ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಘಟನೆಯಲ್ಲಿ ಏನೆಲ್ಲ ನಡೆಯಿತು ಎಂಬುದನ್ನು ಒಂದು ತಿಂಗಳಿಂದ ನೋಡಿ ದ್ದೇನೆ. ಅವರು ವಿದೇಶದಿಂದ ವಾಪಸ್ ಬಂದು ಎಸ್‌ಐಟಿ ಮುಂದೆ ಹಾಜರಾಗಬೇಕೆಂದು ನಾನು ಮತ್ತು ದೇವೇಗೌಡರು ಹೇಳಿದ್ದೆವು. ಜತೆಗೆ ದೇವೇಗೌಡರು ಕೊನೆಯ ಎಚ್ಚರಿಕೆ ನೀಡಿದ್ದರು. ನಮ್ಮ ಮಾತಿನಂತೆ ಅವರು ಬಂದು ಹಾಜರಾಗಿದ್ದಾರೆ. ಅಲ್ಲಿಗೆ ನಮ್ಮ ಕುಟುಂಬದ ಪಾತ್ರ ಮುಗಿಯಿತು. ಇನ್ನು ಎಸ್‌ಐಟಿ ಮತ್ತು ಸರಕಾರದ್ದೇ ಜವಾಬ್ದಾರಿ ಎಂದು ಅವರು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗ ತನಿಖೆ ನಡೆಯುತ್ತಿದೆ. ಅವರು ಗೆದ್ದ ಮೇಲೆ ಏನು ಅಂತ ನೋಡೋಣ. ಕಾನೂನು ಪ್ರಕಾರ ಭವಾನಿ ರೇವಣ್ಣಗೆ ನೋಟಿಸ್ ಕೊಟ್ಟಿದ್ದಾರೆ. ಅದರಬಗ್ಗೆ ನಾನು ಪದೇ ಪದೆ ಮಾತನಾಡುವುದಿಲ್ಲ ಎಂದರು.
ಕಾರ್ಯಕರ್ತರ ಇಚ್ಛೆಯಂತೆ ವಿಧಾನ ಪರಿಷತ್ತಿನ ಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗಿ ಮುಖಂಡ ಟಿ.ಎನ್. ಜವರಾಯಿ ಗೌಡರು ನಾಮಪತ್ರ ಸಲ್ಲಿಸಿದ್ದಾರೆ. ಜವರಾಯಿಗೌಡ ಗೌಡರ ಜತೆಗೆ ಬಿ.ಎಂ.ಫಾರೂಕ್ ಮತ್ತುಕುಪೇಂದ್ರ ರೆಡ್ಡಿ ಬಗ್ಗೆಯೂ ಚರ್ಚೆ ಆಗಿತ್ತು. ಫಾರೂಕ್ ಹೆಸರು ಮುಂಚೂಣಿಯಲ್ಲಿತ್ತು. ಕೊನೆಗೆ ಫಾರೂಕ್ ಅವರೇ ಜವರಾಯಿಗೌಡ ಸ್ಪರ್ಧೆ ಮಾಡಲಿ ಅಂತ ಹೇಳಿದರು ಎಂದು ಕುಮಾರಸ್ವಾಮಿ ತಿಳಿಸಿದರು.
ವಾಲ್ಮೀಕಿ ನಿಗಮ ಅಕ್ರಮದಲ್ಲಿ ಇಡೀ ಸಂಪುಟ ಭಾಗಿ
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮ ಹಣದ ವರ್ಗಾವಣೆಗೆ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇರ ಹೊಣೆ ಹೊರಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಎಲ್ಲವನ್ನೂ ಸಚಿವ ನಾಗೇಂದ್ರ ಅವರ ತಲೆಗೆ ಕಟ್ಟುವ ಷಡ್ಯಂತ್ರ ನಡೆಯುತ್ತಿದೆ. ಅಕ್ರಮದಲ್ಲಿ ಸರಕಾರದ ಇಡೀ ಸಂಪುಟವೇ ಭಾಗಿಯಾಗಿರುವ ಅನುಮಾನವಿದೆ. ಹೀಗಾಗಿ ಎಲ್ಲ ನಿಗಮ ಮಂಡಳಿಗಳಲ್ಲಿ ಇರುವ ಹಣದ ಬಗ್ಗೆ ಜನರ ಮುಂದೆ ಲೆಕ್ಕ ಇಡಬೇಕು ಎಂದು ಆಗ್ರಹಿಸಿದರು.