Advertisement

ಪ್ರಾಯೋಗಿಕ ಗಣಿತ ಕಲಿಕೆ ಅತ್ಯಗತ್ಯ

04:00 PM Aug 04, 2019 | Suhan S |

ರಾಮನಗರ: ಗಣಿತ ಕಬ್ಬಿಣದ ಕಡಲೆ ಎಂದೇ ಇಂದಿಗೂ ವಿದ್ಯಾರ್ಥಿಗಳ ಭಾವನೆ. ಪ್ರಾಯೋಗಿಕವಾಗಿ ಗಣಿತ ಕಲಿಕೆ ಅಗತ್ಯವಿದೆ ಎಂದು ಡಿಡಿಪಿಐ ಎಂ.ಎಚ್.ಗಂಗಮಾರೇಗೌಡ ಸಲಹೆ ನೀಡಿದರು.

Advertisement

ನಗರದ ಹೋಲಿ ಕ್ರೆಸೆಂಟ್ ಆಂಗ್ಲ ಶಾಲೆಯಲ್ಲಿ ನಡೆದ ‘ಮ್ಯಾಥ್ಸ್ಮೇನಿಯಾ’ ಗಣಿತ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ಮಾತನಾಡಿ, ಇಂತಹ ಕಾರ್ಯಕ್ರಮಗಳು ಗಣಿತ ಕ್ಲಿಷ್ಟವಾದ ವಿಷಯವಲ್ಲ ಎಂಬುದನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಡುತ್ತದೆ. ವಿದ್ಯಾರ್ಥಿಗಳು ಸುಲಭ ವಿಧಾನಗಳ ಮೂಲಕ ಗಣಿತ ಕಲಿತರೆ ಇದು ಇನ್ನಷ್ಟು ಸರಳವಾಗುತ್ತದೆ. ಶಿಕ್ಷಕರು ಸಹ ಸುಲಭ ವಿಧಾನಗಳ ಮೂಲಕ ಗಣಿತ ಬೋಧಿಸಬೇಕು. ಹೊಸ ಕೌಶಲ ಮತ್ತು ಕ್ರಿಯಾಶೀಲ ವಿಧಾನಗಳ ಮೂಲಕ ಕ್ಲಿಷ್ಟಕರ ವಿಚಾರಗಳನ್ನು ತಿಳಿಸಿಕೊಡಬೇಕು. ಮ್ಯಾಥ್ಸ್ಮೇನಿಯಾದಂತಹ ಕಾರ್ಯಕ್ರಮಗಳು ಪ್ರಾಯೋಗಿಕ ಕಲಿಕೆಗೆ ಪ್ರೋತ್ಸಾಹ ನೀಡುತ್ತದೆ. ಹೀಗಾಗಿ ಗಣಿತ ವಿಷಯ ಸುಲಭವಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಲ್ಲಾ ಕ್ಷೇತ್ರಕ್ಕೂ ಗಣಿತ ಅಗತ್ಯ: ಬಿಇಒ ಮರೀಗೌಡ ಮಾತನಾಡಿ, ಮಕ್ಕಳಲ್ಲಿ ಗಣಿತ ವಿಷಯದ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ಗಣಿತ ಉತ್ಸವ ಯಶಸ್ವಿಯಾಗಿದೆ. ಗಣಿತ ವಿಷಯವನ್ನು ಆಸಕ್ತಿಯಿಂದ ಕಲಿತರೆ ಅದರಷ್ಟು ಸುಲಭದ ವಿಷಯ ಬೇರೊಂದಿಲ್ಲ. ಗಣಿತ ಎಲ್ಲಾ ಕ್ಷೇತ್ರಕ್ಕೂ ಅವಶ್ಯವಿದೆ. ಆದ್ದರಿಂದ ಈ ವಿಷಯಕ್ಕೆ ಹೆಚ್ಚು ಒತ್ತು ನೀಡಿ, ವಿದ್ಯಾರ್ಥಿಗಳಿಗೆ ತಿಳಿಸಬೇಕಾಗಿದೆ. ವಿದ್ಯಾರ್ಥಿಗಳ ಅಂಕ ಗಳಿಕೆಗೆ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದ್ದು, ಕಲಿಕೆಯ ಆಸಕ್ತಿ ಮಕ್ಕಳಲ್ಲಿಯೂ ಇರಬೇಕು. ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ಉದಾಹರಣೆ ಸಹಿತವಾಗಿ ವಿವರಣೆ ನೀಡಬೇಕು. ಆಗ ಮಕ್ಕಳು ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಪ್ರಾಯೋಗಿಕ ಸಾಮರ್ಥ್ಯ ಹೆಚ್ಚಳ: ಹೋಲಿ ಕ್ರೆಸೆಂಟ್ ಇಂಗ್ಲಿಷ್‌ ಶಾಲೆಯ ಕಾರ್ಯದರ್ಶಿ ಅಲ್ತಾಫ್ ಅಹಮದ್‌ ಮಾತನಾಡಿ, ನಿರೀಕ್ಷಿಸಿ ಮತ್ತು ಪರೀಕ್ಷಿಸಿ ನಡೆಸುವ ಕಲಿಕಾ ಚಟುವಟಿಕೆಗಳು ಮಕ್ಕಳ ನಿರೀಕ್ಷನಾ ಸಾಮರ್ಥ್ಯ ಹಾಗೂ ಪ್ರಾಯೋಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಈ ವೇಳೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಪಿ. ಸೋಮಲಿಂಗಯ್ಯ, ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಪಟೇಲ್ ಸಿ.ರಾಜು, ಪ್ರಾಂಶುಪಾಲರಾದ ಅಲಾØಜ್‌ ಶಾಜಿಯಾ, ಸಮನ್ವಯಾಧಿಕಾರಿ ಸ್ಟ್ಯಾನ್ಲಿ ಪಾಲ್, ಮುಖ್ಯಶಿಕ್ಷಕಿ ಲತಾ ಆನಂದ್‌, ಗ್ರೇಸ್‌ ರೇಷ್ಮ ಪಾಲ್ಗೊಂಡಿದ್ದರು.

