ಬೀದರ: ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಸಂಬಂಧಿಸಿದ ಅಧಿಕಾರಿಗಳು ಒತ್ತು ಕೊಡಬೇಕೆಂದು ಡಿಸಿ ರಾಮಚಂದ್ರನ್ ಆರ್. ಸೂಚಿಸಿದರು.
ನಗರದ ಡಿಸಿ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಯೋಜನೆ ಅನುಷ್ಠಾನಕ್ಕೆ ವಿಮಾ ಸಂಸ್ಥೆ ಪ್ರತಿನಿಧಿ ಗಳೂ ಹೆಚ್ಚಿನ ಆಸಕ್ತಿ ವಹಿಸಬೇಕು. ಜಿಲ್ಲೆಯಲ್ಲಿ ಯೋಜನೆ ಬಗ್ಗೆ ವ್ಯಾಪಕ ಪ್ರಚಾರ ಕೈಗೊಂಡು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆಗೆ ನೋಂದಾಯಿಸುವಂತೆ ಕ್ರಮ ವಹಿಸಬೇಕು. ಬೆಳೆ ವಿಮೆ ಮಾಡಿಸಲು ಬ್ಯಾಂಕ್‌ಗಳಿಗೆ ಬರುವ ರೈತರಿಗೆ ವಿನಾಕಾರಣ ತೊಂದರೆ ಕೊಡಬಾರದು ಎಂದು ಸೂಚಿಸಿದರು.
ಕೃಷಿ ಜಂಟಿ ನಿರ್ದೇಶಕ ತಾರಾಮಣಿ ಜಿ.ಎಚ್. ಮಾತನಾಡಿ, ಗ್ರಾಪಂ ಮಟ್ಟಕ್ಕೆ ಒಳಪಡುವ ಬೆಳೆಗಳಾದ ಜೋಳ (ಮಳೆಯಾಶ್ರಿತ) ಬೆಳೆಗೆ ನ.30 ಹಾಗೂ ಕಡಲೆ ಮಳೆಯಾಶ್ರಿತ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರುಪಾಲ್ಗೊಳ್ಳಲು ಡಿ.31ರ ವರೆಗೆ ಅವಕಾಶವಿದೆ. ಹೋಬಳಿ ಮಟ್ಟಕ್ಕೆ ಒಳಪಡುವ ಬೆಳೆಗಳಾದ ಕುಸುಬೆ (ಮಳೆಯಾಶ್ರಿತ) ಬೆಳೆಗೆ ನ. 30 ಮತ್ತು ಗೋದಿ (ಮಳೆಯಾಶ್ರಿತ) ಡಿ.16, ಕಡಲೆ (ನೀರಾವರಿ), ಜೋಳ (ನೀರಾವರಿ), ಸೂರ್ಯಕಾಂತಿ (ನೀರಾವರಿ), ಸೂರ್ಯಕಾಂತಿ (ಮಳೆಯಾಶ್ರಿತ), ಗೋದಿ (ನೀರಾವರಿ), ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರು ಪಾಲ್ಗೊಳ್ಳಲು ಡಿ.31 ಕೊನೆ ದಿನವಾಗಿದೆ ಎಂದು ಮಾಹಿತಿ ನೀಡಿದರು.
ಡಿಸಿಸಿ ಬ್ಯಾಂಕ್ ಸಿಇಒ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕುಗಳು ಬೆಳೆ ವಿಮೆಗೆ ನೋಂದಾಯಿಸಬೇಕು. ರೈತರು ಕೃಷಿ ಭೂಮಿಯಲ್ಲಿ ಲಭ್ಯವಿರುವ ಬೆಳೆಗೆ ಮಾತ್ರ ವಿಮೆಗೆ ಒಳಪಡಿಸುವುದು ಸೂಕ್ತ ಎಂದರು.
ಕಿರು ಮಾಹಿತಿ ಪತ್ರ ಬಿಡುಗಡೆ: ಕೃಷಿ ಇಲಾಖೆ, ಜಿಪಂ ಪ್ರಕಟಿಸಿದ ಫಸಲ್ ಬಿಮಾ ಯೋಜನೆ ಹಿಂಗಾರು 2020-21 ಕುರಿತು ಮಾಹಿತಿ ಪುಸ್ತಕ ಡಿಸಿ ಬಿಡುಗಡೆ ಮಾಡಿದರು. ಈ ವೇಳೆ ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಉಪ ಕೃಷಿ ನಿರ್ದೇಶಕ ಸೋಮಶೇಖರ ಬಿರಾದಾರ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುವರ್ಣ, ತೋಟಗಾರಿಕೆ ಅಧಿಕಾರಿ ಶ್ರೀಮಂತ ಬಿರಾದಾರ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಿ.ಎಂ. ಕಮತಗಿ, ಕೃಷಿ ಅಧಿಕಾರಿ ರಾಜಕುಮಾರ ಎಕ್ಕೇಲಿ, ಯುಎಸ್‌ಜಿಐಸಿನ ಜಿಲ್ಲಾ ಸಂಯೋಜಕ ವಿನಯಕುಮಾರ ಇತರರು ಇದ್ದರು.