಜಕೀಯವಾಗಿ ಚೇತರಿಸಿಕೊಳ್ಳುವ ಯತ್ನದಲ್ಲಿದ್ದಾಗಲೇ ರಾಜ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್ ಚುನಾವಣಾ ಮೈತ್ರಿ ಮಾಡಿಕೊಂಡು ಲೊಕಸಭಾ ಚುನಾವಣೆ ಎದುರಿಸುವ ನಿರ್ಧಾರ ಪ್ರಕಟವಾಗಯಿತು. ಹಾಸನ ಲೊಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗುತ್ತಿದ್ದಂತೆಯೇ ಬಿಜೆಪಿಯಲ್ಲಿ ಟಿಕೆಟ್ ಖಾತರಿಪಡಿಸಿಕೊಂಡು ಆ ಸೇರಿದ ಎ.ಮಂಜು ಅವರು ಈಗ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರೆದುರು 1.43 ಲಕ್ಷ ಮತಗಳ ಅಂತರದಲಿ ಪರಾಭವಗೊಂಡಿದ್ದಾರೆ. ಬಿಜೆಪಿ, ಕಾಂಗ್ರೆಸ್ ಪಕ್ಷಗಳಲ್ಲಿ ರಾಜಕೀಯ ನೆಲೆಗಾಗಿ ಅಡ್ಡಾಡುತ್ತಲೇ 2 ಲೋಕಸಭಾ ಚುನಾವಣೆಗಳೂ ಸೇರಿ ಸತತ ಮೂರು ಸೋಲು ಅನುಭವಿಸಿರುವ ಎ.ಮಂಜು ಅವರಿಗೆ ಭವಿಷ್ಯದ ರಾಜಕೀಯ ಚಿಂತೆ ಕಾಡುತ್ತಿದೆ.