Advertisement

ಗಣಿತ ಉತ್ಸವದಲ್ಲಿ ಏನೇನಿತ್ತು?:

ಗಣಿತ ಉತ್ಸವ – ಮ್ಯಾಥ್ಸ್ಮೇನಿಯಾದಲ್ಲಿ ಪೈಥಾಗೊರಸ್‌ನ ಪ್ರಮೇಯದ ಮಾದರಿಗಳು, ತ್ರಿಕೋನ ಮಿತಿಯ ಅನುಪಾತಗಳು, ಬ್ಯಾಂಕಿಂಗ್‌ ವ್ಯವಸ್ಥೆ, ಪೈ ಮೌಲ್ಯ, ದಿನ ದಿನಾಂಕಗಳನ್ನು ಪತ್ತೆ ಹಚ್ಚುವ ಬಗೆ, ಜ್ಯಾಮಿತಿ, ಟಿಎಂಸಿ ಹಾಗೂ ಕ್ಯೂಸೆಕ್‌ನ ಅಳತೆಗಳು, ಸಮಾನುಪಾತ, ನೇಪಿಯರ್‌ ಬೋನ್ಸ್‌ ಸರಳವಾಗಿ ಲ.ಸಾ.ಅ ಕಂಡು ಹಿಡಿಯುವ ರೀತಿ, ನಿಮ್ಮ ವಯಸ್ಸು ನಮಗೆ ಗೊತ್ತಿದೆ- ಹೀಗೆ ಹಲವು ಗಣಿತದ ಚಮತ್ಕಾರಗಳನ್ನು ಅನಾವರಣಗೊಂಡಿದ್ದವು.

 ಗಣಿತ ವಿಷಯದ ಕೆಲವು ಸಂಕಿರಣ ವಿಚಾರಗಳನ್ನು ಸರಳವಾಗಿ ತಿಳಿದುಕೊಳ್ಳಲು ಗಣಿತ ಉತ್ಸವ ಸಹಕಾರಿಯಾಗಿದೆ ಎಂದು ಮಂಡ್ಯ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ.ಎಂ.ಎಸ್‌ ಮಹದೇವನಾಯ್ಕ ತಿಳಿಸಿದರು. ನಗರದ ಹೋಲಿ ಕ್ರೆಸೆಂಟ್ ಆಂಗ್ಲ ಶಾಲೆಯಲ್ಲಿ ಆಯೋಜಿಸಲಾಗಿದ್ದ ಮ್ಯಾಥ್ಸ್ಮೇನಿಯಾ -ಗಣಿತ ಉತ್ಸವ ವಸ್ತು ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅವರು ಮಾತನಾಡಿ, ಗಣಿತ ಉತ್ಸವ ಸಲಭವಾಗಿ ಹೇಗೆ ಬೋಧಿಸಬಹುದು ಎಂಬುದನ್ನು ಶಿಕ್ಷಕರು ಸಹ ಅರಿಯಲು ಸಹಕಾರಿಯಾಗಿದೆ. ಸ್ವಯಂ ಮಕ್ಕಳೇ ಮಾದರಿಗಳನ್ನು ರಚಿಸಿರುವುದರಿಂದ ಅವರಲ್ಲಿ ಹಲವಾರು ವಿಚಾರಗಳಲ್ಲಿ ಸಂಪೂರ್ಣ ಜ್ಞಾನ ಪಡೆಯಲು ಸಹಕಾರಿಯಾಗಿದೆ ಎಂದು ಹೇಳಿದರು. ಭಾರತದ ವಿಜ್ಞಾನಿ ಶ್ರೀನಿವಾಸ ರಾಮಾನುಜನ್‌ ಅವರ ಬಗ್ಗೆ ಮಾಹಿತಿ ಕೊಟ್ಟರು. ಈ ವೇಳೆ ಶಾಲೆ ಕಾರ್ಯದರ್ಶಿ, ಪ್ರಾಂಶುಪಾಲರು, ಶಿಕ್ಷಕರು ಇದ್ದರು.
Advertisement

Udayavani is now on Telegram. Click here to join our channel and stay updated with the latest news.

Next