ರಾಯಚೂರು: ಪ್ರಜ್ವಲ್ ರೇವಣ್ಣ ಪ್ರಕರಣವನ್ನು ರಾಜ್ಯ ಸರ್ಕಾರ ದಾಖಲೆಯ ವೇಗದಲ್ಲಿ ತನಿಖೆ ಮಾಡಿ ತೋರಿಸಲಿ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ತಾಕೀತು ಮಾಡಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಸುಮೋಟೊ ಕೇಸ್ ಮಾಡಬೇಕಿತ್ತು. ಹಾಸನದಿಂದ ಬೆಂಗಳೂರು ಹೋಗುವಾಗಲೇ ಚೆಕ್ ಪೋಸ್ಟ್ ಹಾಕಿ ಅವರನ್ನು ಹಿಡಿಯಬಹುದಿತ್ತು. ಯಾವಾಗಲೋ ಸುಮೋಟ್ ಕೇಸ್ ಹಾಕಬೇಕಿತ್ತು ಎಂದು ಅಮಿತ್ ಶಾ ಕೂಡ ಹೇಳಿದ್ದಾರೆ. ದೇವೆಗೌಡರ ಕೂಡ ಪ್ರಜ್ವಲ್ ರನ್ನು ಅಮಾನತು ಮಾಡಿದ್ದಾರೆ. ಪಾಲಿಟಿಕ್ಸ್ ನಲ್ಲಿ ಏನು ಆಗಬಾರದಿತ್ತೋ ಅದು ಆಗಿದೆ. ಯಾರಿಗೂ ಕೂಡ ಹೀಗೆ ಆಗಬಾರದಿತ್ತು ಎಂದರು.
ಎಸ್ಐಟಿ ತನಿಖೆ ಮಾಡಲಿ. ನಾವು ಮಾತನಾಡುವುದರಿಂದ ನ್ಯಾಯ ಸಿಗುತ್ತಾ? ಆ ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಲಿ. ಪ್ರಕರಣವನ್ನು ಬಹಳ ಗಂಭಿರವಾಗಿ ತನಿಖೆಯಾಗಲಿ. ಯಾರೇ ತಪ್ಪು ಮಾಡಿದ್ದಾರೆ ಅವರ ವಿರುದ್ಧ ಕ್ರಮ ಆಗಬೇಕು ಎಂದರು.
ಕಾಂಗ್ರೆಸ್ ನವರು ಹಿಂದೆ ಜೆಡಿಎಸ್ ಜತೆ ಮೈತ್ರಿಯಲ್ಲಿದ್ದರು. ಆಗ ಏನು ಮಾತನಾಡಲಿಲ್ಲ. ಈಗ ನೋಡಿದರೆ ಉಲ್ಟಾ ಮಾತನಾಡುತ್ತಿದ್ದಾರೆ. ಜನ ಎಲ್ಲವನ್ನೂ ನೋಡುತ್ತಿದ್ದಾರೆ. ಕೇಂದ್ರ ಸರಕಾರಕ್ಕೂ ಇದಕ್ಕೂ ಏನು ಸಂಬಂಧ? ಎಲ್ಲ ಸಂಸದ ಸದಸ್ಯರಿಗೆ ಡಿಪ್ಲೋಮೇಟಿಕ್ ಪಾಸ್ ಇದೆ. ಡಿಕೆ ಶಿವಕುಮಾರ್, ನಮ್ಮ ಡಿಕೆ ಸುರೇಶ್ ಗೂ ಡಿಪ್ಲೋಮೇಟಿಕ್ ಪಾಸ್ ಇದೆ. ಆದರೆ, ಪ್ರಜ್ವಲ್ ಹೋಗಿದ್ದು ಪ್ರೈವೆಟ್ ಬೇಸ್ ನಲ್ಲಿ. ಪಾಸ್ ಪೋರ್ಟ್ ರದ್ದು ಮಾಡುವ ಹಕ್ಕು ಕೋರ್ಟ್ ಗಿದೆ. ರಾಜ್ಯ ಸರಕಾರ ಮೂಲ ಪರಿಶೀಲನೆಯನ್ನೂ ಕೂಡ ಮಾಡಿಲ್ಲ ಎಂದರು.
ಜೆಡಿಎಸ್ & ಬಿಜೆಪಿ ಬೇರೆ ಬೇರೆ ಪಕ್ಷ. ಮ್ರೈತ್ರಿಯಲ್ಲಿದ್ದೇವೆ ಅಷ್ಟೇ. ಇಬ್ಬರೂ ಒಂದೇ ಪಕ್ಷ ಆಗಿದ್ದರೆ ವಿಲೀನ ಮಾಡಬಹುದಿತ್ತು ಅಲ್ವಾ? ಬೇರೆ ಬೇರೆ ಇದ್ದರೂ ಎನ್ ಡಿಎದಲ್ಲಿ ಎಲ್ಲರೂ ಒಂದಾಗಿದ್ದಾರೆ. ಕಾರಣ ನರೇಂದ್ರ ಮೋದಿ ಪ್ರಧಾನ ಮಂತ್ರಿ ಆಗಬೇಕು ಎಂಬುದು ಎಂದರು.
ಕಾಂಗ್ರೆಸ್ ಬಳಿ ಮಾತನಾಡಲಿಕೆ ಬೇರೆ ವಿಷಯಗಳಿಲ್ಲ. ಕಾಂಗ್ರೆಸ್ ಗೆ ಈ ಬಾರಿ 50ಕ್ಕಿಂತ ಕಡಿಮೆ ಸ್ಥಾನ ಬರುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಗಳಿಲ್ಲ. ರಾಹುಲ್ ಕೊನೆ ಕ್ಷಣದಲ್ಲಿ ರಾಯಬರೇಲಿಯಿಂದ ನಾಮಪತ್ರ ಸಲ್ಲಿಸಿದರು. ಮೂರು ಬಾರಿ ಅಮೇಥಿಯಲ್ಲಿ ಗೆಲುವು ಕಂಡಿದ್ದರು. ಈಗ ಅಲ್ಲಿ ಹೋಗಲು ಅವರಿಗೆ ಮನಸ್ಸಿಲ್ಲ ಎಂದು ಟೀಕಿಸಿದರು.