Advertisement

 ಭತ್ತದ ಕಟಾವಿನಲ್ಲಿ ಕೈ ಜೋಡಿಸುವ ಮೂಲಕ ಮಾದರಿ

12:28 PM Dec 26, 2018 | Team Udayavani |

ಉಳ್ಳಾಲ : ಕೃಷಿ ಕಾರ್ಯದಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವುದು ಸಾಮಾನ್ಯ ಆದರೆ ಇಲ್ಲೊಂದೆಡೆ ವಿದ್ಯಾರ್ಥಿಗಳು ನಾಟಿ ಮಾಡಿದ ಭತ್ತದ ಬೆಳೆಯನ್ನು ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರುಗಳೇ ಸ್ವತಃ ಗದ್ದೆಗಿಳಿದು ಭತ್ತದ ಕಟಾವು ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಾದರಿ ಕಾರ್ಯ ನಡೆಸಿದ್ದಾರೆ.

Advertisement

ಸೋಮೇಶ್ವರ ಗ್ರಾಮದ ಬಾರ್ದೆ ಬಳಿ ಬಿ.ನಾರಾಯಣ ಕುಂಪಲ ನೇತೃತ್ವದಲ್ಲಿ ಸೇವಾ ಭಾರತಿ ಉಳ್ಳಾಲ ಕ್ಷೇತ್ರ ಸಮಿತಿ ಆಶ್ರಯದಲ್ಲಿ ಸುಮಾರು ಎರಡು ಎಕರೆ ಗದ್ದೆಯಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ನಾಟಿ ಕಾರ್ಯ ನಡೆಸಿದ್ದರು. ಕೊಯ್ಲು ಕಾರ್ಯದಲ್ಲೂ ಕಿಟ್ಟೆಲ್‌ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಗಳು ಸಹಿತ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು, ಉಳಿದ ಗದ್ದೆಯ ಕೊಯ್ಲನ್ನು ಕಿಟ್ಟೆಲ್‌ ಪ.ಪೂ. ಕಾಲೇಜಿನ ಪ್ರಾಂಶುಪಾಲ ವಿಠಲ್‌ ಎ. ಅವರ ಮಾರ್ಗದರ್ಶನದಲ್ಲಿ ದ.ಕ. ಜಿಲ್ಲಾ ಪ.ಪೂ. ಕಾಲೇಜುಗಳ ಪ್ರಾಚಾರ್ಯರ ಸಂಘದ ನೇತೃತ್ವದಲ್ಲಿ ಜಿಲ್ಲೆಯ 30 ಮಂದಿ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ವಿದ್ಯಾರ್ಥಿಗಳು ಬೆಳೆಸಿದ ಭತ್ತದ ಪೈರನ್ನು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನದವರೆಗೆ ಕಟಾವಿನಲ್ಲಿ ಕೈ ಜೋಡಿಸುವ ಮೂಲಕ ಮಾದರಿಯಾದರು. ಕಟಾವು ಕಾರ್ಯದಲ್ಲಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರಭಾರ ಉಪ ನಿರ್ದೇಶಕಿ ಎಲ್ವಿರಾ ಫಿಲೋ ಮಿನಾ, ಪ್ರಾಚಾರ್ಯರ ಸಂಘದ ಅಧ್ಯಕ್ಷ ಕೆ.ಕೆ.ಉಪಾಧ್ಯಾಯ, ಉಪಾಧ್ಯಕ್ಷರುಗಳಾದ ಉಮೇಶ್‌ ಕರ್ಕೇರ, ಶರ್ಮಿಳಾ ರಾವ್‌, ಕಾರ್ಯದರ್ಶಿ ಯೂಸುಫ್‌ ಉಪಸ್ಥಿತರಿದ್ದರು.

