Advertisement

ಪ್ರಶಂಸೆ ಬೇಕಿಲ್ಲದಷ್ಟು ದೊಡ್ಡ ಸಾಧನೆ

12:50 AM Jan 22, 2019 | Harsha Rao |

ಸಿದ್ಧಗಂಗಾ ಕ್ಷೇತ್ರಕ್ಕೆ ನೂರು ಪಾಲು ವೈಭವ ಉಂಟಾಗುವ ಶಕ್ತಿ ಬಂದುದು ಈ ಶ್ರೀ ಶಿವಕುಮಾರ ಸ್ವಾಮೀಜಿಯವರ ಉದಾರ, ವಿಶಾಲ ದೃಷ್ಟಿಯಿಂದ. ಸಾವಿರಾರು ವಿದ್ಯಾರ್ಥಿಗಳ ಮಾನಸಿಕ ಬೆಳವಣಿಗೆಯ, ಭಾವೀ ಜೀವನ ವಿಕಾಸದ ಒಂದು ಬೃಹತ್‌ ಕ್ಷೇತ್ರವಾದುದು ಇಲ್ಲಿನ ಸ್ವಾಮೀಜಿಯವರ ಅನುಗ್ರಹದಿಂದ.

Advertisement

ನಾಡಿನ ಮೂಲೆ ಮೂಲೆಗಳಿಂದ ಅನಾಥರನ್ನು ಬರಮಾಡಿಕೊಂಡು, ಅವರಿಗೆಲ್ಲ ಅನ್ನದಾನದ ಜತೆಯಲ್ಲಿ ಜ್ಞಾನದ ದಾನವನ್ನೂ ಮಾಡುತ್ತಿರುವ ದೃಶ್ಯವಂತೂ ನನ್ನ ಪಾಲಿಗೆ ಅಸಾಮಾನ್ಯ ನೋಟವೆನಿಸಿದೆ. ಅಸಂಖ್ಯಾತ ಬಡಬಗ್ಗರಿಗೆ ಇಹದ ಆವಶ್ಯಕತೆಗಳನ್ನು ಪೂರೈಸುತ್ತಿರುವುದು ಮಾತ್ರವಲ್ಲ, ಅವರ ಪರವನ್ನು ಸಹ ಈ ನಾಡಿಗೆ ಋಣಿಯನ್ನಾಗಿ ಮಾಡುತ್ತಿರುವ ಕರ್ಮಭೂಮಿ ಇದಾಗಿದೆ. ಈ ಸಂಸ್ಥೆಯು ನಮ್ಮ ನಾಡಿನ ವೀರಶೈವ ಪಂಥಿಯರ ಸಂಸ್ಥೆಯಾದರೂ, ಯಾವೊಂದು ಜಾತಿ, ಮತದ ತಾರತಮ್ಯ ತೋರಿಸದೇ, ವಿದ್ಯಾರ್ಥಿಗಳ ಪೋಷಣೆ, ಶಿಕ್ಷಣ, ಭಾವನೆಗಳನ್ನು ಬೆಳೆಸುತ್ತಾ ಬಂದಿದೆ. ಎಲ್ಲೆಲ್ಲಿ ಸಾರ್ವಜನಿಕ ಸಂಸ್ಥೆಗಳು ಹೀಗೆ ಅದ್ಭುತ ಪ್ರಮಾಣದಲ್ಲಿ ಕಂಡು ಬರುತ್ತವೆಯೋ, ಅವುಗಳ ಬಗ್ಗೆ ನಾನೇ ಆಗಲಿ, ನನ್ನಂಥವರಾಗಲೀ, ಸಂತೋಷ ಪಡಲೇಬೇಕು. ಸಂಸ್ಥೆಗಳ ಇಂಥ ಸಾರ್ವಜನಿಕ ಸೇವೆಯ ಬಗ್ಗೆ ನಾನು ಹಲವಾರು ಸಾರ್ವಜನಿಕ ಸಭೆಗಳಲ್ಲಿ ಉಲ್ಲೇಖೀಸಿದ್ದೇನೆ. ಈ ದೃಷ್ಟಿಯಿಂದ ಪರಿಶೀಲಿಸಿದಾಗ, ಅನ್ಯಮತೀಯ ಸಂಸ್ಥೆಗಳನ್ನು ನೋಡುವಾಗ, ಅವುಗಳ ಸ್ವಾರ್ಥಪರ, ಮತೀಯ ಸಂಕುಚಿತ ದೃಷ್ಟಿ ತಮ್ಮ ಪೋಷಣೆಯನ್ನು ಕೇವಲ ಸ್ವಪಂಥೀಯರ ಸಲುವಾಗಿ ಮಾತ್ರ ಉಳಿಸಿಕೊಂಡಿರುವುದನ್ನು ಕಾಣಬಹುದು. ಶ್ರೀ ಕ್ಷೇತ್ರದ‌ ಸಾಧನೆಗೆ ನನ್ನಂಥ ಲೇಖಕನ ಪ್ರಶಂಸೆ ಬೇಕಾಗಿಯೇ ಇಲ್ಲ ಎಂಬಷ್ಟು ದೊಡ್ಡ ಸಾಧನೆ ಶ್ರೀಗಳದ್ದು.

– ಕೆ. ಶಿವರಾಮ ಕಾರಂತ

Advertisement

Udayavani is now on Telegram. Click here to join our channel and stay updated with the latest news.

Next