ಲೋಕಸಭೆ ಚುನಾವಣೆಯ ಏಳು ಹಂತದ ಮತದಾನ ಮುಕ್ತಾಯ ಕಂಡ ಬೆನ್ನಲ್ಲೇ ಹಲವು ಮಾಧ್ಯಮಗಳು ಪ್ರಕಟಿಸಿದ ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಕಟಿಸಿದ್ದು, ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ 400 ಸ್ಥಾನಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದ್ದವು. ಆದರೆ ಮಂಗಳವಾರ (ಜೂನ್ 04) ಬಹಿರಂಗಗೊಂಡ ಫಲಿತಾಂಶದಲ್ಲಿ ಸಮೀಕ್ಷೆಯ ಲೆಕ್ಕಾಚಾರ ತಲೆಕೆಳಗಾಗಿದ್ದು ಸ್ಪಷ್ಟವಾಗಿದೆ. ಅಲ್ಲದೇ ಉತ್ತರಪ್ರದೇಶ, ಪಶ್ಚಿಮಬಂಗಾಳ ಮತ್ತು ಮಹಾರಾಷ್ಟ್ರದಲ್ಲಿ ನಮ್ಮ ಲೆಕ್ಕಾಚಾರ ತಪ್ಪಾಗಿದೆ ಎಂದು Axis My india ಚುನಾವಣೋತ್ತರ ಸಮೀಕ್ಷೆ ಏಜೆನ್ಸಿ ಅಧ್ಯಕ್ಷ ಪ್ರದೀಪ್ ಗುಪ್ತಾ ತಿಳಿಸಿದ್ದಾರೆ.
ಇದನ್ನೂ ಓದಿ:Maharashtra ಶಿವಸೇನೆಯ ಬಲ ನನ್ನಲ್ಲೇ ಇದೆ ಎಂದು ತೋರಿಸಿದ ಉದ್ಧವ್ ಠಾಕ್ರೆ!
ಉತ್ತರಪ್ರದೇಶ, ಪಶ್ಚಿಮಬಂಗಾಳ ಮತ್ತು ಮಹಾರಾಷ್ಟ್ರದಲ್ಲಿ ನಮ್ಮ ಸಮೀಕ್ಷೆಗಿಂತ ಕಡಿಮೆ ಪ್ರಮಾಣದಲ್ಲಿ ಬಿಜೆಪಿ ಮತ ಗಳಿಸಿದ್ದು, ದಲಿತ ಸಮುದಾಯ ಪ್ರಮುಖ ಪಾತ್ರವಹಿಸಿದ್ದು, ಇದು ಇಂಡಿಯಾ ಬ್ಲಾಕ್ ಗೆ ವರದಾನವಾಗಿದೆ ಎಂದು ವಿಶ್ಲೇಷಿಸಿದ್ದಾರೆ.
ಎನ್ ಡಿಎ 361ರಿಂದ 401 ಸ್ಥಾನಗಳನ್ನು ಗಳಿಸಲಿದ್ದು, ಎನ್ ಡಿಎ ಸರ್ಕಾರ ರಚಿಸಲಿದೆ ಎಂದು ಭವಿಷ್ಯ ನುಡಿದಿದ್ದೇವು. ಆದರೆ ಈಗಿನ ಟ್ರೆಂಡ್ ಪ್ರಕಾರ ಎನ್ ಡಿಎ 295 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಅಂದರೆ ಸುಮಾರು 66 ಸ್ಥಾನಗಳು ಕಡಿಮೆಯಾದಂತಾಗಿದೆ ಎಂದು ಗುಪ್ತಾ ಇಂಡಿಯಾ ಟುಡೇ ಟಿವಿ ಜತೆಗಿನ ಚರ್ಚೆಯಲ್ಲಿ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಎನ್ ಡಿಎ 67 ಸ್ಥಾನ ಪಡೆಯಲಿದೆ ಎಂದು ಸಮೀಕ್ಷೆ ಹೇಳಿತ್ತು. ಆದರೆ ಎನ್ ಡಿಎ ಕೇವಲ 38 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಬರೋಬ್ಬರಿ 30 ಸ್ಥಾನಗಳು ಕಡಿಮೆ ಪಡೆದಂತಾಗಿದೆ. ಅದೇ ರೀತಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 26ರಿಂದ 32 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ತಿಳಿಸಿದ್ದು, ಅಲ್ಲಿ ಕೇವಲ 11 ಸ್ಥಾನ ಮಾತ್ರ ಪಡೆದಿದೆ. ನಮ್ಮ ಭವಿಷ್ಯಗಿಂತ 15 ಸ್ಥಾನಗಳ ವ್ಯತ್ಯಾಸ ಬಂದಿದೆ. ಮಹಾರಾಷ್ಟ್ರದಲ್ಲೂ ಎನ್ ಡಿಎ 28 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಿದ್ದು, ಕೇವಲ 20 ಕ್ಷೇತ್ರಗಳಲ್ಲಿ ಗೆಲುವು ಗಳಿಸಿದೆ. ಹೀಗಾಗಿ ಮೂರು ರಾಜ್ಯಗಳಲ್ಲಿ ಎನ್ ಡಿಎಗೆ 60 ಸ್ಥಾನಗಳ ಕೊರತೆಯಾಗಿದೆ ಎಂದು ಗುಪ್ತಾ ಹೇಳಿದರು.
ನಮ್ಮ ಸಮೀಕ್ಷೆ ಸಂಪೂರ್ಣ ತಪ್ಪಾಗಿದೆ. ಈ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಗುಪ್ತಾ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಉತ್ತರಪ್ರದೇಶ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರದಲ್ಲಿ ದಲಿತ ಮತಗಳು ನಿರ್ಣಾಯಕ ಪಾತ್ರ ವಹಿಸಿವೆ ಎಂದರು.
ರಾಮ ಮಂದಿರ ಉದ್ಘಾಟನೆ ವಿಚಾರದಲ್ಲಿ ದಲಿತರು ಅಂತರ ಕಾಯ್ದುಕೊಂಡಿದ್ದಾರೆ. ಮೀಸಲಾತಿ, ಸಂವಿಧಾನ ಬದಲಾವಣೆಯಂತಹ ವಿಚಾರಗಳು ಮತ ಬದಲಾವಣೆಗೆ ಕಾರಣವಾದವು. ಮಹಾರಾಷ್ಟ್ರದಲ್ಲಿ ಪ್ರಕಾಶ್ ಅಂಬೇಡ್ಕರ್ ಅವರ ವಂಚಿತ್ ಬಹುಜನ್ ಅಘಾಡಿ (ವಿಬಿಎ)ಯಿಂದ ಇಂಡಿಯಾ ಬ್ಲಾಕ್ ಗೆ ಲಾಭವಾಗಿದೆ.
ಆದರೆ ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಬಿಹಾರ, ತಮಿಳುನಾಡು ಹಾಗೂ ಇತರ ರಾಜ್ಯಗಳ ಸಮೀಕ್ಷೆ ಸರಿಯಾಗಿದೆ. ಅದೇ ರೀತಿ ಆಂಧ್ರಪ್ರದೇಶ, ಒಡಿಶಾ. ಸಿಕ್ಕಿಂ ಮತ್ತು ಅರುಣಾಚಲ್ ಪ್ರದೇಶದ ವಿಧಾನಸಭೆ ಚುನಾವಣೆಯ ಸಮೀಕ್ಷೆ ಸರಿಯಾಗಿದೆ ಎಂದು ಗುಪ್ತಾ ಹೇಳಿದರು.