ಒಂದು ದೊಡ್ಡ ಗ್ಯಾಪ್‌ನ ನಂತರ ನಾಯಕ ಚೇತನ್ ಚಂದ್ರ ಅಭಿನಯದ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗಿದೆ. ಅದು “ಪ್ರಭುತ್ವ’. ಹೀಗೊಂದು ಸಿನಿಮಾ ನಿಧಾನವಾಗಿ ಸದ್ದು ಮಾಡುತ್ತಿದ್ದು, ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
ಗಟ್ಟಿ ಕಥಾಹಂದರವೊಂದಿರುವ ಸುಳಿವನ್ನು ಟ್ರೇಲರ್‌ನಲ್ಲಿ ನೀಡಿರುವ ಚಿತ್ರತಂಡ ಈಗ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಚಿತ್ರದ ಕಥೆ ಬರೆದಿರುವ ಮೇಘಡಹಳ್ಳಿ ಡಾ.ಶಿವಕುಮಾರ್ ಅವರಿಗೆ ಈ ಸಿನಿಮಾ ಇವತ್ತಿನ ಕಾಲಘಟ್ಟಕ್ಕೆ ಹೆಚ್ಚು ಸೂಕ್ತವಾಗಿದೆ ಎಂಬ ವಿಶ್ವಾಸ. ಈ ಕುರಿತು ಮಾತನಾಡುವ ಅವರು, “ಪ್ರತಿಯೊಬ್ಬ ಪ್ರಜೆ ಈ ಚಿತ್ರವನ್ನು ನೋಡಬೇಕು. ಮತದಾನ ಅಮೂಲ್ಯವಾದುದು. ಹಾಗಾಗಿ ಮತದಾನವನ್ನು ಮಾರಾಟ ಮಾಡಿಕೊಳ್ಳಬಾರದು. ಈ ರೀತಿ ಮತದಾನದ ಮಹತ್ವ ಸಾರುವ ಈ ಸಿನಿಮಾಗೆ ನಾನೇ ಕಥೆ ಬರೆದಿದ್ದೇನೆ. ನನ್ನ ಮಗ ರವಿರಾಜ್ ಎಸ್ ಕುಮಾರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ’ ಎಂದರು.
ನಿರ್ಮಾಪಕ ರವಿರಾಜ್ ಮಾತನಾಡಿ, “ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ಕೂಡ ತೆರೆಗೆ ಬರಲಿದೆ. ಚುನಾವಣೆ ಮುಂಚೆಯೇ ಚಿತ್ರವನ್ನು ಬಿಡುಗಡೆ ಮಾಡುವ ಪ್ರಯತ್ನ ನಡೆಯುತ್ತಿದೆ’ ಎಂದು ನಿರ್ಮಾಪಕ ರವಿರಾಜ್ ಎಸ್ ಕುಮಾರ್ ತಿಳಿಸಿದರು. ಚಿತ್ರದ ಕಥಾಹಂದರದ ಬಗ್ಗೆ ಪರಿಚಯ ನೀಡಿದ್ದ, ನಿರ್ದೇಶಕ ಆರ್. ರಂಗನಾಥ್, ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ತಮ್ಮ ತಂಡಕ್ಕೆ ಧನ್ಯವಾದ ಹೇಳಿದರು.
ನಾಯಕ ಚೇತನ್ ಚಂದ್ರ ಮಾತನಾಡಿ, “ಇದು ನನ್ನ ಹನ್ನೆರಡನೇ ಸಿನಿಮಾ. ಮೇಘಡಹಳ್ಳಿ ಡಾ.ಶಿವಕುಮಾರ್ ಅವರು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಒಳ್ಳೆಯ ಕಥೆ ಬರೆದಿದ್ದಾರೆ. ರಂಗನಾಥ್ ಅಷ್ಟೇ ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ. ತಂತ್ರಜ್ಞರ ಕಾರ್ಯವೈಖರಿ ಹಾಗೂ ಎಲ್ಲಾ ಕಲಾವಿದರ ಅಭಿನಯ ಅದ್ಭುತವಾಗಿದೆ’ ಎಂದು ಸಿನಿಮಾ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ನಾಯಕಿ ಪಾವನಾ ಈ ಚಿತ್ರದಲ್ಲಿ ಅನು ಎಂಬ ಸಖತ್ ಗ್ಲಾಮರಸ್ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಚಿತ್ರದಲ್ಲಿ ನಟಿಸಿರುವ ಅರವಿಂದ್ ರಾವ್, ಹರೀಶ್ ರಾಯ್, ಆದಿ ಲೋಕೇಶ್, ವಿಜಯ್ ಚೆಂಡೂರ್, ವೀಣಾ ಸುಂದರ್, ಅನಿತಾ ಭಟ್ ಮುಂತಾದ ಕಲಾವಿದರು ಹಾಗೂ ಸಂಭಾಷಣೆ ಬರೆದಿರುವ ವಿನಯ್ “ಪ್ರಭುತ್ವ’ ಚಿತ್ರದ ಕುರಿತು ಮಾತನಾಡಿದರು.
ಚಿತ್ರಕ್ಕೆ ಎಮಿಲ್ ಸಂಗೀತ ನಿರ್ದೇಶನ, ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಅವರ ಸಂಕಲನವಿದೆ.