ರೈತರ ಬವಣೆಯ ಅರಿವು
ಕಳೆದ ಹಲವು ವರ್ಷಗಳಿಂದ ಕಿಟ್ಟೆಲ್‌ ಕಾಲೇಜಿನ ವಿದ್ಯಾರ್ಥಿಗಳನ್ನು ಭತ್ತದ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಾ ಬಂದಿದ್ದು, ಬಾರ್ದೆಯಲ್ಲೂ ವಿದ್ಯಾರ್ಥಿಗಳು ನಾಟಿ ಕಾರ್ಯ ಮತ್ತು ಕೊಯ್ಲಿವನಲ್ಲಿ ಭಾಗವಹಿಸಿದ್ದಾರೆ. ಮಕ್ಕಳಿಗೆ ಅನ್ನದ ಮಹತ್ವ ತಿಳಿಸಲು ಮತ್ತು ರೈತರ ಭವಣೆ ಅರಿವಾಗಲು ಇದೊಂದು ವಿನೂತನ ಕಾರ್ಯಕ್ರಮವಾಗಿದ್ದು, ಪ್ರಥಮ ಬಾರಿಗೆ ಪ್ರಾಂಶುಪಾಲರುಗಳು ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
 - ವಿಟ್ಠಲ ಎ., ಪ್ರಾಂಶುಪಾಲರು,
ಕಿಟ್ಟೆಲ್‌ ಪ.ಪೂ. ಕಾಲೇಜು ಗೋರಿಗುಡ್ಡೆ

ಕೃಷಿ ಕ್ರಾಂತಿ
ಮಕ್ಕಳು ಮುಂದೆ ಬರಬೇಕು ಅನ್ನುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಭತ್ತ ಬೆಳೆಯಲು ಎಷ್ಟು ಕಷ್ಟವಿದೆ ಅನ್ನುವುದು ಗೊತ್ತಾಗಿದೆ. ಅನ್ನ ಬಿಸಾಡುವ ಮೊದಲು ಆಲೋಚಿಸಬೇಕಿದೆ. ಜಿಲ್ಲೆಯ ಜನರಿಗೆ ಭತ್ತ ಇಲ್ಲಿಂದಲೇ ಸಿಗುವಂತಹ ಕೃಷಿ ಕ್ರಾಂತಿ ಆಗಲಿ. 
– ಶರ್ಮಿಳಾ ರಾವ್‌, ಪ್ರಾಂಶುಪಾಲರು
ಪಾಂಡ್ಯರಾಜ್‌ ಬಲ್ಲಾಳ್‌ ಪ.ಪೂ. ಕಾಲೇಜು

ಒಳ್ಳೆಯ ಸಂದೇಶ
ಕೂಲಿ ಕಾರ್ಮಿಕರ ಸಮಸ್ಯೆಯಿಂದ ಕೃಷಿಕರು ಹೈರಾಣಾಗಿದ್ದಾರೆ. ಈ ನಿಟ್ಟಿನಲ್ಲಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಸಲುವಾಗಿ ಪ್ರಾಚಾರ್ಯರ ಸಂಘ ಅವರೊಂದಿಗೆ ಕೈ ಜೋಡಿಸಿದೆ. ವಿದ್ಯಾರ್ಥಿಗಳಿಗೆ ಇದೊಂದು ಒಳ್ಳೆಯ ಸಂದೇಶ. ತಿನ್ನುವಂತಹ ಆಹಾರ ಬೆಳೆಸಲು ಎಷ್ಟು ಕಷ್ಟವಿದೆ ಅನ್ನುವುದು ಗೊತ್ತಾಗುತ್ತದೆ.
– ವಿಷ್ಣುಮೂರ್ತಿ,
ಪ್ರಾಂಶುಪಾಲರು ಸರಕಾರಿ ಪ.ಪೂ. ಕಾಲೇಜು ಮೂಲ್ಕಿ

Advertisement
Advertisement

Udayavani is now on Telegram. Click here to join our channel and stay updated with the latest news.

Next