Advertisement
ಸಚಿವರು ಹಾಗೂ ಸಂಪುಟ ಉಪಸಮಿತಿಯ ಸದಸ್ಯರೂ ಆದ ಕೃಷ್ಣ ಬೈರೇಗೌಡ ಮತ್ತು ದಿನೇಶ್ ಗುಂಡೂರಾವ್ ಸೋಮವಾರ ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದರು. ನಿವೃತ್ತ ನ್ಯಾಯಮೂರ್ತಿ ಅವರಿಗೆ ವೈಯಕ್ತಿಕ ನಿಂದನೆ ಮಾಡಿದ ಪ್ರಹ್ಲಾದ್ ಜೋಶಿ ಹೇಳಿಕೆ ಕಾನೂನುಬಾಹಿರವಾಗಿದ್ದು, ಕೂಡಲೇ ರಾಷ್ಟ್ರಪತಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಪ್ರಹ್ಲಾದ್ ಜೋಶಿ ತಮ್ಮ ಹೇಳಿಕೆಗೆ ಕ್ಷಮೆ ಕೇಳಬೇಕು. ಇಲ್ಲವಾದರೆ ರಾಜ್ಯಪಾಲರು ತಮ್ಮ ಅಧಿಕಾರ ಚಲಾಯಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ದೂರು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕಮಿಷನ್ ಇನ್ಕ್ವಾರಿ ಆ್ಯಕ್ಟ್ 1952ರ ಪ್ರಕಾರ ಪ್ರಹ್ಲಾದ ಜೋಶಿ ಹೇಳಿಕೆ ಕಾನೂನುಬಾಹಿರವಾಗಿದೆ. ಇದಕ್ಕೆ 6ತಿಂಗಳವರೆಗೆ ಶಿಕ್ಷೆ ವಿಧಿಸಲು ಅವಕಾಶವಿದೆ. ಹೀಗಾಗಿ ಈ ವಿಚಾರವನ್ನು ರಾಷ್ಟ್ರಪತಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲು ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿದೆ. ರಾಜ್ಯಪಾಲರು ನಮ್ಮ ಅಹಾವಾಲುಗಳನ್ನು ತಾಳ್ಮೆಯಿಂದ ಆಲಿಸಿದ್ದು, ಈ ರೀತಿಯ ವೈಯಕ್ತಿಕ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. ಕೇಂದ್ರ ಸಚಿವರು ಎಂದಾಕ್ಷಣ ಏನು ಬೇಕಾದರು ಮಾತನಾಡಬಹುದು ಎಂಬ ಅಹಂಕಾರ ಪ್ರವೃತ್ತಿಯಲ್ಲಿ ಪ್ರಹ್ಲಾದ ಜೋಶಿ ಮಾತನಾಡಿದ್ದಾರೆ. ಇತ್ತಿಚೆಗೆ ಜೋಶಿ ಹೇಳಿಕೆಗಳು ಅಹಂಕಾರ ದಿಂದ ಕೂಡಿವೆ. ನ್ಯಾಯಮೂರ್ತಿ ಆಗಿದ್ದವರನ್ನು ಕಾಂಗ್ರೆಸ್ ಏಜೆಂಟ್ ಎಂದರೆ ಏನರ್ಥ? ಜೋಶಿ ಅವರು ರಾಜಕಾರಣಿಗಳಾದ ನಮ್ಮ ಮೇಲೆ ಮಾತನಾಡಲಿ ಅಥವಾ ಕಾನೂನು ಹೋರಾಟ ನಡೆಸಲಿ. ಆದರೆ, ಗೌರವಾನ್ವಿತ ನ್ಯಾಯಮೂರ್ತಿಗಳ ವೈಯಕ್ತಿಕ ನಿಂದನೆ ಸರಿಯಲ್ಲ ಎಂದು ತಿಳಿಸಿದರು. ಕೃಷ್ಣ ಬೈರೇಗೌಡ ಮಾತನಾಡಿ, ಜೋಶಿ ಅವರ ಹೇಳಿಕೆ ಅತ್ಯಂತ ಖಂಡನೀಯ. ಕೂಡಲೇ ತಮ್ಮ ಹೇಳಿಕೆಯನ್ನು ವಾಪಸ್ ಪಡೆದು, ಕ್ಷಮೆ ಕೇಳುವುದು ಸೂಕ್ತ. ಇಲ್ಲವಾದರೆ, ಈಗಾಗಲೇ ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿದೆ. ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ತೀಕ್ಷ್ಣವಾಗಿ ಹೇಳಿದರು.