ಭೋಪಾಲ್ : ಮಾಲೆಗಾಂವ್ ಬ್ಲಾಸ್ಟ್ ಕೇಸಿನ ಆರೋಪಿ ಮತ್ತು ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರಜ್ಞಾ ಸಿಂಗ್ ಠಾಕೂರ್ ಅವರು ಇಂದು ಸೋಮವಾರ ಕೇಂದ್ರ ಸಚಿವೆ ಉಮಾ ಭಾರತಿ ಅವರನ್ನು ಭೇಟಿಯಾಗಿ ಅತ್ಯಂತ ಭಾವುಕರಾಗಿ ಕಣ್ಣೀರ್ಗರೆದ ಪ್ರಸಂಗ ನಡೆಯಿತು.
ಉಮಾ ಭಾರತಿ ಅವರು ಈ ಹಿಂದೆ ಭೋಪಾಲ್ ಕ್ಷೇತ್ರದಿಂದ ಗೆದ್ದು ಸಂಸತ್ತಿಗೆ ಹೋದವರು. ಈ ಬಾರಿ ಆಕೆ ಸ್ಪರ್ಧಿಸುತ್ತಿಲ್ಲ. ಆಕೆಯ ಬದಲು ಪ್ರಜ್ಞಾ ಠಾಕೂರ್ ಗೆ ಬಿಜೆಪಿ ಮಣೆ ಹಾಕಿದೆ. ಅಂತೆಯೇ ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಪ್ರಜ್ಞಾ ಅವರು ಕಾಂಗ್ರೆಸ್ ಅಭ್ಯರ್ಥಿ, ಹಿರಿಯ ನಾಯಕ, ದಿಗ್ವಿಜಯ್ ಸಿಂಗ್ ಅವರೆದುರು ಸೆಣಸುತ್ತಿದ್ದಾರೆ.
ಉಮಾ ಭಾರತಿ ಅವರನ್ನು ಪ್ರಜ್ಞಾ ಠಾಕೂರ್ ಅವರು ಆಕೆಯ ಶ್ಯಾಮಲಾ ಹಿಲ್ಸ್ ಪ್ರದೇಶದಲ್ಲಿನ ನಿವಾಸದಲ್ಲಿ ಭೇಟಿಯಾದರು. ಅನಂತರ ಭಾರತಿ ಅವರ ಕಾರಿನಲ್ಲಿ ಕುಳಿತು ಭಾವುಕರಾಗಿ ಕಣ್ಣೀರ್ಗರೆದ ಪ್ರಜ್ಞಾ ಅವರ ಕಣ್ಣೀರನ್ನು ಭಾರತಿ ಒರೆಸಿ ಸಾಂತ್ವನ ಗೈದರು. ಆ ಬಳಿಕ ನಡೆದ ಬೃಹತ್ ರಾಲಿಯಲ್ಲಿ ನೆರೆದ ಜನಸಮೂಹದ ಮುಂದೆಯೂ ಪ್ರಜ್ಞಾ ತಮ್ಮ ಭಾವುಕತೆಯನ್ನು ನಿಯಂತ್ರಿಸಲಾಗದೆ ಕಣ್ಣೀರು ಹರಿಸಿದರು.
ದೀದಿ ಮಾ ಅವರನ್ನು (ಪ್ರಜ್ಞಾ ಠಾಕೂರ್ ಅವರನ್ನು ಉಮಾ ಭಾರತಿ ಕರೆಯುವ ಹೆಸರು) ಭೋಪಾಲ್ ಕ್ಷೇತ್ರದ ಅಭ್ಯರ್ಥಿಯಾಗಿ ಬಿಜೆಪಿ ಹೆಸರಿಸಿದ ದಿನವೇ ಆಕೆ ಚುನಾವಣೆಯಲ್ಲಿ ಜಯಿಸುವುದು ನಿಶ್ಚಿತವೆಂದು ನನಗೆ ಅನ್ನಿಸಿತು. ಪ್ರಜ್ಞಾ ಅವರು ಭಾರೀ ಮತಗಳ ಅಂತರದಿಂದ ಜಯ ಸಾಧಿಸುವುದು ಖಚಿತ ಎಂದು ಉಮಾ ಭಾರತಿ ಅನಂತರ ಸುದ್ದಿಗಾರರಿಗೆ ಹೇಳಿದರು.
ಪ್ರಜ್ಞಾ ಠಾಕೂರ್ ಅಳುತ್ತಿದ್ದಂತೆಯೇ ಉಮಾ ಭಾರತಿ ಅವರು ಆಕೆಯನ್ನು ಸಾಂತ್ವನಗೈದು ಆಕೆಯ ಹಣೆಗೊಂದು ಪ್ರೀತಿಯ ಚುಂಬನ ನೀಡಿದರು.