Advertisement

ಸಿಎಂ ಸ್ಥಾನಕ್ಕೆ ಕಾಂಗ್ರೆಸ್‌ ನಾಯಕರು ಬಡಿದಾಡುತ್ತಿರುವುದು ವಿಪರ್ಯಾಸ : ಜೋಶಿ ಲೇವಡಿ

08:28 PM Jun 28, 2021 | Team Udayavani |

ಹುಬ್ಬಳ್ಳಿ: ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅಧಿಕಾರದಲ್ಲಿದ್ದಾಗ ಒಂದಿಷ್ಟು ಭಿನ್ನಾಭಿಪ್ರಾಯಗಳು ಸಾಮಾನ್ಯ. ಆದರೆ ವಿಪಕ್ಷದಲ್ಲಿರುವ ಕಾಂಗ್ರೆಸ್‌ ನಾಯಕರು ಬಡಿದಾಡುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಲೇವಡಿ ಮಾಡಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ ನಾಯಕರು ಹಗಲುಗನಸು ಕಾಣುತ್ತಿದ್ದಾರೆ. ಅಲ್ಲಿನ ನಾಯಕರಿಗೆ ಮುಖ್ಯಮಂತ್ರಿ ಕನಸು ಬಿದ್ದಿರಬೇಕು. ಹೀಗಾಗಿ ಬಡಿದಾಡುತ್ತಿದ್ದಾರೆ. ಆ ಪಕ್ಷದ ಪರಿಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇಂತಹ ಸನ್ನಿವೇಶದಲ್ಲಿ ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಬಡಿದಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.

ಕಾಂಗ್ರೆಸ್‌ ನಾಯಕರಲ್ಲಿ ಮೂರಕ್ಕೂ ಹೆಚ್ಚು ಗುಂಪುಗಳಾಗಿವೆ. ಡಿ.ಕೆ.ಶಿವಕುಮಾರ ಹಾಗೂ ಸಿದ್ದರಾಮಯ್ಯ ಅವರಿಗೆ ಆಗುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ ಅವರು ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಬಡಿದಾಡುತ್ತಿದ್ದಾರೆ. ಮುಂದೆ ಅಧಿಕಾರಕ್ಕೆ ಬರುತ್ತೇವೆ ಎಂಬುದು ಕನಸಿನ ಮಾತಾಗಿದೆ. ಬಿಜೆಪಿಯಲ್ಲಿ ಉಂಟಾಗಿರುವ ಗೊಂದಲ ಮರೆಮಾಚಲು ಕಾಂಗ್ರೆಸ್‌ ನಾಯಕರ ಮೂಲಕ ಬಿಜೆಪಿ ನಾಯಕರು ಮುಂದಿನ ಮುಖ್ಯಮಂತ್ರಿ ವಿಚಾರ ಹರಿಬಿಟ್ಟಿದ್ದಾರೆ ಎನ್ನುವುದು ಶುದ್ಧ ಸುಳ್ಳು. ಬಿಜೆಪಿ ನಾಯಕರ ಮಾತು ಕೇಳುತ್ತಾರೆ ಎನ್ನುವುದಾದರೆ ಅವರಿಗೆ ಸ್ವಂತಿಕೆ ಇಲ್ಲವೇ ಎಂದು ಪ್ರಶ್ನಿಸಿದರು.

ನಮ್ಮ ಪಕ್ಷದಲ್ಲಿ ಸಣ್ಣಪುಟ್ಟ ಗೊಂದಲಗಳು ಇದ್ದವು. ಅವುಗಳಿಗೆ ಪರಿಹಾರ ನೀಡಲಾಗಿದೆ. ಯಾವ ನಾಯಕರನ್ನು ರಾಜ್ಯದಿಂದ ಕೇಂದ್ರ ನಾಯಕರು ಕರೆಯಿಸಿಕೊಳ್ಳುತ್ತಿಲ್ಲ. ಅವರು ತಮ್ಮ ವೈಯಕ್ತಿಕ ಕೆಲಸಗಳಿಗೆ ದೆಹಲಿಗೆ ಹೋದರೆ ಅದಕ್ಕೆ ರಾಜಕೀಯ ಕಾರಣ ಎನ್ನುವುದು ಎಷ್ಟು ಸೂಕ್ತ. ಮಾಜಿ ಸಚಿವ ರಮೇಶ ಜಾರಕಿಹೊಳಿ ರಾಜೀನಾಮೆ ನೀಡುವುದಾಗಿ ಹೇಳಿರುವುದು ನನ್ನ ಗಮನಕ್ಕಿಲ್ಲ. ಸಚಿವ ಸಿ.ಪಿ.ಯೋಗೀಶ್ವರ ಯಾವ ಪರೀಕ್ಷೆಯನ್ನು ಎಲ್ಲಿ ಬರೆದಿದ್ದಾರೆ ಎಂಬುದು ಗೊತ್ತಿಲ್ಲ. ರಾಜ್ಯದಲ್ಲಿ ಉಂಟಾಗಿದ್ದ ಎಲ್ಲಾ ಗೊಂದಲಗಳಿಗೆ ಪಕ್ಷದ ಹೈಕಮಾಂಡ್‌ ಪರಿಹಾರ ನೀಡುವ ಕೆಲಸ ಮಾಡಿದೆ. ಇಲ್ಲಿನ ನಾಯಕರು ಹೇಳಿಕೆ ನೀಡಿದರೆ ಅದಕ್ಕೆ ವಿಶೇಷ ಅರ್ಥ ಕೊಡಬೇಕಾಗಿಲ್ಲ ಎಂದರು.

