ಬೆಂಗಳೂರು: ಕೊರೊನಾ ಹಿನ್ನೆಲೆ ಯಲ್ಲಿ ಕೃಷಿಕರ, ಕೃಷಿ ಕಾರ್ಮಿಕರ ಮಕ್ಕಳ ಕೋಟಾದಡಿ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ಪ್ರಾಯೋಗಿಕ ಪರೀಕ್ಷೆಯನ್ನು ರದ್ದು ಮಾಡಲಾಗಿದೆ.
ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುವುದು ಕಷ್ಟ. ಹೀಗಾಗಿ ಪ್ರಾಯೋಗಿಕ ಪರೀಕ್ಷೆ ರದ್ದು ಮಾಡಬೇಕೆಂದು ಕೃಷಿ ಮತ್ತು ಕೃಷಿ ಪೂರಕ ವಿಶ್ವವಿದ್ಯಾನಿಲಯ ಸರಕಾರಕ್ಕೆ ಮನವಿ ಮಾಡಿದ್ದು, ಅದರಂತೆ ಸರಕಾರ ಪ್ರಸ್ತಾವನೆ ಪರಿಶೀಲಿಸಿ, ಪ್ರಾಯೋಗಿಕ ಪರೀಕ್ಷೆ ರದ್ದು ಮಾಡಿದೆ.
ಪ್ರಾಯೋಗಿಕ ಪರೀಕ್ಷೆಯನ್ನು ಆನ್‌ಲೈನ್ ಮೂಲಕ ನಡೆಸಲು ಸಾಧ್ಯವಿಲ್ಲದ ಕಾರಣ 2021-22ನೇ ಸಾಲಿಗೆ ಮಾತ್ರ ಅನ್ವಯಿಸುವಂತೆ ಪದವಿ ಪ್ರವೇಶಾತಿ ಕುರಿತಂತೆ ಕೃಷಿಕರ ಮಕ್ಕಳ ಕೋಟಾದಡಿ ಪ್ರವೇಶ ನೀಡಲು ನಡೆಸಲಾಗುವ ಪ್ರಾಯೋಗಿಕ ಪರೀಕ್ಷೆಯನ್ನು ರದ್ದು ಮಾಡಿದೆ. ಪರೀಕ್ಷೆ ಬದಲಾಗಿ ವಿಶೇಷ ನಿಯಮಗಳು, ಮಾರ್ಗಸೂಚಿಗಳು ರಚಿಸಿ ಪ್ರವೇಶಾತಿ ಪ್ರಕ್ರಿಯೆಯನ್ನು ನಡೆಸಲು ತೀರ್ಮಾನಿಸಿದೆ.
ಅರ್ಹ ಅಭ್ಯರ್ಥಿಗಳು ಅಗತ್ಯವಾಗಿ ಪರಿಶೀಲನೆಗೆ ಒದಗಿಸಬೇಕಾಗಿದ್ದ ಮೂಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಆಯಾ ವಿಶ್ವವಿದ್ಯಾನಿಲಯಗಳ ವೆಬ್‌ಸೈಟ್‌ಗೆ ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡಬೇಕು ಎಂದು ಸೂಚಿಸಿದೆ.
ವಿ.ವಿ.ಗಳು ದಾಖಲಾತಿಗಳ ಪರಿಶೀಲನೆಯ ಅನಂತರ ಅರ್ಹತೆ ಪಡೆದ ಅಭ್ಯರ್ಥಿಗಳ ಪ್ರತ್ಯೇಕ ಪಟ್ಟಿ ತಯಾರಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಕಳುಹಿಸಿಕೊಡಬೇಕು. ಪ್ರಕಟಿತ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಲಿದೆ.