Advertisement

ಮಾಯಾಕನ್ನಡಿಯೊಳಗೆ ಪ್ರಭು ಬಿಂಬ!

12:58 PM Jul 18, 2019 | Lakshmi GovindaRaj |

ಕಳೆದ ಎರಡು ವರ್ಷಗಳ ಹಿಂದಷ್ಟೇ “ಊರ್ವಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ನಟ ಪ್ರಭು ಮುಂಡಕೂರ್‌, ಕೇವಲ ಎರಡು ವರ್ಷಗಳಲ್ಲಿ “ಊರ್ವಿ’, “ಡಬಲ್‌ ಇಂಜಿನ್‌’, “ಮಂಜರಿ’, “ಒಮ್ಮೆ ನಿಶ್ಯಬ್ಧ ಒಮ್ಮೆ ಯುದ್ದ’ ಹಾಗು ಇತ್ತೀಚೆಗೆ ತೆರೆಕಂಡ “ಡಾಟರ್‌ ಆಫ್ ಪಾರ್ವತಮ್ಮ’ ಚಿತ್ರ ಸೇರಿದಂತೆ ಎಂಟಕ್ಕೂ ಹೆಚ್ಚು ಚಿತ್ರಗಳಲ್ಲಿ ವಿವಿಧ ಪಾತ್ರಗಳ ಮೂಲಕ ಕಾಣಿಸಿಕೊಂಡಿದ್ದು, ಈಗ ಬಿಡುಗಡೆಗೆ ಸಜ್ಜಾಗಿರುವ “ಮಾಯಾಕನ್ನಡಿ’ಯಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ.

Advertisement

“ಮಾಯಾಕನ್ನಡಿ’ ಸದ್ಯದ ಮಟ್ಟಿಗೆ ಸುದ್ದಿಯಾಗುತ್ತಿರುವ ಚಿತ್ರ. ಕಾರಣ, ಕಳೆದ ಎರಡು-ಮೂರು ವರ್ಷಗಳಿಂದ ಇಂಟರ್‌ನೆಟ್‌ನಲ್ಲಿ ಸಂಚಲನವನ್ನೇ ಮೂಡಿಸಿರುವ ಬ್ಲೂವೇಲ್‌ ಗೇಮ್‌ ಕುರಿತಾದ ಕಥಾಹಂದರ ಈ ಚಿತ್ರದಲ್ಲಿದೆ ಎಂಬುದು. ಅಂದಹಾಗೆ, “ಇದೊಂದು ಸಸ್ಪೆನ್ಸ್‌, ಕ್ರೈಂ-ಥ್ರಿಲ್ಲರ್‌ ಸಬ್ಜೆಕ್ಟ್ ಚಿತ್ರ. ನಮ್ಮ ಸುತ್ತ ಮುತ್ತ ನಡೆದ ಹಲವು ನೈಜ ಘಟನೆಗಳನ್ನೇ ಇಟ್ಟುಕೊಂಡು ಈ ಚಿತ್ರ ಮಾಡಲಾಗಿದೆ. ಚಿತ್ರದಲ್ಲಿ ನಾಯಕನ ಗೆಳೆಯರು ಇದ್ದಕ್ಕಿದ್ದಂತೆ ಆತ್ಮಹತ್ಯೆ ಹಾದಿ ಹಿಡಿಯುತ್ತಿರುತ್ತಾರೆ. ಆದರೆ, ಅವರ ಆತ್ಮಹತ್ಯೆಯ ಹಿಂದಿನ ಕಾರಣವನ್ನು ಹುಡುಕುವ ಸ್ಟುಡೆಂಟ್‌ ಪಾತ್ರವನ್ನು ಪ್ರಭು ನಿರ್ವಹಿಸಿದ್ದಾರಂತೆ.

ಇನ್ನು, ಈ “ಮಾಯಾಕನ್ನಡಿ’ಯಲ್ಲಿ ಹಿರಿಯ ನಟ ಕೆ.ಎಸ್‌ ಶ್ರೀಧರ್‌, ಅಶ್ವಿ‌ನ್‌ರಾವ್‌, ಅನ್ವೀತಾ ಸಾಗರ್‌, ಕಾಜಲ್‌ ಕುಂದರ್‌ ಇತರರು ಕಾಣಿಸಿಕೊಂಡಿದ್ದಾರೆ. ಎಸ್‌.ಎನ್‌ ಅಭಿ ಸಂಗೀತವಿದೆ. ಆನಂದರಾಜ ವಿಕ್ರಮ ಹಿನ್ನೆಲೆ ಸಂಗೀತ ನೀಡಿದ್ದಾರೆ. ಮಂಗಳೂರಿನ ಸುತ್ತಮುತ್ತಲಿನ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. “ಮಾಯಾಕನ್ನಡಿ’ ಪ್ಲಾನ್‌ ಪ್ರಕಾರ ಎಲ್ಲವೂ ನಡೆದರೆ, ಸೆಪ್ಟೆಂಬರ್‌ ಅಥವಾ ಅಕ್ಟೋಬರ್‌ ವೇಳೆಗೆ ತೆರೆಗೆ ಬರುವ ಸಾಧ್ಯತೆ ಇದೆ ಎಂಬುದು ಪ್ರಭು ಮುಂಡಕೂರ್‌ ಮಾತು.

ಪ್ರಭು ಮುಂಡಕೂರ್‌ ಅವರು “ಮೈಸೂರು ಡೈರೀಸ್‌’, “ರಿಲ್ಯಾಕ್ಸ್‌ ಸತ್ಯ’, “ರಾಂಚಿ’ ಚಿತ್ರಗಳಲ್ಲೂ ನಟಿಸಿದ್ದಾರೆ. “ರಿಲ್ಯಾಕ್ಸ್‌ ಸತ್ಯ’ ಕ್ರೈಂ, ಕಾಮಿಡಿ-ಥ್ರಿಲ್ಲರ್‌ ಚಿತ್ರವಾಗಿದ್ದು, ಅವರು ಆ ಚಿತ್ರದಲ್ಲಿ ಸತ್ಯ ಎನ್ನುವ ಪಾತ್ರ ನಿರ್ವಹಿಸಿದ್ದಾರಂತೆ. ಇನ್ನು, ಮಾನ್ವಿತಾ ಅವರು ನಾಯಕಿಯಾಗಿ ನಟಿಸಿದ್ದಾರೆ. “ಮೈಸೂರು ಡೈರೀಸ್‌’ ಚಿತ್ರದಲ್ಲಿ ಅಮೆರಿಕಾದಿಂದ ಬರುವ ಹುಡುಗನಾಗಿ ಕಾಣಿಸಿಕೊಂಡಿರುವ ಪ್ರಭು ಅವರಿಗೆ ಪಾವನಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು “ರಾಂಚಿ’ ಕೆಲವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ನೈಜ ಘಟನೆ ಆಧರಿತ ಚಿತ್ರವಾಗಿದ್ದು, ಇದರಲ್ಲಿ ಪ್ರಭು ನಿರ್ದೇಶಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದರಲ್ಲಿ ಬಹುತೇಕ ಎಲ್ಲಾ ಚಿತ್ರಗಳ ಚಿತ್ರೀಕರಣ ಪೂರ್ಣಗೊಂಡಿದ್ದು, ಇದೇ ವರ್ಷಾಂತ್ಯದೊಳಗೆ ತೆರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next