ಇದನ್ನೂ ಓದಿ :ಎಂಟು ಬಾರಿ ಶಾಸಕನಾಗಿರುವ ನನಗೂ ಸಿ.ಎಂ. ಆಗುವ ಅರ್ಹತೆ ಇದೆ : ಸಚಿವ ಉಮೇಶ್ ಕತ್ತಿ

Advertisement

ಬೆಳಗ್ಗೆ 8 ಗಂಟೆಯಿಂದಲೇ ಲಸಿಕೆ:
ಆಯಾ ಜಿಲ್ಲೆಯ ಜನ ಸಂಖ್ಯೆಯ ಆಧಾರದ ಮೇಲೆ ಲಸಿಕೆ ವಿತರಣೆ ಮಾಡಲಾಗುತ್ತಿದೆ. ಹಂತ ಹಂತವಾಗಿ ಉತ್ಪಾದನೆ ಹೆಚ್ಚಿಸುವ ಕೆಲಸ ನಡೆಯುತ್ತಿದೆ. ಒಂದು ವಾರದಲ್ಲಿ ಬೇಡಿಕೆಗೆ ತಕ್ಕಂತೆ ಲಸಿಕೆ ದೊರೆಯಲಿದೆ. ಲಸಿಕೆ ಸಮಸ್ಯೆಯಾಗದಂತೆ ಎಚ್ಚರವಹಿಸಲು ರಾಜ್ಯ ಆರೋಗ್ಯ ಸಚಿವ ಡಾ| ಸುಧಾಕರ ಹಾಗೂ ಮುಖ್ಯಕಾರ್ಯದರ್ಶಿ ಅವರಿಗೆ ಮಾತನಾಡಿದ್ದೇನೆ. ಲಸಿಕೆಗೆ ಹೆಚ್ಚಿನ ಜನರು ಬರುತ್ತಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 10ರ ಬದಲು 8 ಗಂಟೆಯಿಂದಲೇ ಲಸಿಕೆ ನೀಡಿಕೆ ಆರಂಭಿಸುವ ಕುರಿತು ಅಧಿಕಾರಿಗಳೊಂದಿಗೆ ಮಾತನಾಡಲಾಗುವುದು. ಕೇಂದ್ರ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವಿಚಾರ ಪ್ರಧಾನ ಮಂತ್ರಿಗಳಿಗೆ ಬಿಟ್ಟಿದ್ದು. ರಾಜ್ಯದ ಇಂತಹ ಸಂಸದರಿಗೆ ಸಚಿವ ಸ್ಥಾನ ನೀಡುವಂತೆ ರಾಜ್ಯ ಬಿಜೆಪಿ ಘಟಕ ಪ್ರಸ್ತಾವನೆ ಸಲ್ಲಿಸಿದರೆ ಅದಕ್ಕೆ ನನ್ನ ಒಪ್ಪಿಗೆ ಅಥವಾ ಅಭಿಪ್ರಾಯ ನೀಡುತ್ತೇನೆ. ಇಲ್ಲಿಯವರೆಗೆ ಆ ರೀತಿ ಯಾವುದೇ ಬೆಳವಣಿಗೆ ನಡೆದಿಲ್ಲ. ಪ್ರತಿಯೊಂದು ರಾಜ್ಯದ ಬಗ್ಗೆ ಪ್ರಧಾನಿಗಳಿಗೆ ಗೊತ್ತಿದೆ ಎಂದರು.

ಕೇರಳದಲ್ಲಿ ಕನ್ನಡ ಹೆಸರಿನ ಊರುಗಳಿಗೆ ಮಲಯಾಳಂ ಹೆಸರು ಬದಲಿಸುತ್ತಿರುವ ಕೆಲಸ ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಈ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿ ಕೇಂದ್ರ ಗೃಹ ಸಚಿವರಿಗೆ ವಿವರಣೆ ನೀಡುತ್ತೇನೆ. ಅವರ ಮೂಲಕ ಅಲ್ಲಿನ ರಾಜ್ಯ ಸರ್ಕಾರಕ್ಕೆ ಸಲಹೆ ನೀಡುವ ಕೆಲಸ ಮಾಡಲಾಗುವುದು.
– ಪ್ರಹ್ಲಾದ ಜೋಶಿ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next