ಬೆಂಗಳೂರು: ಇತ್ತ ಸಂಸದ ಪ್ರಜ್ವಲ್ ರೇವಣ್ಣ ಬೆಂಗಳೂರಿನತ್ತ ಆಗಮಿಸಿದರೆ, ಅತ್ತ ಮಾಜಿ ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕುಟುಂಬ ಸಮೇತ ಕಬಿನಿ ಹಿನ್ನೀರಿನ ಲ್ಲಿರುವ ರೆಸಾರ್ಟ್‌ಗೆ ತೆರಳಿದ್ದಾರೆ.
ಗುರುವಾರ ಮಧ್ಯಾಹ್ನ ಕುಟುಂಬ ಸಮೇತ ಜೆ.ಪಿ. ನಗರ ನಿವಾಸದಿಂದ ಹೊರಟ ಕುಮಾರಸ್ವಾಮಿ, ಲೋಕ ಸಭೆ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುವ ಮುನ್ನ ಮರಳಲಿದ್ದಾರೆ ಎಂದು ಅವರ ಆಪ್ತಮೂಲಗಳು ತಿಳಿಸಿವೆ.
ಪ್ರಜ್ವಲ್ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿ ಮೊದಲ ಪ್ರತಿಕ್ರಿಯೆ ನೀಡಿದ್ದ ಕುಮಾರಸ್ವಾಮಿ, ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದಿದ್ದರಲ್ಲದೆ, ಕೆಲವೇ ದಿನಗಳಲ್ಲಿ ಪ್ರಜ್ವಲ್‌ರನ್ನು ಪಕ್ಷದಿಂದ ಅಮಾನತು ಮಾಡಿದ್ದರು. ಇದಾದ ಬಳಿಕ ಸಹೋದರ ರೇವಣ್ಣರ ಬಂಧನ, ಬಿಡಗಡೆಯಂತಹ ಘಟನೆಗಳು ನಡೆದು ಇಡೀ ಕುಟುಂಬವೇ ಜರ್ಝರಿತಗೊಂಡಿತ್ತು. ರೇವಣ್ಣ ಪರ ನಿಲ್ಲಬೇಕೋ? ಸಂತ್ರಸ್ತೆಯರ ಪರ ನಿಲ್ಲಬೇಕೋ? ಪ್ರಜ್ವಲ್‌ನನ್ನು ಕರೆಸುವುದು ಹೇಗೆ ಹೀಗೆ ನಿತ್ಯದ ಜಂಜಾಟದಿಂದ ಯಾವುದರ ಕಡೆಗೂ ಗಮನ ಹರಿಸಲಾರದ ಸ್ಥಿತಿ ಇತ್ತು.
ದಿನನಿತ್ಯವೂ ಹೇಳಿಕೆ-ಪ್ರತಿಹೇಳಿಕೆ ಗಳಿಂದ ಬೇಸತ್ತಿದ್ದ ಕುಮಾರಸ್ವಾಮಿ, ಎಲ್ಲಿದ್ದರೂ ಬಂದು ಎಸ್‌ಐಟಿ ತನಿಖೆ ಎದುರಿಸುವಂತೆ ಪ್ರಜ್ವಲ್‌ಗೆ ಕರೆ ಕೊಟ್ಟಿ ದ್ದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕೂಡ ಎಚ್ಚರಿಕೆ ಪತ್ರ ಬರೆದಿದ್ದರು. ಅತ್ತ ಪ್ರಜ್ವಲ್ ವಿಮಾನ ಏರಿದ್ದು ಖಚಿತವಾಗುತ್ತಿದ್ದಂತೆ ಕುಮಾರಸ್ವಾಮಿ ಕುಟುಂಬ ಸಮೇತ ರೆಸಾರ್ಟ್‌ಗೆ ತೆರಳಿದರು. ಜತೆಯಲ್ಲಿ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖೀಲ್ ಕುಮಾರಸ್ವಾಮಿ, ಸೊಸೆ ರೇವತಿ ಹಾಗೂ ಮೊಮ್ಮಗ ಅವ್ಯಾನ್ ದೇವ್ ಕೂಡ ಕುಮಾರಸ್ವಾಮಿ ಜತೆಗಿದ್ದಾರೆ.
ಜೆ.ಪಿ. ನಗರ ನಿವಾಸದಿಂದ ಹೊರಟಾಗ ಕೇರಳದ ವಯನಾಡಿನಲ್ಲಿರುವ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡುತ್ತಾರೆ ಎನ್ನುವ ವದಂತಿ ಹರಡಿತ್ತು. ಅಷ್ಟರಲ್ಲಿ ಕೇರಳದ ರಾಜರಾಜೇಶ್ವರ ದೇಗುಲದಲ್ಲಿ ನನ್ನ ವಿರುದ್ಧ ಪ್ರಭಾವಿ ರಾಜಕಾರಣಿಯೊಬ್ಬರು ಶತ್ರು ಭೈರವಿ ಯಾಗ ನಡೆಸುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆರೋಪಿಸಿದ್ದು, ಕೇರಳದ ಬದಲು ಕರ್ನಾಟಕದ ರೆಸಾರ್ಟ್‌ನಲ್ಲೇ ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದೆ.