ಬೀದರ: ಕಾರ್ಯ ಕ್ಷಮತೆ ಮೂಲಕ ಮೂಕ ಪ್ರಾಣಿಗಳ ಧ್ವನಿಯಾಗುವ ಪ್ರಯತ್ನ ಮಾಡಿದ್ದ ಸಚಿವ ಪ್ರಭು ಚವ್ಹಾಣ ಮತ್ತೂಮ್ಮೆ ಪಶು ಸಂಗೋಪನಾ ಇಲಾಖೆಯ ನೊಗ ಹೊರುವ ಸಾಧ್ಯತೆ ದಟ್ಟವಾಗಿದೆ. ಸಮರ್ಥ ನಿರ್ವಹಣೆ ಜತೆಗೆ ಆಸಕ್ತಿಯ ಖಾತೆಯೂ ಆಗಿರುವುದರಿಂದ ಬಹುತೇಕ ಪಶು ಇಲಾಖೆ ಖಾತೆ ಸಿಗುವುದು ಖಚಿತ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟದಲ್ಲಿ ಔರಾದ ಕ್ಷೇತ್ರದ ಶಾಸಕ ಪ್ರಭು ಚವ್ಹಾಣ ಎರಡನೇ ಬಾರಿಗೆ ಮಂತ್ರಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಪಕ್ಷ ನಿಷ್ಠೆ, ಪಶು ಸಂಕುಲ ರಕ್ಷಣೆ ಜತೆಗೆ ಪಶು ಸಂಗೋಪನೆ ಮತ್ತು ವೈದ್ಯಕೀಯ ಇಲಾಖೆಗೆ ಹೊಸ ಆಯಾಮ ನೀಡಿದ ಪರಿಣಾಮ ಬಿಜೆಪಿ ಹೈಕಮಾಂಡ್ ಅವರ ಕೈ ಹಿಡಿದಿದೆ. ಎರಡು ವರ್ಷ ಸಚಿವರಾಗಿದ್ದ ಪ್ರಭು, ಹಲವು ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಮೂಲಕ ಪಶು ಇಲಾಖೆಗೆ ಕಾಯಕಲ್ಪ ನೀಡುವ ಪ್ರಯತ್ನ ಮಾಡಿರುವುದು ವಿಶೇಷ.
ಪ್ರಭು ಚವ್ಹಾಣ ಅವರು “ಗೋ ಮಾತೆ-ನನ್ನ ಮಾತೆ’ ಎಂದು ಸದಾ ಜಪಿಸುವದಷ್ಟೇ ಅಲ್ಲ “ಗೋ ಮಾತೆ’ ಹೆಸರಿನಲ್ಲೇ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಗೋವುಗಳ ಪರವಾದ ತಮ್ಮ ಪ್ರೀತಿ, ಭಕ್ತಿಯನ್ನು ಸಾಬೀತು ಮಾಡಿದ್ದಾರೆ. ವಿಶೇಷವಾಗಿ ಯಡಿಯೂರಪ್ಪ ನೇತೃತ್ವದ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಜತೆಗೆ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ವಾರ್ ರೂಂ ಸ್ಥಾಪಿಸಿ ಪ್ರಾಣಿಗಳ ಮೂಕರೋದನೆ ತಡೆಯುವ ಪ್ರಯತ್ನ ಮಾಡಿದ್ದಾರೆ. ಪಶು ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸಿ ಪಶು ವೈದ್ಯಕೀಯ ಇಲಾಖೆಯನ್ನು ರೈತರ ಮನೆ ಬಾಗಿಲಿಗೆ ತರುವ ಮೂಲಕ ಮೆಚ್ಚುಗೆಗೆ
ಪಾತ್ರರಾಗಿದ್ದಾರೆ.
ಪಶು ಇಲಾಖೆಯ ಕಾರ್ಯವೈಖರಿಯಿಂದ ಹೈಕಮಾಂಡ್‌ನ ಮೆಚ್ಚುಗೆಗೆ ಪಾತ್ರರಾಗಿರುವ ಚವ್ಹಾಣ, ಮತ್ತೂಮ್ಮೆ ಈ ಹಿಂದಿನ ಖಾತೆಯನ್ನೇ ನೀಡುವಂತೆ ಮನವಿ ಮಾಡಿದ್ದಾರೆ. ಇಲಾಖೆಯಲ್ಲಿ ತಾವು ರೂಪಿಸಿರುವ ಯೋಜನೆ, ಕೆಲಸಗಳು ಬಾಕಿ ಉಳಿದಿದ್ದು, ಅವುಗಳನ್ನು ಪೂರ್ಣಗೊಳಿಸಬೇಕಾಗಿದೆ. ಹಾಗಾಗಿ ಪಶು ಸಂಗೋಪನಾ ಖಾತೆ ಜವಾಬ್ದಾರಿ ವಹಿಸಬೇಕು ಎಂದು ಬೇಡಿಕೆಯನ್ನಿಟ್ಟಿದ್ದಾರೆ. ಇದಕ್ಕೆ ಪಕ್ಷದ ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗುತ್ತಿದೆ.
ಪಶು ಸಂಗೋಪನಾ ಮತ್ತು ವೈದ್ಯಕೀಯ ಇಲಾಖೆ ಮಂತ್ರಿಯಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದೇನೆ. ಇಲಾಖೆಯಲ್ಲಿ ಇನ್ನೂ ಕೆಲಸಗಳು ಬಾಕಿ ಉಳಿದಿದ್ದು, ಅವುಗಳನ್ನು ಪೂರ್ಣಗೊಳಿಸಬೇಕಾಗಿದೆ. ಹಾಗಾಗಿ ನನಗೆ ಈ ಹಿಂದಿನ ಖಾತೆಯನ್ನು ವಹಿಸಬೇಕು ಎಂದು ಪಕ್ಷದ ವರಿಷ್ಠರು, ಸಿಎಂಗೆ ಮನವಿ ಮಾಡಿದ್ದೇನೆ. ಬೇರೆ ಯಾವುದೇ ಖಾತೆ ನೀಡಿದರೂ ಸರಿ, ಅದನ್ನು ನಿರ್ವಹಿಸುತ್ತೇನೆ.
ಪ್ರಭು ಚವ್ಹಾಣ,
ನೂತನ ಸಚಿವ
ಶಶಿಕಾಂತ ಬಂಬುಳಗ