Advertisement

ಪ್ರಭುದೇಸಾಯಿ ಅಜೇಯ ಶತಕ- ಕರ್ನಾಟಕ-ಗೋವಾ ಪಂದ್ಯ ಡ್ರಾ

11:01 PM Jan 22, 2024 | Team Udayavani |

ಮೈಸೂರು: ಆರಂಭಕಾರ ಸುಯಶ್‌ ಪ್ರಭು ದೇಸಾಯಿ ಅವರ ಅಜೇಯ ಶತಕದ ನೆರವಿಂದ ಆತಿಥೇಯ ಕರ್ನಾಟಕದ ಬೌಲರ್‌ಗಳಿಗೆ ಬೆವರಿಳಿಸಿದ ಗೋವಾ, “ಸಿ’ ವಿಭಾಗದ ರಣಜಿ ಪಂದ್ಯವನ್ನು ಡ್ರಾಗೊಳಿಸುವಲ್ಲಿ ಯಶಸ್ವಿಯಾಗಿದೆ.

Advertisement

177 ರನ್ನುಗಳ ಹಿನ್ನಡೆಗೆ ಸಿಲುಕಿದ ಗೋವಾ ದ್ವಿತೀಯ ಸರದಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶಿಸಿ ಕರ್ನಾಟಕದ ಗೆಲುವಿನ ಯೋಜನೆ ಯನ್ನು ತಲೆಕೆಳಗಾಗಿಸಿತು. ಮೊದಲ ಇನ್ನಿಂಗ್ಸ್‌ ಮುನ್ನಡೆ ಗಾಗಿ 3 ಅಂಕ ಸಂಪಾದಿಸಿದ್ದಷ್ಟೇ ಮಾಯಾಂಕ್‌ ಅಗರ್ವಾಲ್‌ ಪಡೆಯ ಪಾಲಿಗೆ ಸಮಾ ಧಾನಕರ ಸಂಗತಿ ಎನಿಸಿತು.

ಗುಜರಾತ್‌ ವಿರುದ್ಧ ಗೆಲ್ಲಬಹುದಾಗಿದ್ದ ಪಂದ್ಯ ವನ್ನು ಕಳೆದುಕೊಂಡಿದ್ದ ಕರ್ನಾಟಕಕ್ಕೆ ತುರ್ತಾಗಿ ಜಯವೊಂದರ ಅಗತ್ಯವಿತ್ತು. “ಸಾಮಾನ್ಯ ತಂಡ’ ವಾಗಿರುವ ಗೋವಾ ವಿರುದ್ಧ ಇದು ಒಲಿದೀತೆಂಬ ನಿರೀಕ್ಷೆ ಇತ್ತು. ಆದರೆ ಇದು ಫ‌ಲಿಸಲಿಲ್ಲ.

ಫ‌ಲಿಸದ ನಿರೀಕ್ಷೆ
ಗೋವಾದ 321 ರನ್ನುಗಳ ಮೊದಲ ಇನ್ನಿಂಗ್ಸ್‌ಗೆಉತ್ತರವಾಗಿ ಕರ್ನಾಟಕ 9ಕ್ಕೆ 498 ರನ್‌ ಪೇರಿಸಿ ಡಿಕ್ಲೇರ್‌ ಮಾಡಿತ್ತು. 3ನೇ ದಿನದಾಟದ ಅಂತ್ಯಕ್ಕೆ ಗೋವಾ ಒಂದು ವಿಕೆಟಿಗೆ 93 ರನ್‌ ಮಾಡಿತ್ತು. ಸೋಮವಾರ ಇದೇ ಮೊತ್ತಕ್ಕೆ ಕೀಪರ್‌ ಕೃಷ್ಣಮೂರ್ತಿ ಸಿದ್ಧಾರ್ಥ್ ಅವರ ವಿಕೆಟ್‌ ಬಿದ್ದಾಗ, ಮೊದಲ ಸರದಿಯ ಟಾಪ್‌ ಸ್ಕೋರರ್‌ ಸ್ನೇಹಲ್‌ ಕೌಥನ್ಕರ್‌ (8) ಕೂಡ ಪೆವಿಲಿಯನ್‌ ಸೇರಿಕೊಂಡಾಗ ನಮ್ಮ ಬೌಲರ್ ಯಶಸ್ಸು ಸಾಧಿಸುವ ನಿರೀಕ್ಷೆ ಮೂಡಿತು. 93ಕ್ಕೆ 3 ಎಂಬ ಸ್ಥಿತಿ ಗೋವಾದ್ದಾಗಿತ್ತು. ಆದರೆ ಪ್ರಭುದೇಸಾಯಿ ಪಟ್ಟು ಸಡಿಲಿಸಲಿಲ್ಲ. ದಿನವಿಡೀ ಕ್ರೀಸ್‌ ಆಕ್ರಮಿಸಿಕೊಂಡರು. ಏಕಾಂಗಿಯಾಗಿ ಹೋರಾಟ ನಡೆಸಿ ತಂಡವನ್ನು ಸೋಲಿನಿಂದ ಪಾರು ಮಾಡಿದರು. ಪಂದ್ಯಕ್ಕೆ ಡ್ರಾ ಮುದ್ರೆ ಬೀಳುವ ವೇಳೆ ಗೋವಾ 6 ವಿಕೆಟ್‌ ನಷ್ಟಕ್ಕೆ 282 ರನ್‌ ಮಾಡಿತ್ತು.

34 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ಸುಯಶ್‌ ಪ್ರಭುದೇಸಾಯಿ 143 ರನ್‌ ಬಾರಿಸಿ ಔಟಾ ಗದೆ ಉಳಿದರು. ಎದುರಿಸಿದ್ದು 289 ಎಸೆತ. ಇವರ ಆಪತ್ಕಾಲದ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಒಳಗೊಂಡಿತ್ತು.

Advertisement

ಗೋವಾ ಭರ್ತಿ 100 ಓವರ್‌ ಎದುರಿಸಿದ ಬಳಿಕ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ನಿರ್ಧರಿಸ ಲಾಯಿತು. ಆಗ ಗೋವಾ 105 ರನ್ನುಗಳ ಮುನ್ನಡೆಯಲ್ಲಿತ್ತು.

ತ್ರಿಪುರ ಎದುರಾಳಿ
ಕರ್ನಾಟಕದ ಮುಂದಿನ ಎದುರಾಳಿ ತ್ರಿಪುರ. ಜ. 26ರಿಂದ ಅಗರ್ತಲಾದಲ್ಲಿ ಈ ಮುಖಾಮುಖೀ ಏರ್ಪಡಲಿದೆ. ಅಜೇಯ ತ್ರಿಪುರ 9 ಅಂಕ ಹೊಂದಿದ್ದು, “ಸಿ’ ವಿಭಾಗದ ದ್ವಿತೀಯ ಸ್ಥಾನದಲ್ಲಿದೆ. ಗುಜರಾತ್‌ ಅಗ್ರಸ್ಥಾನಲ್ಲಿದ್ದರೆ (12 ಅಂಕ), ಕರ್ನಾಟಕ ತೃತೀಯ ಸ್ಥಾನಿಯಾಗಿದೆ (9 ಅಂಕ).

Advertisement

Udayavani is now on Telegram. Click here to join our channel and stay updated with the latest news.

Next